ಮೂಡುಬಿದಿರೆ:ಕರಾಟೆಯಂತಹ ಕಲೆಯನ್ನು ತಮಿಳುನಾಡಿನಲ್ಲಿ ಪ್ರಾಥಮಿಕ ಪಠ್ಯದಲ್ಲಿ ಕಡ್ಡಾಯಗೊಳಿಸಿದೆ. ನಮ್ಮ ರಾಜ್ಯದಲ್ಲಿಯೂ ಕ್ರೀಡೆಗೆ ಇಂತಹ ಪ್ರೊತ್ಸಾಹ ದೊರೆಯುವಂತಾಗಬೇಕು. ಕಬಡ್ಡಿ, ಹಾಕಿಯನ್ನು ಕೊಡುಗೆಯಾಗಿ ನೀಡಿದ ನಮ್ಮ ದೇಶದಲ್ಲಿ ಮುತ್ತು ರತ್ನಗಳಂತಹ ಕ್ರೀಡಾ ಪ್ರತಿಭೆಗಳಿಗೆ ಕೊರತೆ ಇಲ್ಲ. ಎಂದು ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು. ಅವರು ಶನಿವಾರ ಬೆಳಿಗ್ಗೆ ಪಂಡಿತ್ ರೆಸಾರ್ಟ್ನಲ್ಲಿ ಇತ್ತೀಚಿಗೆ ಮಲೇಶಿಯಾದಲ್ಲಿ ನಡೆದಿದ್ದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಬಂಟ್ವಾಳ ವಾಮದಪದವಿನ ಸೋನಿ ಶೆಟ್ಟಿ ಅವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಕ್ರೀಡೆ ಸಹಿತ ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಪಂಡಿತ್ ರೆಸಾರ್ಟ್ ಪ್ರತಿಭಾನ್ವಿತರಿಗೆ ರಿಸೋರ್ಸ್ ಆಗಿ ಬದಲಾಗಿದೆ ಎಂದವರು ಶುಭ ಹಾರೈಸಿದರು.

ಚಿನ್ನದ ಪದಕ ವಿಜೇತೆ ಸೋನಿ ಶೆಟ್ಟಿ ಮಾತನಾಡಿ ಆರ್ಥಿಕವಾಗಿ ತೊಂದರೆಯಲ್ಲಿದ್ದಾಗ ಪಂಡಿತ್ ರೆಸಾರ್ಟ್ ವತಿಯಿಂದ ದೊರೆತ 75 ಸಾವಿರ ನಗದಿನ ನೆರವು ತನಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿತು. ಎಲ್ಲರ ಸಹಕಾರದಿಂದ ಇನ್ನಷ್ಟು ಸಾಧಿಸುವ ಉತ್ಸಾಹವಿದೆ ಎಂದರು.
ಪಂಡಿತ್ ರೆಸಾರ್ಟ್ ವತಿಯಿಂದ ನಡೆದ ಈ ಅಭಿನಂದನಾ ಸಮಾರಂಭದಲ್ಲಿ ರೆಸಾರ್ಟ್ನ ಮುಖ್ಯ ಪ್ರವರ್ತಕ ಲಾಲ್ ಗೋಯೆಲ್ ಮಾತನಾಡಿ ನಮ್ಮ ದೇಶದ ಜನಸಂಖ್ಯೆಯನ್ನು ಸಂಪನ್ಮೂಲ ಎಂದೇ ಭಾವಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ಸೋನಿ ಶೆಟ್ಟಿಯಂತಹ ಅನೇಕ ಚಿನ್ನದ ಪ್ರತಿಭೆಗಳು ಇಲ್ಲಿ ಅವಕಾಶವನ್ನು ಪಡೆದು ಸಾಧಿಸುವಂತಾಗಬೇಕು ಎಂದ ಅವರು ಸೋನಿ ಶೆಟ್ಟಿ 2020ರ ಒಲಂಪಿಕ್ನಲ್ಲಿ ಸೇರಲಿರುವ ಕರಾಟೆಯಲ್ಲಿ ಗೆಲ್ಲುವ ಗುರಿ ಹೊಂದಬೇಕು ಎಂದು ಹಾರೈಸಿದರು.
ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಜಯಶ್ರೀ ಅಮರನಾಥ ಶೆಟ್ಟಿ, ಎಕ್ಸಿಸ್ ಬ್ಯಾಂಕ್ ಪ್ರಬಂಧಕ ಗಣೇಶ್ ಭಟ್, ಶೋರಿನ್ ರಿಯೂ ಕರಾಟೆ ಸಂಸ್ಥೆಯ ಮುಖ್ಯಸ್ಥ ನದೀಮ್, ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಪಂಡಿತ್ ರೆಸಾರ್ಟ್ನ ರಜನೀ ಗೋಯೆಲ್, ಅಧ್ಯಕ್ಷೆ ರೂಬಿ ಅಗರ್ವಾಲ್ ಉಪಸ್ಥಿತರಿದ್ದರು. ರೀಟಾ ಡೆಸಾ ಮತ್ತು ಗ್ರೇಸಿ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.
