ಬಂಟ್ವಾಳ : ಓಮನ್ ದೇಶದ ಮಸ್ಕತ್‍ನಲ್ಲಿ ಉದ್ಯೋಗದಲ್ಲಿದ್ದ ಬಂಟ್ವಾಳದ ಯುವಕನೋರ್ವ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.


ಮೃತ ಯುವಕನನ್ನು ತಾಲೂಕಿನ ಬಿ ಸಿ ರೋಡು ಸಮೀಪದ ಪರ್ಲಿಯ ನಿವಾಸಿ ದಿವಂಗತ ಅಬ್ದುಲ್ ಘನಿ ಎಂಬವರ ಪುತ್ರ ಮುಹಮ್ಮದ್ ಮುಸ್ತಫಾ (28) ಎಂದು ಹೆಸರಿಸಲಾಗಿದೆ. ಮಸ್ಕತ್‍ನ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿದ್ದ ಮುಸ್ತಫಾ ಆರು ತಿಂಗಳ ಹಿಂದೆಯಷ್ಟೆ ಊರಿಗೆ ಬಂದು ಮತ್ತೆ ಉದ್ಯೋಗಕ್ಕೆ ಮಸ್ಕತ್‍ಗೆ ತೆರಳಿದ್ದ. ಗುರುವಾರ ಸಂಜೆ ಮಸ್ಕತ್‍ನಲ್ಲಿ ಅಗತ್ಯ ಕಾರ್ಯ ನಿಮಿತ್ತ ಕಾರಿನಲ್ಲಿ ತೆರಳುತ್ತದ್ದ ವೇಳೆ ನಡೆದ ಅಪಘಾತದಲ್ಲಿ ಈತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈತನ ತಂದೆ ಅಬ್ದುಲ್ ಘನಿ ಮೂರು ತಿಂಗಳ ಹಿಂದೆಯಷ್ಟೆ ಮೃತಪಟ್ಟಿದ್ದು, ಇವರ ಇಬ್ಬರೇ ಗಂಡು ಸಂತಾನದ ಪೈಕಿ ಹಿರಿಯ ಮಗ ಅಬ್ದುಲ್ ಲತೀಫ್ ಅನಾರೋಗ್ಯದಿಂದ ಸುಮಾರು ಐದು ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ. ಇದೀಗ ಮನೆಯಲ್ಲಿ ತಾಯಿ ಹಾಗೂ ಸಹೋದರಿ ಮಾತ್ರ ಇದ್ದಾರೆ ಎಂದು ತಿಳಿದು ಬಂದಿದೆ. ಮುಸ್ತಫಾ ದುರಂತ ಮರಣದ ಸುದ್ದಿ ತಿಳಿಯುತ್ತಲೇ ಗುರುವಾರ ರಾತ್ರಿ ಸ್ಥಳೀಯ ಯುವಕರ ದಂಡೇ ಆತನ ಪರ್ಲಿಯದಲ್ಲಿರುವ ಮನೆಯತ್ತ ಧಾವಿಸಿ ಮನೆ ಮಂದಿಗೆ ಸಾಂತ್ವನ ಹೇಳುತ್ತಿರುವ ದೃಶ್ಯ ಕಂಡು ಬರುತ್ತಿದೆ. ಮೃತದೇಹವನ್ನು ಊರಿಗೆ ತರುವ ಅಥವಾ ಅಲ್ಲಿಯೇ ದಫನ ಮಾಡಿಸುವ ಬಗ್ಗೆ ಇನ್ನಷ್ಟೆ ನಿರ್ಧಾರಕ್ಕೆ ಬರಲಾಗುವುದು ಎಂದು ಸ್ಥಳಿಯರು ತಿಳಿಸಿದ್ದಾರೆ.
