ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಬಂಗ್ಲೆಗುಡ್ಡೆ ಎಂಬಲ್ಲಿ ಸ್ಥಳೀಯ ನಿವಾಸಿ ಪಿ.ಎಚ್. ಇಸುಬು ಎಂಬವರ ಪುತ್ರ ವಿದ್ಯಾರ್ಥಿ ಅಬೂಬಕ್ಕರ್ ಸಿದ್ದಿಕ್ (16) ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
ಈತನು ಸೋಮವಾರ ಸಂಜೆ ಭಾರೀ ಗಾಳಿ ಮಳೆಯಾಗುತ್ತಿದ್ದಂತೆಯೇ ಇಲ್ಲಿನ ರೈತರ ಸೇವಾ ಸಹಕಾರಿ ಬ್ಯಾಂಕಿನ ಬಳಿ ಇರುವ ಬೃಹತ್ ಗಾತ್ರದ ಮಾವಿನ ಮರದಡಿ ಉದುರಿ ಬಿದ್ದ ಮಾವಿನ ಹಣ್ಣು ಹೆಕ್ಕಲು ಇತರ ಸ್ನೇಹಿತರೊಂದಿಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ ಎನ್ನಲಾಗಿದೆ. ಭಾರೀ ಸದ್ದಿನೊಂದಿಗೆ ಸಿಡಿಲಿನ ಶಬ್ಧ ಕೇಳುತ್ತಿದ್ದಂತೆಯೇ ಬಾಲಕ ಕುಸಿದು ಬಿದ್ದಿರುವುದನ್ನು ಕಂಡ ಇತರ ಮಕ್ಕಳು ಬೊಬ್ಬೆ ಹಾಕುತ್ತಾ ಭಯಭೀತರಾಗಿ ಮನೆಗೆ ಓಡಿ ಹೆತ್ತವರಿಗೆ ವಿಷಯ ತಿಳಿಸಿದ್ದಾರೆ.

ತಕ್ಷಣವೇ ಬಾಲಕನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಬಳಿಕ ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಮೃತಪಟ್ಟಿರುವುದನ್ನು ದೃಢಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ, ಬೀಡಿ ಚೆಕ್ಕರ್ ವೃತ್ತಿಯ ಪಿ.ಎಚ್.ಇಸುಬು ಅವರ ನಾಲ್ವರು ಪುತ್ರರ ಪೈಕಿ ಕೊನೆಯವನಾಗಿದ್ದು, ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಯಾಗಿದ್ದರು. ಈಚೆಗೆ ನಡೆದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಬರೆದಿದ್ದ ಈತನು ಫಲಿತಾಂಶ ಪ್ರಕಟಗೊಳ್ಳುವ ಮೊದಲೇ ನಮ್ಮಿಂದ ದೂರವಾಗಿದ್ದಾನೆ ಎಂದು ಹೆತ್ತವರು ಗೋಗರೆದು ಅಳುತ್ತಿರುವ ದೃಶ್ಯ ಮನ ಕಲಕುವಂತಿತ್ತು.
ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ಅಧಿಕಾರಿ ಎ.ಪಿ. ಭಟ್ ಮತ್ತಿತರರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಾಕೃತಿಕ ದುರಂತ ಯೋಜನೆಯಡಿ ಕುಟುಂಬಕ್ಕೆ ರೂ 4ಲಕ್ಷ ಮೊತ್ತದ ಪರಿಹಾರಧನ ನೀಡಲು ಜಿಲ್ಲಾಡಳಿತಕ್ಕೆ ಕಡತ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಭೇಟಿ:
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿ.ಪಂ.ಸದಸ್ಯಚಂದ್ರಪ್ರಕಾಶ ಶೆಟ್ಟಿ, ತಾ.ಪಂ.ಸದಸ್ಯ ಬಿ. ಪದ್ಮಶೇಖರ ಜೈನ್. ನಾಮ ನಿರ್ದೇಶಿತ ಕೌನ್ಸಿಲರ್ ಅಬೂಬಕ್ಕರ್ ಸಿದ್ದಿಕ್ ಸಹಿತ ಇತರರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
