ಈಗ ಎಲ್ಲೆಡೆಯೂ ಸಮಾರಂಭಗಳ ಭರಾಟೆ. ಎಲ್ಲದರಲ್ಲೂ ಒಂದು (ಸ್ಟೇಜ್ ಪಂಕ್ಷನ್) ಸಭಾ ಕಾರ್ಯಕ್ರಮ. ಈ ಪೈಕಿ ಕೆಲವು ಸಭಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿಬಂದರೆ, ಕೆಲವಂತೂ ಅಭಾಸಗಳ ಆಗರವೇ ಸರಿ. ಸಭಾ ಕಾರ್ಯಕ್ರಮದ ಈ ಯಶಸ್ಸು/ವಿಫಲತೆಗೆ ಹಲವು ಕಾರಣಗಳಿದ್ದರೂ `ಸಭಾ ನಿರೂಪಣೆ’ಯ ಪಾತ್ರವೂ ಬಹುಪಾಲು. ಸಭಾ ನಿರೂಪಕನ(ಎಂ.ಸಿ) ಜವಾಬ್ದಾರಿಯೂ ಬಲು ಮೇಲು.
ಹಾಗಾದರೆ ಯಾವುದೇ ಒಂದು ಸಭಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸುವುದು ಹೇಗೆ? ಯಶಸ್ವಿ ನಿರೂಪಕರೆಂದರೆ ಯಾರು? ಎನ್ನುವುದು ಅನೇಕ ಸಂಘಟಕರ-ನಿರೂಪಕರ ಪ್ರಶ್ನೆ. ಹೀಗೇ ನಿರೂಪಿಸಬೇಕೆಂಬ ಸಿಧ್ದ ಸೂತ್ರ ಇಲ್ಲದಿದ್ದರೂ ನಿರೂಪಕರು ಕೆಲವೊಂದು ಸರಳ ಸೂತ್ರಗಳನ್ನು ಪಾಲಿಸಬೇಕಾದದ್ದು ಯಶಸ್ವಿ ನಿರೂಪಣೆಯ ದೃಷ್ಠಿಯಲ್ಲಿ ಅನಿವಾರ್ಯ. ಅದಕ್ಕೂ ಮುನ್ನ ಸಭೆಯಲ್ಲಿ ಪ್ರತ್ಯೇಕ ನಿರೂಪಣೆಯ ಅಗತ್ಯ, ಅಲ್ಲಿ ನಿರೂಪಕರ ಪಾತ್ರದ ಅರಿವೂ ನಿರೂಪಕರಿಗೆ ಮುಖ್ಯ.
ಇಡೀ ಸಭಾ ಕಾರ್ಯಕ್ರಮ ಅನಾವರಣಗೊಳ್ಳುವ ಪ್ರಕ್ರಿಯೆ ಸಭಾ ನಿರೂಪಣೆ. ಇದನ್ನು ಸುಲಲಿತವಾಗಿ ನಿರೂಪಿಸಿಕೊಂಡು ಹೋಗುವವನು ನಿರೂಪಕ. ಅನಿವಾರ್ಯವಾಗಿ ಮತ್ತು ಹೊಸ ಪಾತ್ರವಾಗಿ ಕೆಲವು ವರ್ಷದ ಹಿಂದೆ ಸೃಷ್ಟಿಯಾದ ನಿರೂಪಕನೇ ಇಂದು ಇಡೀ ಕಾರ್ಯಕ್ರಮವನ್ನು ಮುನ್ನಡೆಸುವವನಾಗಿ ಬೆಳೆದಿದ್ದರೂ ಎಲ್ಲಾ ನಿರೂಪಕರು ಸಮರ್ಥರಲ್ಲ. ನಿರೂಪಕರಿಂದಲೇ ಅನೇಕ ಕಾರ್ಯಕ್ರಮಗಳು ಕೆಲವೆಡೆ ಸೊಗಸಾಗಿ, ಮತ್ತೆ ಕೆಲವೆಡೆ ಕಳಪೆಯಾಗಿ ಗಮನ ಸೆಳೆಯುವುದಂತೂ ನಿಜ.
ಇಂದು ಎಲ್ಲಾದರೂ ದೊಡ್ಡ ಮಟ್ಟದ ಸಭಾ ಕಾರ್ಯಕ್ರಮವೊಂದು ಸಂಯೋಜಿಸಲ್ಪಟ್ಟಾಗ ನಿರೂಪಕ ಯಾರು? ಎನ್ನುವುದೇ ಕೆಲವರಿಗೆ ಎಲ್ಲಕ್ಕಿಂತ ದೊಡ್ಡ ಪ್ರಶ್ನೆ. ಈಗ ಯಾವುದೇ ಸಭೆ-ಸಮಾರಂಭದ ಆರಂಭ ಮತ್ತು ಅಂತ್ಯದಲ್ಲಿ ನಿರೂಪಣೆ/ನಿರೂಪಕರ ಬಗ್ಗೆಯೂ ಚರ್ಚೆಗಳು ನಡೆಯುತ್ತಿರುವುದನ್ನು ಕಂಡಾಗ ಅರ್ಥವಾಗುತ್ತದೆ ಈ ನಿರೂಪಕರ ಮಹತ್ವ. ಸಭಾ ಕಾರ್ಯಕ್ರಮದ ಸಮಗ್ರ ಯಶಸ್ವಿಗೆ ಬೇಕಾದ ಪೂರ್ವ ತಯಾರಿಯನ್ನು ಸಂಘಟಕರು ಮಾಡಿದ್ದರೂ ಕೊನೆಕ್ಷಣದಲ್ಲಿ ಅದನ್ನು ವ್ಯವಸ್ಥಿತವಾಗಿ ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸಿ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸುವ ಜವಾಬ್ದಾರಿ ನಿರೂಪಕನ ಮೇಲಿರುವುದೇ ಇದಕ್ಕೆ ಕಾರಣ.
ಯಾವುದೇ ಪೂರ್ವಭಾವಿ ಸಿದ್ಧತೆ ಇಲ್ಲದೆ ನಿರ್ವಹಿಸುವುದು, ಅತೀ ಹೆಚ್ಚು ಮಾತನಾಡಿ ಎಲ್ಲರ ಸಮಯವನ್ನೂ ವ್ಯರ್ಥ ಮಾಡುವುದು, ಏನೋ ಮಾಡಲು ಹೋಗಿ ಇಡೀ ಸಭೆಯನ್ನೇ ಗೊಂದಲ ಮಾಡುವುದು-ಇಂತಹ ನಿರೂಪಕರು ಬೇಕೇ? ಎನ್ನುವುದೂ ಸಂಘಟಕರ ಮುಂದಿರುವ ಪ್ರಶ್ನೆ. ನಿರೂಪಣೆ ಎನ್ನುವುದು ಆಯಾಯ ಸಂಘಟನೆ, ಕಾರ್ಯಕ್ರಮಕ್ಕನುಗುಣವಾಗಿ ಬದಲಾಗುವುದು ಸಹಜವೇ ಆದರೂ ಯಶಸ್ವಿ ನಿರೂಪಣೆ ಎನ್ನುವುದು ನಿರೂಪಕರ ಶೈಲಿ, ಕಾರ್ಯತಂತ್ರ, ಸಾಮಥ್ರ್ಯ, ಕೌಶಲ್ಯ-ಇತ್ಯಾದಿಗಳ ಸಮ್ಮಿಲನದ ಪ್ರತಿರೂಪ. ಯಾರೋ ಹೇಳಿ ಕೊಟ್ಟದನ್ನು ಅಥವಾ ಬರೆದುಕೊಟ್ಟದ್ದ್ದನ್ನು ಯಥಾವತ್ತಾಗಿ ನಿರೂಪಕ ಸಭೆಯಲ್ಲಿ ಮಂಡಿಸಿದರೆ ಅದು ಓದುವಿಕೆ, ಕಂಠಪಾಠ, ಅನುಕರಣೆಯಾದಿತೇ ವಿನಃ ಹೊಸತನ ಕಾಣದು. ನಿರೂಪಣೆಯಲ್ಲಿ ಸ್ವ ಚಿಂತನೆ-ಸ್ವಂತಿಕೆ ಇಲ್ಲದಿದ್ದರೆ ಅದು ನಿರೂಪಕನಿಗೆ ಭೂಷಣವಾಗದು.
ಯಶಸ್ವಿ ನಿರೂಪಕ ಮಾತ್ರ ಯಾವುದೇ ಸಾಮಾನ್ಯ ಮಟ್ಟದ ಸಭೆಯನ್ನೂ ತನ್ನ ವಿಶಿಷ್ಠತೆಯಿಂದ ವಿಶೇಷ ಕಳೆ ಕಟ್ಟಿ ಅಸಾಮಾನ್ಯವಾಗಿ ಪರಿವರ್ತಿಸಬಲ್ಲ. ಪ್ರೇಕ್ಷಕರ ಏಕತಾನತೆ, ಉದಾಸೀನತೆ, ನಿದ್ರೆಯನ್ನು ದೂರಮಾಡಿ-ಅವರ ಆಸಕ್ತಿಯನ್ನು ಕೆರಳಿಸಿ ಅವರೂ ಸಭೆಯೆಡೆಗೆ ಆಕರ್ಷಿತರಾಗುವಂತೆ ಮಾಡಬಲ್ಲ. ಸಹಜವಾಗಿ ಸಭೆಯಲ್ಲಿ ಎದುರಾಗುವ ಸಮಸ್ಯೆ-ಸವಾಲುಗಳನ್ನು ನಿವಾರಿಸಿ ಸಮಸ್ಥಿತಿಗೆ ತಂದು,ತನ್ನ ಅಪೂರ್ವ ತಂತ್ರಗಾರಿಕೆಯಿಂದಲೇ ಸಂಘಟಕರ ಶ್ರಮಕ್ಕೆ ನಿಜವಾದ ಪ್ರತಿಫಲ ತಂದುಕೊಡಬಲ್ಲ. ಚಿಕ್ಕದಾಗಿ, ಚೊಕ್ಕದಾಗಿ, ಕುತೂಹಲಕರವಾಗಿ, ಸುಸೂತ್ರವಾಗಿ ಮತ್ತು ಜವಾಬ್ದಾರಿಯುತವಾಗಿ ನಿರೂಪಿಸಿ ಎಲ್ಲರಿಂದ ಸೈ ಎನಿಸಿಕೊಳ್ಳಬಲ್ಲ.
ಯಶಸ್ವಿ ನಿರೂಪಕ ಕಾರ್ಯಕ್ರಮದ ಸಂಪೂರ್ಣ ಜ್ಝಾನ, ಅರ್ಥವತ್ತಾದ ಭಾಷೆ, ಸಮಯಪ್ರಜ್ಝೆಯುಳ್ಳವನಾಗಿ, ಸಂಘಟಕರು-ಅತಿಥಿಗಳು-ಸಭಾಸದರ ಮಧ್ಯೆ ಸಮನ್ವಯದ ಕೊಂಡಿಯಾಗಿ-ಸಭೆಯಲ್ಲಿ ಒಂದಾದ ಮೇಲೆ ಮತ್ತೊಂದಕ್ಕೆ ಕಿರು ವಿವರಣೆಯೊಂದಿಗೆ ಅವಕಾಶ ನೀಡುತ್ತಾ, ಸಹಜವಾಗಿ ಸಭೆಯನ್ನು ಮುನ್ನಡೆಸುತ್ತಾನೆ. ಆ ಮೂಲಕ ಸಭಿಕರು ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗುವಂತೆ ಮಾಡುತ್ತಾ, ಸಭಾ ಕಾರ್ಯಕ್ರಮದ ನಿಜವಾದ ಉದ್ದೇಶವನ್ನೂ ಸಾರ್ಥಕಗೊಳಿಸುತ್ತಾನೆ.
ಹಾಗೆಂದು ಈ ಯಶಸ್ವಿಯೇ ನಿರೂಪಕನ ದೊಡ್ಡಸ್ಥಿಕೆಯಾದರೂ ನಿರೂಪಕನೇ ಸಭೆಯ ಎಲ್ಲರಿಗಿಂತ ದೊಡ್ಡವನಲ್ಲ, ಯಾರಿಗೂ ಆದೇಶ ನೀಡುವವನೂ ಅಲ್ಲ. ನಿರೂಪಣೆಯೇ ಕಾರ್ಯಕ್ರಮಕ್ಕೆ ಹೊರೆಯಾಗುವುದೂ ಸರಿಯಲ್ಲ.
ಯಶಸ್ವಿ ನಿರೂಪಕನ ಗುಣ ಲಕ್ಷಣಗಳು
1. ಕಾರ್ಯಕ್ರಮ ನಿರೂಪಣೆಯ ಅವಕಾಶ ದೊರೆತಾಗ ಸಮಗ್ರ ಮಾಹಿತಿಯನ್ನು ಸಂಘಟಕರಿಂದ ಮೊದಲೇ ಸಂಗ್ರಹಿಸಿ ಪೂರಕ ಸಿಧ್ದತೆಯನ್ನು ಮಾಡಿಕೊಳ್ಳುವುದು.
2. ಕಾರ್ಯಕ್ರಮ ಆರಂಭಕ್ಕಿಂತ ಕನಿಷ್ಠ ಒಂದು ಗಂಟೆ ಮುಂಚೆಯಾದರೂ ಸಭಾಂಗಣದಲ್ಲಿದ್ದು ಅಲ್ಲಿನ ಒಟ್ಟು ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವುದು. ಸಭೆಯುದ್ದಕ್ಕೂ ಬೇಕಾಗುವ ಜವಾಬ್ದಾರಿಯುತ ವ್ಯಕ್ತಿಗಳು ಸೂಕ್ತ ಸ್ಥಳದಲ್ಲಿ ಇದ್ದಾರೆಯೇ? ಬೇಕಾದ ವಸ್ತುಗಳು ನಿರ್ಧಿಷ್ಠ ಜಾಗದಲ್ಲಿ ಇದೆಯೇ ಎಂಬುದನ್ನು ಮೊದಲೇ ಗಮನಿಸುವುದು. ಈ ಮೂಲಕ ಮುಂದೊದಗುವ ಗೊಂದಲವನ್ನು ನಿವಾರಿಸುವುದು.
2. ಯಾವ ಕಾರ್ಯಕ್ರಮ ಮೊದಲು? ಯಾರು ಮೊದಲು ಮಾತನಾಡಬೇಕು? ಯಾರಿಗೆ ಯಾವ ಜವಾಬ್ದಾರಿ? ಎಂಬುದನ್ನೂ ಮೊದಲೇ ಸಂಘಟಕರೊಡನೆ ಚರ್ಚಿಸಿ ಸರಿಯಾದ ರೀತಿಯಲ್ಲಿ ಒಂದರ ನಂತರ ಮತ್ತೊಂದು ಆಸಕ್ತಿದಾಯಕವಾಗಿ ಮೂಡಿಬರುವಂತೆ ಹಂಚಿಕೆ ಮಾಡುವುದು. ಸಭಾ ಕಾರ್ಯಕ್ರಮದ ಸಮಗ್ರ ವಿನ್ಯಾಸವನ್ನು ಸಿದ್ಧಪಡಿಸಿ, ಪಟ್ಟಿಯೊಂದನ್ನು ವೇದಿಕೆಯಲ್ಲಿರಿಸುವಿಕೆ. ಇದರೊಂದಿಗೆ ಸಭಾಕಾರ್ಯಕ್ರಮದ ನಡುವಿನ ಚಡಪಡಿಸುವಿಕೆಗೆ ಮುಕ್ತಿ.
3. ಅತಿಥಿ/ಉಪನ್ಯಾಸಕರ ಬಗ್ಗೆ ಹೇಳುವಾಗ ಆ ಅತಿಥಿ ನಿರ್ಧಿಷ್ಠ ಕಾರ್ಯಕ್ರಮಕ್ಕೆ ಯಾವ ರೀತಿಯಲ್ಲಿ ಪ್ರಸ್ತುತ- ಇದಕ್ಕೆ ಸಂಬಂಧಿಸಿ ಆ ಅತಿಥಿಯ ಸಾಧನೆ ಏನು ಎಂಬುದನ್ನೇ ಹೆಚ್ಚು ಪ್ರಸ್ತಾಪಿಸಿ ವ್ಯಕಿನಿಷ್ಠೆಗಿಂತಲೂ ವ್ಯಕ್ತಿಯ ಕಾರ್ಯ ನಿಷ್ಠತೆ/ ಕಾರ್ಯ ಸಾಧನೆಗೆ ಒತ್ತು ನೀಡುವುದು.
4. ಸಭಾಸದರಿಗೆ ಅರ್ಥವಾಗದ ಕ್ಲಿಷ್ಟಕರ ವಿಷಯಗಳು- ಕೊಡುಗೆಗಳು ಅತಿಥಿಗಳಿಂದ ಹೇಳಲ್ಪಟ್ಟಿದ್ದರೆ ಮಾತ್ರ ಅದನ್ನು ಮತ್ತೆ ಪುನರುಚ್ಚಿಸುವುದೇ ವಿನಃ ಅತಿಥಿಗಳ ಭಾಷಣವನ್ನೇ ಪುನರುಚ್ಚಾರ ಮಾಡುವುದಿಲ್ಲ. ಎಲ್ಲಿಯೂ ಅನಗತ್ಯ ವಿವರಣೆ ನೀಡುವುದಿಲ್ಲ. ಯಾರಾದೋ ಭಾಷಣವನ್ನು ತಪ್ಪು ತಪ್ಪಾಗಿ ತಾನು ವಿಮರ್ಷಿಸುವುದಿಲ್ಲ.
5. ಅತಿಥಿಗಳ ಕೃತಿ- ಪ್ರಶಸ್ತಿ-ಸ್ಥಾನ ಮಾನ ಮೊದಲಾzವುಗಳ ಬಗ್ಗೆ ಹೇಳುವಾಗ ನಿಖರ ಮಾಹಿತಿ ಇರಿಸಿಕೊಳ್ಳುವಿಕೆ. ಯಾವುದೇ ವಿಷಯದ ಬಗ್ಗೆ ತಿಳುವಳಿಕೆ ಇಲ್ಲದೆ ಜನರಿಗೆ ತಪ್ಪು ಮಾಹಿತಿ ನೀಡದಿರುವಿಕೆ.
6. ಯಾವುದೇ ಕ್ಷಣದಲ್ಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಅನಿವಾರ್ಯ ಬದಲಾವಣೆಗಳನ್ನು ಸಭಾಸದರು/ಅತಿಥಿಗಳು ಗಮನಿಸದ ರೀತಿಯಲ್ಲಿ ಮಾಡಿಕೊಳ್ಳುವಿಕೆ, ಹೊಸ ಮಾದರಿ-ಹೊಸತನ-ವೈವಿಧ್ಯತೆಗಳ ನಿರಂತರ ಪ್ರಯೋಗ.
7. ಪ್ರೇಕ್ಷಕರ ಗಮನವನ್ನು ವೇದಿಕೆಯತ್ತ ಕೇಂದ್ರಿಕರಿಸುವ ವಿಶೇಷ ಶಕ್ತಿ, ಸಭಿಕರ ಗಮನ ಕೊನೆತನಕವೂ ಯಥಾವತ್ತಾಗಿ ಉಳಿಯುವ ಕಾರ್ಯತಂತ್ರದ ಜೋಡಣಾ ವಿಧಾನದ ಅರಿವು.
8. ಸಭಾ ಶಿಷ್ಠಾಚಾರದ ಅರಿವು, ಭಾಷಾ ಜ್ಞಾನ, ವಿಷಯದ ಮೇಲಿನ ಹಿಡಿತ, ಪ್ರೇಕ್ಷಕರ ಮನದ ಮಿಡಿತ ಅರಿಯುವ ಶಕ್ತಿ, ಸ್ಪಷ್ಟವಾದ/ಸರಿಯಾದ ಉಚ್ಚಾರ, ಆಕರ್ಷಕ ಧ್ವನಿ, ಸಂದರ್ಭೋಚಿತ ಮಾತುಗಾರಿಕೆ, ಉತ್ತಮ ಶೈಲಿ, ಸಮಯ ಪ್ರಜ್ಞೆ, ಸಹನೆ, ಆಕರ್ಷಕ ವೇಷಭೂಷಣ, ಸ್ಪಷ್ಠವಾದ/ ನಿರರ್ಗಳವಾದ ಮಾತು, ಉತ್ತಮ ಸಂಬಂಧ ಸೃಷ್ಟಿಸುವ ಕಲೆಗಾರಿಕೆ, ಯಾವುದೇ ಕ್ಷೇತ್ರದ ಬಗ್ಗೆಯೂ ಸಾಮಾನ್ಯ ಜ್ಝಾನ, ಪದಗಳ ಅರ್ಥವ್ಯತ್ಯಾಸ, ಸೂಕ್ಷ್ಮ ಪ್ರಜ್ಝೆ, , ಸಮಸ್ಯೆ ಬಂದರೆ ಸುಲಭವಾಗಿ ನಿವಾರಿಸಬಲ್ಲ ಜಾಣ್ಮೆ, ಉತ್ತಮ ಪದಭಂಡಾರದ ಬಳಕೆ , ವಾಕ್ಯರಚನಾ ಸಾಮಥ್ರ್ಯ, ಉತ್ತಮ ನಡವಳಿಕೆ, ಆಕರ್ಷನೀಯ ಹಾವ ಭಾವ-ಇತ್ಯಾದಿಗಳು.
9.ವೈಯಕ್ತಿಕ ಹಿತದೃಷ್ಠಿಯಿಂದ ಅತಿಥಿಗಳನ್ನು/ಸಂಘಟಕರನ್ನು ಅನಾವಶ್ಯಕ ಹೊಗಳದೇ, ತೆಗಳದೇ-ಎಲ್ಲಿಯೂ ವೈಯಕ್ತಿಕ ಸಂಬಂಧಗಳನ್ನು ಉಲ್ಲೇಖಿಸದೇ ಅಗತ್ಯ ವಿವರವನ್ನು ಮಾತ್ರ ನೀಡುತ್ತಾನೆ. ಆ ಕಾರ್ಯಕ್ರಮಕ್ಕೆ ಅನಗತ್ಯವಾದ/ ಸಭಿಕರಿಗೆ ಅರ್ಥವಾಗದ ಭಾಷೆ, ಪದಗಳು, ನುಡಿಗಟ್ಟುಗಳನ್ನು ಬಳಸದೇ ಅಲ್ಲಿನ ಬಹುಪಾಲು ಪ್ರೇಕ್ಷಕರ ಪ್ರಜ್ಝಾಮಟ್ಟವನ್ನು ಗಮನಿಸಿ ನಿರೂಪಿಸುತ್ತಾನೆ. ತನಗೆ ಗೊತ್ತಿರುವುದನ್ನು- ತಾನು ತಯಾರು ಮಾಡಿ ತಂದದ್ದನ್ನು ಹೇಳಿಯೇ ಬಿಡಬೇಕೆಂಬ ಹಠವಿಲ್ಲದೇ, ಎಲ್ಲವೂ ತನ್ನಿಷ್ಠದಂತೆಯೇ ನಡೆಯಬೇಕೆಂಬ ಚಟವಿಲ್ಲದೆ ಪರಿಸ್ಥಿತಿಗನುಗುಣÀವಾಗಿ ಸಭೆಯನ್ನು ಸುಗಮವಾಗಿ ಮುನ್ನಡೆಸುತ್ತಾನೆ.
10. ಅತಿಥಿಗಳು ವೇದಿಕೆಯಲ್ಲಿ ನಿಂತಾಗ-ಕೂತಾಗ ಅವರನ್ನು ಸ್ವಾಗತಿಸುವುದು, ಮತ್ತೆ ಮತ್ತೆ ಅವರನ್ನು ಪರಿಚಯಿಸುವುದು, ಅನಾವಶ್ಯಕ ಹೊಗಳುವುದು,ಪದೇ ಪದೇ ಅವರಿಗಿವರಿಗೆ ಧನ್ಯವಾದ ಹೇಳುವುದು-ಇತ್ಯಾದಿಗಳನ್ನು ಮಾಡುವುದಿಲ್ಲ. ಯಾಕೆಂದರೆ ನಿರೂಪಕರೇ ಪದೇ ಪದೇ ಸ್ವಾಗತ-ಧನ್ಯವಾದ ಹೇಳುವುದರಿಂದಾಗಿ ನಿಜವಾಗಿಯೂ ಅದನ್ನು ಹೇಳಬೇಕಾದವರ ಮಾತಿಗೆ ಮತ್ತೆ ಮನ್ನಣೆ ಸಿಗುವುದಿಲ್ಲ.
ಗೋಪಾಲ ಅಂಚನ್

Super sir