ಬಂಟ್ವಾಳ: ಪಾಣೆಮಂಗಳೂರು ಪೇಟೆಯಲ್ಲಿ ವಸ್ತ್ರಮಳಿಗೆಯೊಂದರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಲಕ್ಷಾಂತರ ಮೌಲ್ಯದ ಬಟ್ಟೆಬರೆ ಮತ್ತಿತರ ಸಾಮಾಗ್ರಿ ಸುಟ್ಟು ಕರಕಲಾದ ಘಟನೆ ಗುರುವಾರ ನಡೆದಿದೆ.
ನರಿಕೊಂಬು ಗ್ರಾಮದ ಉಪ್ಪುಗುಡ್ಡೆ ನಿವಾಸಿ ಅಬ್ದುಲ್ ಖಾದರ್ ಮತ್ತು ಇವರ ಸಹೋದರ ಇಸ್ಮಾಯಿಲ್ ಎಂಬವರು ನಡೆಸುತ್ತಿರುವ ಈ ವಸ್ತ್ರಮಳಿಗೆಯಲ್ಲಿ ಬುಧವಾರ ತಡರಾತ್ರಿ ಸುಮಾರು ಎರಡು ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸ್ಥಳೀಯ ವ್ಯಕ್ತಿಯೊಬ್ಬರು ದೂರದ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಅಂಗಡಿಲ್ಲಿ ಬೆಂಕಿ ಜ್ವಾಲೆ ಕಂಡು ಬಂದಿದೆ. ತಕ್ಷಣವೇ ಅವರು ಅಂಗಡಿ ಮಾಲಕರಿಗೆ ಸುದ್ದಿ ತಿಳಿಸಿದ ಬಳಿಕ ಅಗ್ನಿಶಾಮಕ ದಳ ಕರೆಸಲಾಯಿತು.

ನೀರಿನ ಕೊರತೆ:
ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸುತ್ತಿದ್ದಂತೆಯೇ ಬಹುತೇಕ ಎಲ್ಲಾ ಬಟ್ಟೆಬರೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ನಡುವೆ ಅಗ್ನಿಶಾಮಕ ಟ್ಯಾಂಕರಿನಲ್ಲಿ ನೀರು ಖಾಲಿಯಾಗಿ ಮತ್ತೆ ತುಂಬಿಸಿಕೊಂಡು ಬರುವಷ್ಟರಲ್ಲಿ ಅಂಗಡಿ ಒಳಗಿನ ಮರದ ಮಾಡು ಸಂಪೂರ್ಣ ಭಸ್ಮವಾಗಿದೆ.
ಸ್ಥಳೀಯ ನಿವಾಸಿ ಜೇಮ್ಸ್ ಸೆರಾವೋ ಎಂಬವರಿಗೆ ಸೇರಿದ ಈ ಹಳೆ ಕಟ್ಟಡವನ್ನು ಕಳೆದ ವರ್ಷವಷ್ಟೇ ವಸ್ತ್ರ ಮಳಿಗೆಯನ್ನು ಪುನರ್ ನವೀಕರಿಸಲಾಗಿದ್ದು, ಬೆಂಕಿ ಜ್ವಾಲೆಯಿಂದ ಪಕ್ಕದಲ್ಲೇ ಇದ್ದ ಸಿಂಡಿಕೇಟ್ ಬ್ಯಾಂಕ್ ಶಾಖೆ, ಮೊಬೈಲ್ ಟವರ್ಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದಾಗಿ ಒಟ್ಟು ರೂ 15ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಇದೇ ವೇಳೆ ಕಟ್ಟಡ ಮಾಲೀಕ ಜೇಮ್ಸ್ ಸೆರಾವೋ ಕೂಡಾ ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದು, ಬೆಂಕಿಯಿಂದ ತನ್ನ ಕಟ್ಟಡ ಮತ್ತು ಮನೆಗೆ ರೂ 5ಲಕ್ಷ ಮೊತ್ತದ ನಷ್ಟ ಸಂಭವಿಸಿದೆ ಎಂದು ದೂರಿಕೊಂಡಿದ್ದಾರೆ.
ನಗರ ಠಾಣಾಧಿಕಾರಿ ನಂದಕುಮಾರ್, ಗ್ರಾಮಕರಣಿಕ ಎ.ಪಿ.ಭಟ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಡಿಲು:
ವಸ್ತ್ರಮಳಿಗೆಯಲ್ಲಿ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದ್ದು, ಬುಧವಾರ ತಡರಾತ್ರಿ ಕಾಣಿಸಿಕೊಂಡಿದ್ದ ಭಾರೀ ಸಿಡಿಲು ಮತ್ತು ಮಿಂಚಿನಿಂದಲೇ ಬೆಂಕಿ ಅವಘಡ ಸಂಭವಿಸಿದ ಎನ್ನಲಾಗಿದೆ. ಕಳೆದ ಸೋಮವಾರ ಸಂಜೆ ಇಲ್ಲಿನ ಬಂಗ್ಲೆಗುಡ್ಡೆ ಎಂಬಲ್ಲಿ ಸಿಡಿಲಿಗೆ ಅಬೂಬಕ್ಕರ್ ಸಿದ್ದಿಕ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.





