ಬಹಳಷ್ಟು ಮಂದಿಗೆ ತಮ್ಮ ಭಾವನೆಗಳನ್ನು, ಯೋಚನೆಗಳನ್ನು, ಚಿಂತನೆಗಳನ್ನು ಇನ್ನೇನನ್ನೋ ಬರೆಯಬೇಕೆಂಬ ಆಸೆ. ಕೆಲವರಿಗೆ ಸುಮ್ಮನೆ ಬರೆದರೆ ಸಾಕು ಎಂಬಂತಿದ್ದರೆ, ಮತ್ತೆ ಕೆಲವರಿಗೆ ತಾನು ಬರೆದದ್ದೆಲ್ಲವೂ ಪ್ರಕಟವಾಗಬೇಕೆಂಬ ಹಂಬಲ. ಆದರೆ ಏನನ್ನು ಬರೆಯುವುದು, ಹೇಗೆ ಬರೆಯುವುದು, ಬರೆದದ್ದನ್ನು ಪ್ರಕಟಿಸುವುದು ಹೇಗೆ? ಹುಟ್ಟುತ್ತದೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು. ಕೆಲವು ಪ್ರಶ್ನೆಗಳಿಗೆ ಸ್ವಲ್ಪಾಂಶ ಉತ್ತರ ದೊರೆಯಿತು, ಇನ್ನೇನು ಬರೆಯಬೇಕೆಂದು ಕುಳಿತುಕೊಂಡರೂ ಮತ್ತೆ ಚಡಪಡಿಸುವಿಕೆ-ಗೊಂದಲ. ಸ್ನೇಹಿತರೇ ಇದೆಲ್ಲವೂ ಸಹಜವೇ ಬಿಡಿ. ಆರಂಭದಲ್ಲಿ ಈ ರೀತಿ ಆಗುತ್ತದೆ ಎಂದಾಕ್ಷಣ ಭಯ ಪಡಬೇಡಿ. ನೀವು ಬರಹಗಾರರಾಗಬಹುದು, ಆದರೆ ಮಾಡಬೇಕಾದದ್ದೇನು? ಬರೆಯಬೇಕು ಅಷ್ಟೇ.

ಬರವಣಿಗೆಯು ಒಂದು ಕಲೆ. ಬರೆಯಬೇಕಾದರೆ ಏನನ್ನಾದರೂ ಓದುವ ಅಭ್ಯಾಸ ಬೇಕು ತಾನೆ?. ದಿನಪತ್ರಿಕೆಗಳು, ವಾರಪತ್ರಿಕೆಗಳು, ಕಾದಂಬರಿಗಳು, ಮೌಲ್ಯಯುತ ಸಾಹಿತ್ಯ ಕೃತಿಗಳು ಹಾಗೂ ಇತರೆ ನಿಯತಕಾಲಿಕಗಳನ್ನು ಓದಿ, ಅಷ್ಟೇ ಅಲ್ಲ ಗಮನವಿಟ್ಟು ಅಭ್ಯಾಸ ಮಾಡಿ. ನೀವು ಓದುವ ಪತ್ರಿಕೆ, ಇಲ್ಲವೇ ಕೃತಿಗಳಲ್ಲಿ ಇರುವ ಬಿಡಿ ಲೇಖನಗಳು, ಬರಹಗಳನ್ನು ಗಮನಿಸಿ. ಆಯಾ ಲೇಖನಗಳನ್ನು ಬರೆದ ಬರಹಗಾರರ ಗುಟ್ಟೇನು? ಅವರು ಈ ಲೇಖನಗಳನ್ನು ಹೇಗೆ ಬರೆದರು? ಅವರು ಅನುಸರಿಸಿದ ರೀತಿ ಯಾವುದು? ಇಷ್ಟೊಂದು ಮಾಹಿತಿ-ವಿಷಯ ಅವರಿಗೆ ಅಭ್ಯವಾದದ್ದು ಎಲ್ಲಿ? ಇಷ್ಟೊಂದು ಆಕರ್ಷಕವಾಗಿ ಬರೆಯಲು ಹೇಗೆ ಸಾಧ್ಯವಾಯಿತು? ಸಮಯ ಹೇಗೆ ನಿರ್ವಹಿಸಿದರು? ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಇಷ್ಟೊಂದು ಅಧಿಕಾರಯುಕ್ತವಾಗಿ ಬರೆದದ್ದು ಹೇಗೆ ?ಮೊದಲಾದ ಪ್ರಶ್ನೆಗಳನ್ನು ನಿಮ್ಮಲ್ಲೇ ಕೇಳಿಕೊಳ್ಳಿ. ಇದಕ್ಕೆಲ್ಲ ಉತ್ತರ ಹುಡುಕುತ್ತಾ ಹೋದಂತೆ ಒಬ್ಬ ಬರಹಗಾರನಲ್ಲಿ ಇರಬೇಕಾದ ಗುಣ, ಕೌಶಲ್ಯಗಳು ತನ್ನಿಂತಾನೆ ನಿಮಗೆ ಗೋಚರಿಸುತ್ತದೆ. ನೀವು ಓದಿರುವ ಬರಹದ ಹಿಂದೆ ಸಾಕಷ್ಟು ಪರಿಶ್ರಮ, ದೀರ್ಘವಾದ ಅಧ್ಯಯನ, ಓಡಾಟ, ವಿಷಯ ಸಂಗ್ರಹಣೆ, ಎಲ್ಲಕ್ಕಿಂತ ಮಿಗಿಲಾಗಿ ಬರೆಯಬೇಕೆಂಬ ಛಲ ಇರುವುದು ಕಂಡು ಬರುತ್ತದೆ. ಇವೆಲ್ಲವನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮಲ್ಲಿ ವೃದ್ಧಿಸಿಕೊಂಡರೆ ನೀವು ಬರೆಯಬಹುದು, ಅದು ಪ್ರಕಟವಾಗಬಹುದು, ನೀವು ಬರಹಗಾರರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು.
ಬರವಣಿಗೆಯ ಮೊದಲ ಹಂತವೇ ಬರವಣಿಗೆ. ಬರೆಯುತ್ತೇನೆ ಎನ್ನುವುದಕ್ಕಿಂತ, ಬರವಣಿಗೆಯ ಬಗ್ಗೆ ಮಾತಾಡುವುದಕ್ಕಿಂತ ಮೊದಲು ಬರೆಯುವುದೇ ಉತ್ತಮ. ನೀವು ಬರಹಗಾರರು ಎಂದು ತಿಳಿಯುವುದೇ ನೀವು ಬರೆಯಲು ಆರಂಭ ಮಾಡಿದಾಗ, ಅರ್ಥಾತ್ ಬರೆದು ಮುಗಿದಾಗ. ನಿಮ್ಮ ಬರವಣಿಗೆಯ ಸಾಮಥ್ರ್ಯಗಳು ಅಥವಾ ದೌರ್ಬಲ್ಯಗಳು ಗೋಚರಿಸುವುದೇ ಬರವಣಿಗೆಗೆ ಕುಳಿತಾಗ. ಅದ್ದರಿಂದ ಬರಹಗಾರರಾಗಬೇಕೆಂದು ಬಯಸುವವರು ಪ್ರತಿದಿನ ಏನಾದರೊಂದು ವಿಷಯದ ಬಗ್ಗೆ ಕನಿಷ್ಠ ಐದಾರು ಪುಟದಷ್ಟಾದರೂ ಬರೆಯುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಬರೆಯುವ ಮೂಡ್, ಸಂದರ್ಭ, ಸೌಕರ್ಯ, ಸಮಯಕ್ಕೆ ಕಾಯದೇ ನಿಮಗೆ ಅನುಕೂಲವಾದ ಸ್ಥಳ ಆರಿಸಿಕೊಂಡು ನಿಮಗಿಷ್ಟ ಬಂದ ವಿಷಯದ ಬಗ್ಗೆ ಈಗಲೇ ಬರೆಯಿರಿ, ಬರೆಯುತ್ತಲೇ ಇರಿ. ಅದು ಉಪಯೋಗವೋ? ಪ್ರಕಟಣೆಗೆ ಯೋಗ್ಯವೋ ಮುಖ್ಯವಲ್ಲ, ಮೊದಲಿಗೆ ನೀವು ಬರೆಯುವುದೇ ಮುಖ್ಯ.
ಗೋಪಾಲ ಅಂಚನ್
