ಮೂಡುಬಿದಿರೆ : ಧವಳತ್ರಯ ಜೈನಕಾಶಿ ಟ್ರಸ್ಟ್ ವತಿಯಿಂದ ಜೈನ ಮಠದ ರಮಾರಾಣಿ ಸಭಾಭವನದಲ್ಲಿ ಪ್ರಾಕೃತ ಭಾಷಾ ಕಮ್ಮಟವು ಜೂನ್ 20ರಂದು ಬೆಳಿಗ್ಗೆ 10.00 ರಿಂದ ನಡೆಯಲಿದೆ ಎಂದು ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಅವರು ಗುರುವಾರ ಜೈನ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದರು. ಮಂಗಳೂರಿನ ಅಭಿಷ್ ಬಿಲ್ಡರ್ಸ್‍ನ ಪುಷ್ಪರಾಜ್ ಜೈನ್ ಕಮ್ಮಟವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುರಸಭಾಧ್ಯೆಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಪುರಸಭಾ ಸದಸ್ಯ ಲಕ್ಷ್ಮಣ ಡಿ.ಪೂಜಾರಿ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಉಜಿರೆ ಎಸ್‍ಡಿಎಂ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಉಮಾನಾಥ ಶೆಣೈ ಮತ್ತು ಪ.ಅನಂತ್ರಾಜ ಇಂದ್ರ ಹಾಗೂ ಲಕ್ಷ್ಮೀಕಾಂತ ವಿ. ಭಾಗವಹಿಸಲಿದ್ದಾರೆ. ಪ್ರಾಕೃತ ಭಾಷೆಯು ಒಂದು ಪ್ರಾಚೀನ ಪಾರಂಪರಿಕ ಭಾಷೆಯಾಗಿದ್ದು ಅದು ನಶಿಸಿ ಹೋಗದಂತೆ ಉಳಿಸಿ ಬೆಳೆಸಲು ಈ ಕಮ್ಮಟವನ್ನು ನಡೆಸಲಾಗುತ್ತಿದೆ. ಎಂದು ಜೈನ ಮಠದ ಸ್ವಾಮೀಜಿಯವರು ತಿಳಿಸಿದರು.
ಜೂನ್ 20ರಂದು ತಾಳಮದ್ದಳೆ
ಆದ್ಯ ಶ್ರೀ ಚಾರುಕೀರ್ತಿ ಯಕ್ಷಕಲಾ ಬಳಗದ 12ನೇ ವರ್ಷದ ಮಾಸಿಕ ಯಕ್ಷಗಾನ ತಾಳಮದ್ದಳೆ ಸರಣಿ ಕಾರ್ಯಕ್ರಮವು ಜೂನ್ 20ರಿಂದ ಜೈನ ಮಠದಲ್ಲಿ ನಡೆಯಲಿದೆ. ಸ್ಥಳೀಯ ಉದ್ಯಮಿ ಶೈಲೇಂದ್ರ ಕುಮಾರ್ ಅಂದು ಸಂಜೆ 4.30ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪ್ರತೀ ತಿಂಗಳು ಒಂದೊಂದು ತಾಳಮದ್ದಳೆ ನಡೆಯಲಿದೆ. ಜೂನ್ 20ರಂದು `ಭರತಾಗಮನ’ ತಾಳಮದ್ದಳೆಯು ನಡೆಯಲಿದ್ದು ಮುಮ್ಮೇಳದಲ್ಲಿ ರವಿಕುಮಾರ್ ಸೂರಾಲು (ಭಾಗವತಿಕೆ), ರಾಜಾರಾಮ ಹೆಗ್ಡೆ ಮದ್ದಳೆ, ಕೋಟಾ ಶಿವಾನಂದ ಚೆಂಡೆ, ಹಾಗೂ ಹಿಮ್ಮೇಳ ಕಲಾವಿದರಾಗಿ ಎಮ್.ಎಲ್.ಸಾಮಗ (ಭರತ), ಎಮ್.ಆರ್.ವಾಸುದೇವ ಸಾಮಗ (ವಶಿಷ್ಠ), ವೈಕುಂಠ ಹೇರಳೆ (ಲಕ್ಷ್ಮಣ), ಭಾಗವಹಿಸಲಿದ್ದಾರೆ. ಡಿಸೆಂಬರ್‍ನಲ್ಲಿ ದೊಂದಿ ಬೆಳಕಿನ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಸ್ವಾಮೀಜಿಯವರು ತಿಳಿಸಿದರು.
