ಮೂಡುಬಿದರೆ: ರಾಷ್ಟ್ರಮಟ್ಟದಲ್ಲಿ ಮನ್ನಣೆಗಳಿಸಿರುವ ಮೂಡುಬಿದರೆ ಸ್ವರಾಜ್ಯ ಮೈದಾನ ಸಿಂಥೆಟಿಕ್ ಟ್ರ್ಯಾಕ್ ಸಮೀಪದಲ್ಲೇ ಅಂತಾರಾಷ್ಟ್ರೀಯ ಗುಣಮಟ್ಟದ ಸುಸಜ್ಜಿತ ಈಜುಕೊಳ ನಿರ್ಮಾಣಗೊಳ್ಳುತ್ತಿದೆ. ಈ ಮೂಲಕ ಜೆಲ್ಲೆಯ ಮೊದಲ ಅತ್ಯಾಧುನಿಕ ಈಜುಕೊಳವೆಂಬ ಹೆಗ್ಗಳಿಕೆಗೂ ಮೂಡುಬಿದರೆ ಈಜುಕೊಳ ಪ್ರಾಪ್ತವಾಗುತ್ತಿದೆ.
ಹೋಬಳಿ ಮಟ್ಟದಲ್ಲಿ ಅತ್ಯಾಧುನಿಕ ಈಜುಕೊಳ ನಿರ್ಮಾಣಗೊಳ್ಳುತ್ತಿರುವುದು ಸಧ್ಯಕ್ಕೆ ದಾಖಲೆ. 2.20 ಕೋಟಿ ವೆಚ್ಚ: ಕರ್ನಾಟಕ ಸರ್ಕಾರ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅನುದಾನ ನಿರ್ಮಾಣಗೊಳ್ಳುತ್ತಿರುವ ಈಜುಕೊಳದ ಅಂದಾಜು ವೆಚ್ಚ ರೂ.2.20 ಕೋಟಿ. 1500 ಚದರ ಮೀ. ವಿಸ್ತೀರ್ಣದ ಕಾಂಪ್ಲೆಕ್ಸ್ನಲ್ಲಿ ಹಿರಿಯರಿಗೆ ಹಾಗೂ ಮಕ್ಕಳಿಗೆ ಈಜಲು ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಗುಣಮಟ್ಟದ ಮಾನದಂಡದಲ್ಲಿರುವ 21*25(525 ಚದರ ಮೀ.) ವಿಸ್ತೀರ್ಣದ ಈಜುಕೊಳವನ್ನು ನಿರ್ಮಿ ಸಲಾಗುತ್ತಿದ್ದು, 1.8 ಮೀ ಅಳವಿರುತ್ತದೆ. 8 ಈಜುಗಾರರು ಏಕಕಾಲದಲ್ಲಿ ಈಜುವಂತಹ ಫಥವಿರುತ್ತದೆ. ಅದರ ಪಕ್ಕದಲ್ಲೇ 5 ವರ್ಷ ಕೆಳಗಿನ ಮಕ್ಕಳಿಗೆ ಈಜು ಕಲಿಯಲು ಸಹಕಾರಿಯಾಗುವಂತೆ 10*5 ಮೀ(50 ಚ.ಮೀ) ಈಜುಕೊಳ ನಿರ್ಮಿಸಲಾಗುತ್ತಿದ್ದು, 0.6 ಮೀ ಅಳವನ್ನು ಹೊಂದಿರುತ್ತದೆ. ಕಾಂಪ್ಲೆಕ್ಸ್ನಲ್ಲಿ ಮಹಿಳಾ ಹಾಗೂ ಪುರಷ ಕೋಚ್ಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆಯೂ ಇದೆ.
ಕಾಂಪ್ಲೆಕ್ಸ್ ಮುಂಬಾಗವನ್ನು ವೈಟಿಂಗ್ ರೂಂ.ಗೆ ಮೀಸಲಿರಿಸಿದ್ದು, ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಲಾಕರ್ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಿದ್ದು, ಈಜುಗಾರರ ಬೆಳೆಬಾಳುವ ವಸ್ತು ಹಾಗೂ ಬಟ್ಟೆಗಳನ್ನು ಸುರಕ್ಷಿತವಾಗಿರಿಸುವ ವ್ಯವಸ್ಥೆಯೂ ಆಗುತ್ತಿದೆ. ಬಟ್ಟೆ ಬದಲಾಯಿಸಲೂ ಪ್ರತ್ಯೇಕವಾದ ಕೋಣೆಗಳನ್ನು ನಿರ್ಮಿಸಲಾಗುತ್ತಿದೆ.ಶಾವರ್ ಸ್ನಾನ ಹಾಗೂ ಶೌಚಾಲಯದ ವ್ಯವಸ್ಥೆಯೂ ಇದೆ. ಈಜಕೊಳ ಹಾಗೂ ಕಾಮಗರಿ ತಿಂಗಳೊಳಗೆ ಪೂರ್ಣಗೊಳ್ಳುವ ಭರವಸೆಯನ್ನೂ ಅಧಿಕಾರಿಗಳು ಹೊಂದಿದ್ದಾರೆ.
ಸುಧಾರಿತ ಶುಚಿತ್ವ ವ್ಯವಸ್ಥೆ:
ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ `ಎಲೆಕ್ಟ್ರೊ ಮೆಗ್ನೇಟಿಕ್’ ಕಲ್ಪಿಸಲಾಗಿದ್ದು, ಸುಧಾರಿತ ತಂತ್ರಜ್ಞಾನ ರೀತಿಯಲ್ಲಿ ಶುಚಿತ್ವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ನೀರಿನ ಬಣ್ಣ ಬದಲಾಯಿಸುವ, ಇಲ್ಲವೇ ಚರ್ಮಕ್ಕೆ ಹಾನಿ ಉಂಟು ಮಾಡುವಂತಹ ರಾಸಾಯನಿಕವನ್ನು ಇಲ್ಲಿ ಬಳಸದೆ, ಅಡ್ಡ ಪರಿಣಾಮವಿಲ್ಲದ ರಾಸಾಯನಿಕ ಬಳಸಿ ಶುಚಿಗೊಳಿಸುವಲ್ಲಿ ಯೋಜನೆಯನ್ನೂ ಇಲಾಖೆ ಹಮ್ಮಿಕೊಂಡಿದೆ. ಈಜುಕೊಳದ ನಿರ್ವಹಣೆಗೆ ಪ್ರತಿತಿಂಗಳು 45ರಿಂದ 50 ಸಾವಿರ ವೆಚ್ಚವನ್ನೂ ಮೀಸಲಿರಿಸಿದೆ.
ಗ್ರಾಮೀಣರಿಗೂ ಈಜು:
ಸ್ವರಾಜ್ಯ ಮೈದಾನದಂತಹ ವಿಶಾಲವಾದ ಮೈದಾನ, ಅದರೊಂದಿಗೆ ಉತ್ತಮ ಗುಣಮಟ್ಟದ ಸಿಂಥೆಟಿಕ್ ಟ್ರಾಕ್ ಹೀಗೆ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಪೂರಕ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವ ಮೂಡುಬಿದರೆಯಲ್ಲಿ ಈಜುಕೊಳ ನಿರ್ಮಾಣ ಮತ್ತೊಂದು ಪ್ಲಾಸ್ ಪಾಯಿಂಟ್. ಅತ್ಯಾಧುನಿಕವಾಗಿ ನಿರ್ಮಾಣಗೊಳ್ಳುತ್ತಿರುವ ಈಜುಕೊಳ ಎಂಬ ಹೆಗ್ಗಳಿಕೆ ಇದ್ದರೂ, ಗ್ರಾಮೀಣರಿಗೆ ಈಜಾಡಲು ಇದೇ ಮೊದಲ ವ್ಯವಸ್ಥೆಯಲ್ಲ. ಬೆಳುವಾಯಿ ಗ್ರಾ.ಪಂ ತನ್ನ ವ್ಯಾಪ್ತಿಯಲ್ಲಿರುವ ಮಠದ ಕೆರೆಯನ್ನು ಅಭಿವೃದ್ಧಿಪಡಿಸಿ ಈಜಲು ಅವಕಾಶ ಮಾಡಿಕೊಟ್ಟಿದೆ. ಮೂಡುಬಿದರೆ ಮಾತ್ರವಲ್ಲದೆ ಕಾರ್ಕಳ ತಾಲೂಕಿನ ಯುವಕರು ಇಲ್ಲಿ ಬಂದು ಈಜುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಇಲ್ಲಿ ರಾಜ್ಯಮಟ್ಟದ ಮುಕ್ತ ಈಜುಸ್ಪರ್ಧೆಯೂ ನಡೆಯುತ್ತಿದೆ.
ಇದು ಗ್ರಾಮೀಣರಿಗೆ ಸಹಾಯವಾದರೆ, ಇದೀಗ ಸ್ವರಾಜ್ಯ ಮೈದಾನದ ಪಕ್ಕ ನಿರ್ಮಾಣಗೊಳ್ಳುತ್ತಿರುವ ಈಜುಕೊಳದಿಂದ ರಾಜ್ಯದ ವಿವಿಧ ಕ್ರೀಡಾಪಟುಗಳಿಗೆ ಈಜು ಕಲಿತು ಅದರಲ್ಲೂ ಸಾಧನೆ ಮಾಡಲು ಉತ್ತಮ ಅವಕಾಶವಿದೆ. ಪೇಟೆಗೆ ತಾಗಿಕೊಂಡೆ ಇರುವುದರಿಂದ ನಗರವಾಸಿಗಳ ರಿಲಾಕ್ಸ್ಗೂ ಸಹಕಾರಿ. ….. ನಿರ್ವಹಣೆಗೆ ಸಿದ್ಧ! ಮೂಡುಬಿದರೆಯವರೇ ಆಗಿರುವ ಕ್ರೀಡಾಸಚಿವರಿಂದ ಇಲ್ಲಿನ ಕ್ರೀಡಾ ಅಭಿವೃದ್ಧಿಗೆ ಉತ್ತಮ ಕೊಡುಗೆ ಸಿಗುತ್ತಿದೆ. ಈಜುಕೊಳ ನಿರ್ಮಾಣಗೊಳ್ಳುತ್ತಿರುವುದು ಪ್ರಯೋಜನಕಾರಿ ವ್ಯವಸ್ಥೆ. ಕ್ರೀಡಾ ಕ್ಷೇತ್ರದಲ್ಲಿ ಈಗಾಗಲೇ ಗುರುತಿಸುವಂತೆ ಮೂಡುಬಿದರೆಯಿಂದ ಈಜುಪಟುಗಳನ್ನು ತಯಾರು ಮಾಡುವ ಕೆಲಸವಾಗಲಿದೆ. ಸಮಿತಿಯೊಂದರ ನಿರ್ಮಿಸಿ, ಅದರ ಮುಖಾಂತರ ನಿರ್ವಹಣೆಯ ಜವಾಬ್ದಾರಿಯನ್ನು ನೀಡಿದರೆ, ಸಮರ್ಪಕವಾಗಿ ಮಾಡಲು ಸಿದ್ಧನಿದ್ದೇನೆ ಎಂದು ಕ್ರೀಡಾ ಪ್ರೋತ್ಸಾಹಕ, ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.
.ಯಶೋಧರ ವಿ.ಬಂಗೇರ




