ಬಂಟ್ವಾಳ:ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ಸಮೀಪದ ಕಂಬಳದಡ್ಡ ಎಂಬಲ್ಲಿ ಗುರುವಾರ ಬೆಳಿಗ್ಗೆ ಕೊರೆದ ಕೊಳವೆ ಬಾವಿಯಲ್ಲಿ ಕೊನೆಗೂ ಭಾರೀ ಪ್ರಮಾಣದಲ್ಲಿ ನೀರು ಉಕ್ಕಿ ಬಂದ ಪರಿಣಾಮ ಸ್ಥಳೀಯರು ದಿಢೀರ್ ಪ್ರತಿಭಟನೆ ರದ್ದುಗೊಳಿಸಿದ ಪ್ರಸಂಗ ನಡೆದಿದೆ.
ಇಲ್ಲಿನ ಕೈತ್ರೋಡಿ ಪರಿಸರದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀರಾ ಉಲ್ಬಣಗೊಂಡಿದ್ದರೂ ಜನಪ್ರತಿನಿಧಿಗಳು ಮತ್ತು ಪಂಚಾಯಿತಿ ಅಧಿಕಾರಿಗಳು ಮಾತ್ರ ಟ್ಯಾಂಕರ್ ನೀರು ಪೂರೈಕೆಯನ್ನೂ ಮಾಡದೆ ಮೌನವಾಗಿದ್ದಾರೆ ಎಂದು ಆರೋಪಿಸಿ ಗುರುವಾರ ಬೆಳಿಗ್ಗೆ ಸ್ಥಳೀಯ ನೂರಾರು ಮಂದಿ ಮಹಿಳೆಯರು ಕೊಡಪಾನ ಹಿಡಿದು ಮೆರವಣಿಗೆ ನಡೆಸಿದ ಬಳಿಕ ಪಂಚಾಯಿತಿಗೆ ಬೀಗ ಜಡಿಯಲು ಭಾರೀ ಸಿದ್ಧತೆ ನಡೆಸಿದ್ದರು.

ಈ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ತಕ್ಷಣವೇ ಎಚ್ಚೆತ್ತುಕೊಂಡ ಅಧಿಕಾರಿಗಳು ಗುರುವಾರ ಬೆಳಿಗ್ಗೆ ತರಾತುರಿಯಲ್ಲಿ ಕೊಳವೆ ಬಾವಿ ಕೊರೆಯುವ ಯಂತ್ರ ರವಾನಿಸಿ, ಕಳೆದ ಒಂದು ವಾರದ ಹಿಂದೆಯಷ್ಟೇ ಗುರುತಿಸಿದ್ದ ಇಲ್ಲಿನ ಸರ್ಕಾರಿ ರಸ್ತೆಯೊಂದರ ಬದಿ ಕೊಳವೆ ಬಾವಿ ಕೊರೆದಿದ್ದಾರೆ.
ಇದರಿಂದಾಗಿ ಪ್ರತಿಭಟನೆಯನ್ನು ದಿಢೀರನೆ ರದ್ದುಗೊಳಿಸಿದ ಸ್ಥಳೀಯ ಮಹಿಳೆಯರು ಮಧ್ಯಾಹ್ನತನಕ ಕುತೂಹಲದಿಂದ ಕಾದು ನಿಂತು ಕೊಳವೆ ಬಾವಿಯಲ್ಲಿ ನೀರು ಉಕ್ಕಿ ಬರುತ್ತಿರುವುದನ್ನು ಕಂಡು ಬಳಿಕ ಸಂತಸದಿಂದ ಮನೆಗೆ ಮರಳಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿನ ಕೈತ್ರೋಡಿ ಪರಿಸರದ ಅಂಗನವಾಡಿ ಕೇಂದ್ರ ಸಹಿತ ಸುಮಾರು 100ಕ್ಕೂ ಮಿಕ್ಕಿ ಮನೆಗಳಿಗೆ ಕುಡಿಯುವ ನೀರಿನ ಕೊರತೆ ವಿಪರೀತ ಕಾಡುತ್ತಿತ್ತು. ಈ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಕಳೆದ ವರ್ಷ ನೀರಿನ ಪಂಚಾಯಿತಿಗೆ ಪಾವತಿಸುವ ಮಾಸಿಕ ನೀರಿನ ಕರವನ್ನು ಕಟ್ಟದೆ ಪ್ರತಿಭಟಿಸಿದ್ದರು. ಇದಕ್ಕೆ ಪ್ರತಿಯಾಗಿ ಎರಡು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ಕುಡಿಯುವ ನೀರಿನ ಪಂಪ್ಹೌಸ್ಗೆ ಇಲ್ಲಿನ ಪಿಡಿಒ ವೆಂಕಟೇಶ್ ಎಂಬವರು ಬೀಗ ಜಡಿದು ವಿವಾದಕ್ಕೆ ಕಾರಣವಾಗಿದ್ದರು.
ಈ ಬಗ್ಗೆ ಸ್ಥಳೀಯ ನೂರಾರು ಮಂದಿ ಧಾವಿಸಿ ಪಂಚಾಯಿತಿಗೆ ದಿಡೀರ್ ಮುತ್ತಿಗೆ ಹಾಕಿ ಪಿಡಿಒ ವರ್ಗವಣೆಗೆ ಆಗ್ರಹಿಸಿದ ಬಳಿಕ ಪಂಪ್ಹೌಸ್ ಬೀಗ ತೆರೆಯಲಾಗಿತ್ತು. ಆರು ತಿಂಗಳ ಬಳಿಕ ಸ್ಥಳೀಯ ಕೊಳವೆ ಬಾವಿಯಿಂದ ಹೊಸ ಪೈಪ್ಲೈನ್ ಅಳವಡಿಸಿ ಕೈತ್ರೋಡಿಗೆ ನೀರು ಪೂರೈಸುವ ಪ್ರಯತ್ನ ನಡೆಸಿದ್ದರೂ ಸಂಪೂರ್ಣ ಸಫಲವಾಗಲಿಲ್ಲ.
ಇಲ್ಲಿನ ಕೈತ್ರೋಡಿ ಪರಿಸರದಲ್ಲಿ ಪೈಪ್ಲೈನ್ ಅಳವಡಿಸಲು ಖರ್ಚು ಅಧಿಕವಾಗುತ್ತದೆ ಎಂಬ ಕಾರಣಕ್ಕಾಗಿ ಕಳೆದ ಆರೇಳು ವರ್ಷಗಳಿಂದ ಅಧಿಕಾರಿಗಳು ಒಂದೇ ಕಡೆ ಸುಮಾರು 10ಕ್ಕೂ ಮಿಕ್ಕಿ ಕೊಳವೆ ಬಾವಿ ಕೊರೆದು ಸರ್ಕಾರಕ್ಕೆ ಸುಮಾರು ಒಂದು ಕೋಟಿಗೂ ಮಿಕ್ಕಿ ಮೊತ್ತದ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಕಳೆದ ವರ್ಷವೂ ಮತ್ತೆ ಅಲ್ಲೇ ಎರಡು ಕೊಳವೆ ಬಾವಿ ಕೊರೆದ ಬಗ್ಗೆ ಸ್ಥಳೀಯರು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ ಪ್ರತ್ಯೇಕ ಸ್ಥಳದಲ್ಲಿ ಕೊರೆಯಲಾದ ಕೊಳವೆ ಬಾವಿಗೆ ತುರ್ತಾಗಿ ಹಳೆ ಪಂಪ್ ಅಳವಡಿಸಲು ವಿದ್ಯುತ್ ಸಂಪರ್ಕ ನೀಡುವಂತೆ ಮೆಸ್ಕಾಂಗೆ ಅರ್ಜಿ ಸಲ್ಲಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗೆ ಸೂಚಿಸಲಾಗಿದೆ ಎಂದು ಜಿ.ಪಂ.ಎಂಜಿನಿಯರ್ ಜಗದೀಶ್ ಪ್ರತಿಕ್ರಿಯಿಸಿದ್ದಾರೆ.
