ಬಂಟ್ವಾಳ: ತಾಲ್ಲೂಕಿನ ಛಾಯಾಗ್ರಾಹಕರ ಸಂಘವು ಜಿಲ್ಲಾ ಸಂಘದ ಬೆಳ್ಳಿ ಹಬ್ಬ ಪ್ರಯುಕ್ತ ಇದೇ 14ರಂದು ಬೆಳಿಗ್ಗೆ ಬಿ.ಸಿ.ರೋಡ್ನ ಹೋಟೆಲ್ ಶ್ರೀನಿವಾಸ ಸಭಾಂಗಣದಲ್ಲಿ ‘ಹಲಸಿನೊಂದಿಗೆ ಒಂದು ದಿನ’ ಕಾರ್ಯಕ್ರಮದ ಜೊತೆಗೆ ಛಾಯಾಚಿತ್ರ ಮತ್ತು ಹಲಸಿನ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್.ಆನಂದ ಇವರು ಸೋಮವಾರ ಸಂಜೆ ಬಿ.ಸಿ.ರೋಡ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಕೃಷಿಕರೊಬ್ಬರು ಸಂಗ್ರಹಿಸಿದ ಉತ್ತಮ ತಳಿಯ ಹಲಸಿನ ಮರವೊಂದರಲ್ಲಿ ರಾಶಿ ರಾಶಿ ಹಲವು ಫಲ ಬಿಟ್ಟಿರುವ ದೃಶ್ಯ.

ಕಳೆದ ಹಲವಾರು ವರ್ಷಗಳಿಂದ ರಕ್ತದಾನ ಶಿಬಿರ, ಉಚಿತ ಪುಸ್ತಕ ವಿತರಣೆ, ಕ್ರೀಡಾಕೂಟ, ಉಚಿತ ಆರೋಗ್ಯ ಶಿಬಿರ ಮತ್ತಿತರ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿರುವ ಛಾಯಾಗ್ರಾಹಕರ ಸಂಘವು ಪರಿಸರ ಪ್ರೇಮಿ ಸಮಾಜಮುಖಿ ಕಾರ್ಯಕ್ರಮವಾಗಿ ಹಲಸಿನ ಹಬ್ಬ ಆಚರಿಸಲು ಮುಂದಾಗಿದೆ ಎಂದರು.
ಅರಣ್ಯ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಸಂಘದ ಅಧ್ಯಕ್ಷ ಕೆ.ವಾಸುದೇವ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿ.ಪಂ.ಉಪಾಧ್ಯಕ್ಷ ಸತೀಶ ಕುಂಪಲ. ಪುರಸಭಾಧ್ಯಕ್ಷೆ ವಸಂತಿ ಮತ್ತಿತರ ಗಣ್ಯರು ಭಾಗವಹಿಸುವರು.
ಇದೇ ವೇಳೆ ರಾಜ್ಯಮಟ್ಟದ ಮುಕ್ತ ಹಲಸು ಛಾಯಾಚಿತ್ರ ಸ್ಪರ್ಧೆ, ಮಹಿಳೆಯರಿಗೆ ಹಲಸಿನ ಅಡುಗೆ ಸ್ಪರ್ಧೇ , ಮುಳಿಯ ವೆಂಕಟಕೃಷ್ಣ ಶರ್ಮ ನೇತೃತ್ವದ ಹಲಸು ಸ್ನೇಹಿ ಕೂಟದವರಿಂದ ವಿವಿಧ ಹಲಸಿನ ತಳಿಗಳ ಪ್ರದರ್ಶನ ಮತ್ತು ಮಾರಾಟ, ಹಲಸು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
ಉಪನ್ಯಾಸ:
ಲೇಖಕ ಶ್ರೀ ಪಡ್ರೆ ಇವರಿಂದ ” ಹಲಸಿನ ಮೌಲ್ಯವರ್ಧನೆ- ವಿಶ್ವದರ್ಶನ ” ಕುರಿತಂತೆ ಉಪನ್ಯಾಸ ನಡೆಯಲಿದ್ದು, ಪರಿಸರತಜ್ಞ ದಿನೇಶ ನಾಯಕ್ ವಿಟ್ಲ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
