ಬಂಟ್ವಾಳ:ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಕುಪ್ಪಿಲ ಎಂಬಲ್ಲಿ ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ರೈಲ್ವೆ ಹಳಿಗೆ ಮುರಿದು ಬಿದ್ದ ಪರಿಣಾಮ ಕೆಲಹೊತ್ತು ರೈಲು ಸಂಚಾರಕ್ಕೆ ಅಡ್ಡಿಯಾದ ಘಟನೆ ನಡೆದಿದೆ.
4

2
ಸೋಮವಾರ ಸಂಜೆ ರೈಲ್ವೆ ಹಳಿಗೆ ಮರವೊಂದು ಉರುಳಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಎಚ್ಚೆತ್ತು ತಕ್ಷಣವೇ ಬಿ.ಸಿ.ರೋಡ್ ರೈಲ್ವೆ ಸ್ಟೇಶನ್ಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಮಂಗಳೂರು-ಸುಬ್ರಹ್ಮಣ್ಯ ರೈಲು ಸಂಚಾರಕ್ಕೆ ಕೆಲಹೊತ್ತು ಅಡ್ಡಿಯಾಗಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ತಕ್ಷಣವೇ ಸ್ಥಳೀಯರು ಒಟ್ಟು ಸೇರಿಕೊಂಡು ಮರದ ಗೆಲ್ಲುಗಳನ್ನು ಕಡಿದು ಮರವನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸುವಲ್ಲಿ ಯಶಸ್ವಿಯಾದರು. ಕಡೇಶಿವಾಲಯ ಗ್ರಾಮದ ಕೆರೆಮೂಲೆ ನಿವಾಸಿ ಸುನೀತಾ ಎಂಬವರ ಮನೆಗೆ ಸೋಮವಾರ ಸಂಜೆ ಸಿಡಿಲು ಬಡಿದು ಹಾನಿಯಾಗಿದ್ದು, ಅವರ ಪುತ್ರಿ ವನಿತಾ ಅವರಿಗೆ ಸುಟ್ಟ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಬಿ.ಸಿ.ರೋಡ್ ತಲಪಾಡಿ ಮಸೀದಿ ಮಿನಾರ್ಗೆ ಸಿಡಿಲು ಹೊಡೆದು ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು, ಇಲ್ಲಿನ ಸುತ್ತಲಿನ ಒಟ್ಟು 20ಕ್ಕೂ ಮಿಕ್ಕಿ ಮನೆಗಳಿಗೆ ಅಲ್ಪಸ್ವಲ್ಪ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಪಾಣೆಮಂಗಳೂರಿನ ಬಂಗ್ಲೆಗುಡ್ಡೆ ಎಂಬಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಸಿಡಿಲಿನ ಹೊಡೆತದಿಂದ ಮೃತಪಟ್ಟಿದ್ದು, ಪಂಜಿಕಲ್ಲು ಸಮೀಪದ ಪುಂಚೋಡಿ ಎಂಬಲ್ಲಿ ವಿದ್ಯುತ್ ಕಂಬವೊಂದು ಮುರಿದು ಬಿದ್ದು ಬಸ್ ಸಂಚಾರ ಸ್ಥಗಿತಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *