ನಾಲ್ಕು ಬೀಡಿ ಸುತ್ತುವ ತಾಯಿಯೇ ಬದುಕಿಗೆ ಸಕಲ ಆಸರೆ. ಕಡು ಬಡತನದ ಬದುಕು. ನಿಂತಲ್ಲಿ ನಿಲ್ಲಲಾಗದ, ಕುಳಿತರ ಎದ್ದೇಳಲಾಗದ, ಸರಿಯಾಗಿ ಮಾತನಾಡಲೂ ಆಗದ ಸಂಪೂರ್ಣ ವಿಕಲಚೇತನವುಳ್ಳ ದೇಹ. ಆದರೆ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಈ ಬಾಲಕ ಪಡೆದ ಅಂಕಗಳು ಬರೋಬ್ಬರಿ 587. ಸಕಲ ಸೌಲಭ್ಯ ಸಹಿತ ಎಲ್ಲವೂ ಸರಿ ಇರುವ ವಿದ್ಯಾರ್ಥಿಗಳೇ ಇಷ್ಟೊಂದು ಅಂಕ ಪಡೆಯುವುದು ಬೆರಳೆಣಿಕೆಯಲ್ಲಿರುವಾಗ ಏನೂ ಇಲ್ಲದ ನಡುವೆ ಇಷ್ಟೊಂದು ಅಂಕ ಪಡೆದಿರುವುದು ನಿಜಕ್ಕೂ ಮಹಾನ್ ಸಾಧನೆಯೆಂದರೂ ತಪ್ಪಲ್ಲ.
ಈ ಸಾಧನಾಶೀಲ ಬಾಲಕನ ಹೆಸರು ದೀಕ್ಷಿತ್. ಕೊಯಿಲ ಸರಕಾರಿ ಪ್ರೌಡಶಾಲೆಯ ವಿದ್ಯಾರ್ಥಿ. ಸಾಧಿಸುವ ಛಲವಿದ್ದರೆ, ಅದಕ್ಕಾಗಿ ಪ್ರಯತ್ನಿಸಿದರೆ ಯಾವುದೂ ಅಡ್ಡಿಯಲ್ಲ ಎಂದು ತನ್ನ ಕರುಣಾಜನಕವಾದ ಸಂಕಷ್ಟದ ಬದುಕಿನಲ್ಲೂ ತೋರಿಸಿಕೊಟ್ಟ ದೀಕ್ಷಿತ್ ನಮ್ಮ ಮದ್ಯೆ ಒಂದು ಮಾದರಿ, ಅಪೂರ್ವ ಯುವಚೇತನ.
ದೀಕ್ಷಿತ್‍ನ ಬದುಕೇ ಅಂತದ್ದು. ಕಲ್ಲು ಹೃದಯವನ್ನೂ ಕರಗಿಸುವಂತದ್ದು. ಬಂಗಾರದ ಬಾಲ್ಯವನ್ನು ಅನುಭವಿಸಿದವನಲ್ಲ. ಎಲ್ಲರ ಹಾಗೆ ಆಡಿ, ನಲಿದಾಡಿ ಸಂಭ್ರಮ ಪಟ್ಟವನಲ್ಲ. ಬದುಕಿನ ಬಡತನದ ಮದ್ಯೆಯೇ ದೇಹದಲ್ಲೂ ಬಡತನವನ್ನೇ ಅನುಭವಿಸುತ್ತಾ ಬೆಳೆದವನು. ಎಳೆವೆಯಲ್ಲೇ ತಂದೆ ಮಹಾಬಲ ಶೆಟ್ಟಿಯವರನ್ನು ಕಳೆದುಕೊಂಡು ತಾಯಿಯೊಡನೆ ಬದುಕಿದವನು.
ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ದೈಲ ಎಂಬಲ್ಲಿ ಅತ್ತ ಸ್ವಂತವೂ ಅಲ್ಲದ, ಇತ್ತ ಬಾಡಿಗೆಯದ್ದು ಅಲ್ಲದ ಸ್ಥಿತಿಯ ಮನೆಯಲ್ಲಿ ತಾಯಿಯೊಂದಿಗೆ ಬದುಕುತ್ತಿರುವ ದೀಕ್ಷಿತ್ ಒಂದರಿಂದ ಏಳನೇ ತರಗತಿವರೆಗೆ ರಾಯಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದವನು. ಆಗ ರಾಯಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕೆ. ರಮೇಶ್ ನಾಯಕ್ ಅವರ ಒತ್ತಾಯ ಹಾಗೂ ಸಹಕಾರದಿಂದ ಶಾಲೆಗೆ ಸೇರಿದ ದೀಕ್ಷಿತ್ ಮನೆಯ ಹತ್ತಿರವೇ ಶಾಲೆ ಇದ್ದರೂ ಅಲ್ಲಿಯವರೆಗೂ ನಡೆಯಲಾಗದೇ ರಿಕ್ಷಾದಲ್ಲೇ ಬಂದು ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ ದೀಕ್ಷಿತ್ ಎಂಟನೇ ತರಗತಿಗೆ ಕೊಯಿಲ ಸರಕಾರಿ ಪ್ರೌಡಶಾಲೆಗೆ ಸೇರಿದ್ದು ಇದೀಗ ಎಸ್.ಎಸ್.ಎಲ್.ಸಿ ಮುಗಿಸಿದ್ದಾನೆ.
587 ಅಂಕಗಳು:
ದೀಕ್ಷಿತ್‍ನ ಕೈಗಳು ಬರೆಯಲಾರದ ಸ್ಥಿತಿಯಲ್ಲಿದೆ. ಈತ ಎಂದೂ ಬರೆದವನಲ್ಲ. ಓದುತ್ತಾನೆ, ಓದಿದ್ದನ್ನು ಬಾಯಲ್ಲಿ ಹೇಳುತ್ತಾನೆ. ಶಿಕ್ಷಕರ ಪ್ರಶ್ನೆಗಳಿಗೆ ಬಾಯಲ್ಲಿ ಉತ್ತರಿಸುತ್ತಾನೆ ವಿನಃ ಬರೆದು ಉತ್ತರಿಸುವ ಸ್ಥಿತಿ ಇವನದಲ್ಲ. ಹಾಗೆಂದು ಸರಿಯಾಗಿ, ನಿರರ್ಗಳವಾಗಿ ಮಾತನಾಡಲೂ ಇವನಿಂದ ಸಾಧ್ಯವಾಗುವುದಿಲ್ಲ. ಆದರೂ ಚಿಕ್ಕಂದಿನಿಂದಲೂ ಈತ ಕಲಿಕೆಯಲ್ಲಿ ಮುಂದು. ಪರೀಕ್ಷೆ ಸಂದರ್ಭದಲ್ಲಿ ಬೇರೆ ವಿದ್ಯಾರ್ಥಿಗಳು ಈತನ ಉತ್ತರ ಪತ್ರಿಕೆಯನ್ನು ತುಂಬುವ ಕ್ರಮ. ಈ ಬಾರಿ ದೀಕ್ಷಿತ್ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತಿದ್ದ. ಇಲಾಖಾ ಕ್ರಮದಂತೆ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳಿಗೆ ಇವನು ಉತ್ತರ ಹೇಳಿದ್ದಾನೆ, 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಅದನ್ನು ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ. ಪಲಿತಾಂಶದಲ್ಲಿ ಸಾಧನೆಯೇನೂ ಚಿಕ್ಕದಲ್ಲ, ದೀಕ್ಷಿತ್‍ಗೆ 587 ಅಂಕಗಳು.

Deekshith
ಆದರೂ ತೃಪ್ತಿಯಿಲ್ಲ:
ಇಷ್ಟು ಅಂಕ ಬಂದದ್ದಕ್ಕೆ ಒಂದೊಮ್ಮೆ ತೃಪ್ತಿ ಇದ್ದರೂ ತನ್ನ ನಿರೀಕ್ಷೆಯಷ್ಟು ಬರಲಿಲ್ಲ ಎನ್ನುವ ಅತೃಪ್ತಿ ದೀಕ್ಷಿತ್‍ನನ್ನು ಕಾಡುತ್ತಿದೆ. ದೀಕ್ಷಿತ್ ಬಯಸಿದ್ದು 600 ಅಂಕಗಳನ್ನು. ಅದರ ಗ್ಯಾರಂಟಿಯೂ ಇತ್ತು ಅವನಿಗೆ. ಆದರೂ ಕಡಿಮೆ ಬಂದಿದೆ, ಸಿಕ್ಕಿದ್ದಕ್ಕೆ ಸಮಾಧಾನ. ಮುಂದೆ ವಿಜ್ನಾನ ಕ್ಷೇತ್ರದಲ್ಲಿ ಸಾಧಿಸುವ ಕನಸಿದ್ದರೂ ತನ್ನ ದೈಹಿಕ ದೌರ್ಬಲ್ಯವು ಭವಿಷ್ಯದಲ್ಲಿ ಪ್ರಯೋಗಾಲಯದ ಚಟುವಟಿಕೆಗಳಿಗೆ ನೆರವು ಆಗಲಿಕ್ಕಿಲ್ಲ ಎನ್ನುವ ಹಿನ್ನೆಲೆಯಲ್ಲಿ ಇದೀಗ ದೀಕ್ಷಿತ್‍ನ ಮುಂದಿರುವುದು ಸಿ.ಎ.ಆಗುವ ಕನಸು.
ಆಳ್ವಾಸ್‍ನಲ್ಲಿ ಪಿಯುಸಿ:
ದೀಕ್ಷಿತ್ ಪ್ರಥಮ ಪಿಯುಸಿಯಲ್ಲಿ ಕಾಮರ್ಸ್ ಅನ್ನು ಆಯ್ಕೆ ಮಾಡಿಕೊಂಡು ಇದೀಗ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೆಟ್ಟಿಲು ಹತ್ತಿದ್ದಾನೆ. ದೀಕ್ಷಿತ್‍ನ ಸಾಧನೆಯನ್ನು ಕಂಡು ಆಳ್ವರು ಮೆಚ್ಚಿದ್ದಾರೆ, ಕಷ್ಟವನ್ನು ಕಂಡು ಕರಗಿದ್ದಾರೆ, ಆಳ್ವಾಸ್‍ನ ವಿದ್ಯಾರ್ಥಿ ನಿಲಯದಲ್ಲಿ ಉಚಿತ ವಸತಿ ಸೌಲಭ್ಯದ ಭರವಸೆ ನೀಡಿದ್ದಾರೆ. ದೀಕ್ಷಿತ್‍ಗೆ ಎಲ್ಲದಕ್ಕೂ ತಾಯಿಯ ಆಸರೇ ಬೇಕು. ತಾಯಿಯಿಲ್ಲದೆ ಬದುಕಿಲ್ಲ. ತಾಯಿಗೂ ಈತ ಒಬ್ಬನೇ ಮಗ. ಈ ಹಿನ್ನೆಲೆಯಲ್ಲಿ ತಾಯಿಗೂ ಆಳ್ವಾಸ್ ವಸತಿ ನಿಲಯದಲ್ಲಿ ಕೆಲಸದ ಭರವಸೆ ಆಳ್ವರಿಂದ ದೊರೆತಿದೆ. ದೀಕ್ಷಿತ್‍ನ ಬದುಕು ಮತ್ತು ಸಾಧನೆಯ ಹಾದಿಯಲ್ಲಿ ಮೂಡಬಿದ್ರೆಯ ಆದರ್ಶ ಸಂಸ್ಥೆಯ ಸಹಕಾರವೂ ಗಮನಾರ್ಹವಾಗಿದೆ.
ದೀಕ್ಷಿತ್ ಇನ್ನಷ್ಟು ಮುನ್ನಡೆಯಬೇಕು, ಸಾಧನೆಯ ಹಾದಿಯಲ್ಲಿ ಮತ್ತಷ್ಟು ಹೆಗ್ಗುರುತುಗಳನ್ನು ದಾಖಲಿಸಬೇಕು. ಅದಕ್ಕೆ ಸಹೃದಯರ ನೆರವು ಬೇಕು.

By suddi9

Leave a Reply

Your email address will not be published. Required fields are marked *