ಬಂಟ್ವಾಳ : ಪುಂಜಾಲಕಟ್ಟೆ ಪೇಟೆಯಲ್ಲಿ ರಸ್ತೆ ಬದಿ ಏರ್ಟೆಲ್ ಸಂಸ್ಥೆ ಕೇಬಲ್ ಅಳವಡಿಕೆಗೆ ತೋಡಿದ ಗುಂಡಿಯನ್ನು ಇದುವರೆಗೆ ಮುಚ್ಚದಿರುವುದರಿಂದ ತುಳುನಾಡ ರಕ್ಷಣಾ ವೇದಿಕೆ ಪುಂಜಾಲಕಟ್ಟೆ ಘಟಕ ಗುಂಡಿಯ ಸುತ್ತಲೂ ಕಂಬ ನೆಟ್ಟು ರಿಬ್ಬನ್ ಕಟ್ಟಿ ತಾತ್ಕಾಲಿಕ ಪರಿಹಾರ ಕಲ್ಪಿಸಿದೆ.
ಸುಮಾರು 1 ತಿಂಗಳ ಹಿಂದೆ ಏರ್ಟೆಲ್ ಸಂಸ್ಥೆ ಕೇಬಲ್ ಅಳವಡಿಕೆಗೆ ಗುಂಡಿ ತೋಡಿದ್ದು ಮುಚ್ಚದೆ ಹಾಗೆಯೇ ಬಿಟ್ಟಿದ್ದರು. ಇದು ಬಾಯ್ದೆರೆದು ನಿಂತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು. ಪುಂಜಾಲಕಟ್ಟೆಯ ಹಲವೆಡೆ ಇಂತಹ ಗುಂಡಿ ತೋಡಿ ಹಾಗೆಯೇ ಬಿಟ್ಟಿದ್ದು ಇದೀಗ ಮಳೆ ಬಂದ ಕಾರಣ ಅದರಲ್ಲಿ ನೀರು ತುಂಬಿ ಅಪಾಯಕಾರಿಯಾಗಿ ಪರಿಣಮಿಸಿದೆ. ಶಾಲಾ ಮಕ್ಕಳು, ಪಾದಾಚಾರಿಗಳು, ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು ಗುಂಡಿಗೆ ಬೀಳುವ ಸಾಧ್ಯತೆ ಇತ್ತು.
ಸಂಬಂಸಿದವರು ಕೂಡಲೇ ಈ ಗುಂಡಿಯನ್ನು ಮುಚ್ಚಬೇಕೆಂದು ತುಳುನಾಡ ರಕ್ಷಣಾವೇದಿಕೆ ಪುಂಜಾಲಕಟ್ಟೆ ಘಟಕ ಆಗ್ರಹಿಸಿತ್ತು. ಈ ಬಗ್ಗೆ ಉದಯವಾಣಿಯಲ್ಲಿ ಸಚಿತ್ರ ವರದಿ ಪ್ರಕಟವಾಗಿತ್ತು. ಆದರೆ ಈ ಬಗ್ಗೆ ಸಂಸ್ಥೆ , ಸ್ಥಳೀಯ ಗ್ರಾ.ಪಂ. ಮತ್ತು ಜನಪ್ರತಿನಿಗಳು ಕ್ರಮ ಕೈಗೊಳ್ಳದಿರುವುದರಿಂದ ತುಳುನಾಡ ರಕ್ಷಣಾ ವೇದಿಕೆ ತಾತ್ಕಾಲಿಕ ಪರಿಹಾರ ಕಲ್ಪಿಸಿದೆ.
ತು.ರ.ವೇ.ಪುಂಜಾಲಕಟ್ಟೆ ಘಟಕ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ, ಪದಾಕಾರಿಗಳಾದ ಜೇಮ್ಸ್ಸುನಿಲ್ ಅಂಚನ್, ಪ್ರವೀಣ್ ಶೆಟ್ಟಿ , ಪ್ರಶಾಂತ್ ಜೈನ್ ಮತ್ತಿತರರು ಪರಿಹಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
–
