ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಅಡಿ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಮರಳು ಅಡ್ಡೆಗೆ ಕೊನೆಗೂ ಎಚ್ಚೆತ್ತ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಶುಕ್ರವಾರ ಮಧ್ಯಾಹ್ನ ದಿಢೀರ್ ದಾಳಿ ಸಂಘಟಿಸಿದ್ದಾರೆ.


ದಾಳಿ ಸಂದರ್ಭ ದಂಧೆಯಲ್ಲಿ ನಿರತವಾಗಿದ್ದ 4 ಲಾರಿಗಳು, ಒಂದು ಟ್ರಾಕ್ಟರ್ ಹಾಗೂ ನಂಬರ್ ಪ್ಲೇಟ್ ಇಲ್ಲದ ಒಂದು ಟೆರ್ರಾ ವಾಹನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಹಳೆ ನೇತ್ರಾವತಿ ಸೇತುವೆಯ ಅಡಿಭಾಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಗಲು-ರಾತ್ರಿಯೆನ್ನದೆ ನಿರಂತರ ಅಕ್ರಮ ಮರಳು ಮಾಫಿಯಾ ನಡೆಯುತ್ತಿದ್ದು, ಸ್ಥಳೀಯ ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸುವಂತಾಗಿತ್ತು. ಈ ಹಿನ್ನಲೆಯಲ್ಲಿ ಸಾರ್ವಜನಿಕರು ನಿರಂತರ ನೀಡುತ್ತಿದ್ದ ದೂರಿನ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
