ಹೂಸ್ಟನ್: ಅಮೆರಿಕದಲ್ಲಿ ಮತ್ತೊಂದು ಶೂಟೌಟ್ ಪ್ರಕರಣ ನಡೆದಿದೆ. ಫೋರ್ಟ್’ಹುಡ್’ನಲ್ಲಿದ್ದ ಸೇನಾ ಶಿಬಿರದಲ್ಲಿ ಸೈನಿಕನೊಬ್ಬ ಮನಬಂದಂತೆ ಗುಂಡು ಹಾರಿಸಿ ನಾಲ್ವರು ಹತ್ಯೆಗೈದಿದ್ದಾನೆ. ಈ ಶೂಟೌಟ್’ನಲ್ಲಿ 14ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ವರದಿ ಬಂದಿದೆ. ಶೂಟೌಟ್ ಮಾಡಿದ ಸೈನಿಕನನ್ನು ಇವಾನ್ ಲೋಪೆಜ್ ಎಂದು ಗುರುತಿಸಲಾಗಿದೆ. ಆತ ಆ ಕೃತ್ಯ ಎಸಗಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಆತ ಗುಂಡು ಹಾರಿಸಲು ತೊಡಗುತ್ತಿದ್ದಂತೆ ಶಿಬಿರದ ಬಳಿ ಇದ್ದ ಇತರ ಸೈನಿಕರು ಹಾಗೂ ಪೊಲೀಸ್ ಪಡೆ ಕೂಡ ಜಾಗೃತಗೊಂಡು ಪ್ರತಿದಾಳಿ ನಡೆಸಿವೆ. ಈ ಪ್ರಕರಣದಲ್ಲಿ ಇವಾನ್ ಲೋಪೆಜ್ ಕೂಡ ಸಾವನ್ನಪ್ಪಿದ್ದಾನೆ. 2009ರ ನವೆಂಬರ್ 5ರಂದು ಇದೇ ರೀತಿಯ ಪ್ರಕರಣವೊಂದು ನಡೆದಿತ್ತು. ಮೇಜರ್ ನಿದಾಲ್ ಮಲಿಕ್ ಹಸನ್ ಎಂಬಾತ ಸೇನಾ ಶಿಬಿರದ ಬಳಿ ಗುಂಡು ಹಾರಿಸಿ 13 ಜನರನ್ನ ಕೊಂದಿದ್ದ. ಆ ಘಟನೆಗೆ ಜಿಹಾದ್ ನಂಟಿರಬಹುದೆಂಬ ಅನುಮಾನವಿದೆ. ಆದರೆ, ಇಂದು ಫೋರ್ಟ್’ಹುಡ್’ನಲ್ಲಿ ನಡೆದಿರುವ ಶೂಟೌಟ್’ಗೆ ಕಾರಣವೇನೆಂದು ತನಿಖೆಯಿಂದಷ್ಟೇ ತಿಳಿಯಬೇಕಿದೆ.
