ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು-ಬಂಗ್ಲೆಗುಡ್ಡೆಯಲ್ಲಿ ಸ್ಥಳೀಯ ಸದಸ್ಯೆಯ ಗಮನಕ್ಕೆ ಬಾರದೆ ಕೊರೆದ ಕೊಳವೆ ಬಾವಿ ಬಗ್ಗೆ ಮುಖ್ಯಾಧಿಕಾರಿಗೂ ಯಾವುದೇ ಮಾಹಿತಿ ಇಲ್ಲದೆ ಇರುವುದರಿಂದ ಇದು ಅಕ್ರಮವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸದಸ್ಯೆ ಚಂಚಲಾಕ್ಷಿ ಜಿಲ್ಲಾಧಿಕಾರಿಗೆ ದೂರಿದ್ದಾರೆ.
ಇಲ್ಲಿನ ಕೊಳವೆ ಬಾವಿ ರಾಜಕೀಯದ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಕೊಳವೆ ಬಾವಿ ಕೊರೆದ ಬಳಿಕ ಸ್ವತಃ ಸದಸ್ಯೆ ಚಂಚಲಾಕ್ಷಿ ಕಛೇರಿಗೆ ಬಂದು ಅಲವತ್ತುಕೊಂಡ ಬಳಿಕವಷ್ಟೆ ನನ್ನ ಗಮನಕ್ಕೆ ಬಂದಿದೆ. ತಕ್ಷಣ ಇಂಜಿನಿಯರ್ ಪ್ರಭಾ ಅವರನ್ನು ಕರೆಸಿ ವಿಚಾರಿಸಿದಾಗ ಮಾಜಿ ಸದಸ್ಯ ರಫೀಕ್ ಎಂಬವರ ದೂರವಾಣಿ ಕರೆ ಮೇರೆಗೆ ಕೊಳವೆ ಬಾವಿ ಕೊರೆಸಿದ್ದೇನೆ ಎಂದು ಉತ್ತರಿಸಿದ್ದಾರೆ ಎಂದಿದ್ದಾರೆ. ಸ್ವತಃ ವಾರ್ಡ್ ಸದಸ್ಯೆಯ ಗಮನಕ್ಕೆ ಬಾರದೆ ಯಾರೋ ಒಬ್ಬ ಮಾಜಿ ಸದಸ್ಯ ಅಥವಾ ಪಕ್ಷದ ಫುಡಾರಿ ಹೇಳಿದ ಮಾತ್ರಕ್ಕೆ ಕಾಮಗಾರಿ ಆರಂಭಿಸಿರುವ ಇಂಜಿನಿಯರ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಚಂಚಲಾಕ್ಷಿ ಜಿಲ್ಲಾಧಿಕಾರಿಗೆ ಆಗ್ರಹಿಸಿದ್ದಾರೆ.
08 May Borewell
ವಾರ್ಡ್ ನಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳು ಇಂಜಿನಿಯರ್ ಅವರ ನಿರಾಸಕ್ತಿ ಹಾಗೂ ಬೇಜವಾಬ್ದಾರಿಯಿಂದ ನೆನೆಗುದಿಗೆ ಬಿದ್ದಿದ್ದರೂ ಯಾರೋ ಹೇಳಿದ ಮಾತ್ರಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳುವ ಇಂಜಿನಿಯರ್ ಪ್ರಭಾ ಅವರನ್ನು ತಕ್ಷಣ ವಾರ್ಡ್ ನಿಂದ ಬದಲಾಯಿಸುವಂತೆಯೂ ಚಂಚಲಾಕ್ಷಿ ಆಗ್ರಹಿಸಿದ್ದಾರೆ.
ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ
ವಾರ್ಡ್  ಅಭಿವೃದ್ದಿ ಕಾಮಗಾರಿಗಳ ಬಗ್ಗೆ ತಮ್ಮೊಂದಿಗೆ ಸ್ಪಂದಿಸುತ್ತಿಲ್ಲ ಎಂದು ಪಾಣೆಮಂಗಳೂರು ವಾರ್ಡ್  ಮಹಿಳಾ ಪ್ರತಿನಿಧಿಗಳಾದ ಚಂಚಲಾಕ್ಷಿ, ಜೆಸಿಂತಾ ಡಿಸೋಜ ಹಾಗೂ ಸಂಜೀವಿ ಅವರು ಈ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರಿಗೆ ಲಿಖಿತ ಮನವಿ ನೀಡಿದ್ದರು. ಈ ಸಂದರ್ಭ ಸಚಿವರು ಮಹಿಳಾ ಪ್ರತಿನಿಧಿಗಳ ಮಾತಿಗೆ ಬೆಲೆ ಕಲ್ಪಿಸಿ ಇಂಜಿನಿಯರ್ಗಳನ್ನು ಬದಲಾಯಿಸುವಂತೆ ಮುಖ್ಯಾಧಿಕಾರಿಗೂ ಸೂಚಿಸಿದ್ದರು. ಆದರೆ ಆ ಬಳಿಕ ಹೊರಗಿನ ವ್ಯಕ್ತಿಗಳ ದೂರವಾಣಿ ಕರೆಗೆ ಮನ್ನಣೆ ನೀಡಿದ ಮುಖ್ಯಾಧಿಕಾರಿ ಸಚಿವರ ಸೂಚನೆಯನ್ನೂ ಧಿಕ್ಕರಿಸಿ ಇಂಜಿನಿಯರ್ ಬದಲಾವಣೆ ತಡೆ ಹಿಡಿದಿದ್ದಾರೆ ಎಂದು ಸದಸ್ಯರು ದೂರಿದ್ದಾರೆ. ಅಧ್ಯಕ್ಷರು ಈ ಬಗ್ಗೆ ಚಕಾರವೆತ್ತಿಲ್ಲ ಎಂದಿರುವ ಸದಸ್ಯರು ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು ಸ್ವತಃ ಮಹಿಳೆಯರಾಗಿದ್ದುಕೊಂಡು ಮಹಿಳಾ ಪ್ರತಿನಿಧಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಇಲ್ಲಿನ ಪುರಸಭೆ ಲಂಗುಲಗಾಮಿಲ್ಲದ ಕುದುರೆಯಂತೆ ಓಡುತ್ತಿದ್ದು, ಅಧ್ಯಕ್ಷರಿಗೆ ಸ್ವಪಕ್ಷದ ಸದಸ್ಯರ ಮೇಲೆ ಹಿಡಿತವಿಲ್ಲ. ಮುಖ್ಯಾಧಿಕಾರಿಗೆ ಕೈಕೆಳಗಿನ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮೇಲೆಯೂ ಹಿಡಿತವಿಲ್ಲ ಎಂಬ ಆರೋಪ ಸಾರ್ವಜನಿಕವಾಗಿ ಕೇಳಿ ಬರುತ್ತಿದ್ದು, ಸ್ವತಃ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಈ ಬಗ್ಗೆ ಅಸಹಾಯಕತೆಯ ಮಾತುಗಳಿಂದ ಪ್ರತಿಕ್ರಯಿಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *