ಬಂಟ್ವಾಳ; ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಮತ್ತು ಬಿ.ಸಿ.ರೋಡಿನಲ್ಲಿ ಪಕ್ಷದ ನೂತನ ಕಛೇರಿ ಯ ಉದ್ಘಾಟನೆ ಮೇ.16 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ ತಿಳಿಸಿದ್ದಾರೆ. ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಕಛೇರಿ ಹಾಗೂ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು, ವಿ.ಪ.ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಹಿತ ಪಕ್ಷದ ರಾಜ್ಯ ಮತ್ತು ಜಿಲ್ಲಾ ನಾಯಕರು ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮೇ.29 ರಂದು ನಡೆಯುವ ಗ್ರಾಮಪಂಚಾಯತ್ ಚುನಾವಣೆಗೆ ಬಿಜೆಪಿ ಪೂರ್ಣ ಸಿದ್ದತೆಯನ್ನು ನಡೆಸಿದ್ದು, ಈಗಾಗಲೇ ಅರ್ಹ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ, ಗ್ರಾಮೀಣ ಪ್ರದೇಶದ ವಿವಿಧ ಸಮಸ್ಯೆ ಸೇರಿದಂತೆ 9/11, ಕಟ್ಟಡ, ಮನೆನಿರ್ಮಾಣಕ್ಕೆ ಪರವಾನಿಗೆ ನೀಡದಿರುವುದು. ಪಡಿತರ ಸಮಸ್ಯೆಗಳನ್ನು ಮುಂದಿಟ್ಟು ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಮತಯಾಚಿಸಲಿದ್ದಾರೆ ಎಂದು ತಿಳಿಸಿದ ಅವರು, ಬಂಟ್ವಾಳ ಕ್ಷೇತ್ರದ 39 ಗ್ರಾಮಪಂಚಾಯತ್ ಗಳ ಪೈಕಿ ಹೆಚ್ಚಿನ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮರಳು ದಂಧೆ- ಅಧಿಕಾರಿಗಳೂ ಶಾಮೀಲು; ಆರೋಪ
ದ.ಕ.ಜಿಲ್ಲೆಯಲ್ಲಿ ಮರಳು ದಂಧೆ ವ್ಯಾಪಕವಾಗಿದ್ದು ಜಿಲ್ಲೆಯ ಮತ್ತು ತಾಲೂಕಿನ ಅಧಿಕಾರಿಗಳು ಕೂಡ ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ, ಹೀಗಾಗಿ ಮರಳು ದಂಧೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ, ಬಿಜೆಪಿ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರ ಗಮನ ಸೆಳೆದಿದೆಯಾದರೂ ಜಿಲ್ಲಾಧಿಕಾರಿಯವರು ಈ ದಂಧೆಯ ವಿರುದ್ದ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ, ಇವರು ಕೇವಲ ಕಾಗದದ ಹುಲಿಯಾಗಿದ್ದಾರೆಯೇ ಹೊರತು, ಸಮಾಜಿಕ ಸಮಸ್ಯೆಯ ಬಗ್ಗೆ ಇವರಿಗೆ ಕಾಳಜಿ ಇಲ್ಲ ಎಂದವರು ಟೀಕಿಸಿದರು.
ಬಹಿರಂಗ ಚರ್ಚೆಗೆ ಬರಲಿ;
ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯ ಸ್ವಚ್ಛಭಾರತ ಅನ್ನು ಧ್ಯೇಯ ವಾಗಿಟ್ಟುಕೊಂಡು ಸಂಸದನ ನೆಲೆಯಲ್ಲಿ ಸಕ್ಯೂರ್ಟ್ ಹೌಸ್ ತನ್ನ ಮನೆಯಂತೆ ಭಾವಿಸಿ ಸ್ವಚ್ಛತೆಗೊಳಿಸಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಯವರು ಕೇವಲ ತೆಂಗಿನ ಕಾಯಿ ಒಡೆಯುವುದನ್ನೇ ಅಭಿವೃದ್ದಿ ಎಂದು ಭಾವಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್ , ಸಂಸದರು ತನ್ನ ಪ್ರದೇಶಾಭಿವೃದ್ದಿ ನಿಧಿಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯಕ್ಕೆ ಬಳಸಿರುವುದರಲ್ಲಿ ರಾಜ್ಯಕ್ಕೇ ಮೊದಲಿಗರಾಗಿದ್ದಾರೆ. ದೇಶದಲ್ಲಿ ಐದನೇ ಸ್ಥಾನದಲ್ಲಿದ್ದಾರೆ ಎಂದು ಸಮರ್ಥಿಸಿದರು. ಸಚಿವ ರೈ ಯವರು ಅಭಿವೃದ್ದಿ ಕಾರ್ಯದ ಕುರಿತಂತೆ ದಾಖಲೆ ಸಹಿತವಾಗಿ ಬಹಿರಂಗ ಚರ್ಚೆಗೆ ಬರುವುದಾದರೆ ನಾವು ಕೂಡ ಸಿದ್ದರಿದ್ದೇವೆ ಎಂದು ಅವರು ಸವಾಲೆಸೆದರು.
ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ತಾ.ಪಂ.ಸದಸ್ಯ ದಿನೇಶ್ ಅಮ್ಟೂರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *