ಬಂಟ್ವಾಳ : ಬಿ ಸಿ ರೋಡಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬೃಹತ್ ಮರವೊಂದು ಅಪಾಯದ ಸನ್ನಿವೇಶ ಆಹ್ವಾನಿಸುತ್ತಿರುವ ಬಗ್ಗೆ ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಮುಖ್ಯ ಪೇಟೆಯ ಪ್ರಣಾಮ್ ಹೋಟೆಲ್ ಬಳಿ ಇರುವ ಈ ಬೃಹತ್ ಅಶ್ವತ್ಥ ಮರ ಬಹಳಷ್ಟು ಪುರಾತನ ಕಾಲದ್ದಾಗಿದ್ದು, ಇದೀಗ ಸಾರ್ವಜನಿಕರ ಹಾಗೂ ವಾಹನ ಸವಾರರ ಪಾಲಿಗೆ ಅಪಾಯದ ಕರೆಗಂಟೆ ಭಾರಿಸುತ್ತಿದೆ.
03 May Mara
ಈ ಮರದ ಅಡಿಭಾಗದಲ್ಲೇ ವಿದ್ಯುತ್ ಹಾಗೂ ಕೇಬಲ್ ಟಿವಿ ತಂತಿಗಳೂ ಹಾದುಹೋಗಿದ್ದು, ಗಾಳಿ-ಮಳೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಸ್ಥಳೀಯರು ಈಗಾಗಲೇ ಈ ಮರದ ರೆಂಬೆ-ಕೊಂಬೆಗಳು ಒಣಗಿದ್ದು, ಮಳೆ ಬರುವ ಸಂದರ್ಭ ಯಾವುದೇ ಕ್ಷಣ ಮುರಿದು ಬೀಳುವ ಸಾಧ್ಯತೆ ಇದೆ ಎನ್ನುತ್ತಾರೆ. ಈ ಹಿಂದೆಯೇ ಕೆಲವು ಬಾರಿ ಮಳೆ-ಗಾಳಿ ಬರುವ ಸಂದರ್ಭ ಇದರ ಕೊಂಬೆಗಳು ಮುರಿದು ಬಿದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯಗಳು ಸಂಭವಿಸಿಲ್ಲ. ಈ ಮರದ ಕೆಳಭಾಗದಲ್ಲಿ ಹೂವಿನ ವ್ಯಾಪಾರಿಗಳು ಹೂ ಮಾರಾಟದಲ್ಲಿ ತೊಡಗಿಸಿಕೊಂಡಿರುವುದೇ ಅಲ್ಲದೆ ಸಮೀಪದ ಹೋಟೆಲ್ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ಪಾರ್ಕ್ ಮಾಡಿಯೂ ಹೋಗುತ್ತಾರೆ. ಈ ಎಲ್ಲ ಹಿನ್ನಲೆಯಿಂದಲೂ ಮರ ಅಪಾಯಕಾರಿಯಾಗಿ ಕಂಡು ಬರುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಬಿ ಸಿ ರೋಡು ಹೃದಯ ಭಾಗದಲ್ಲಿ ಈ ಹಿಂದೆ ಇಂತಹದ್ದೇ ಅಪಾಯಕಾರಿ ಮರವೊಂದಿತ್ತು. ಇದನ್ನು ಹಿಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ಅವಧಿಯಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿ ಸಂದರ್ಭ ಕೆಲವೊಂದು ಅಡೆತಡೆಗಳಿದ್ದರೂ ಚಾಣಾಕ್ಷತೆ ಮೆರೆದು ಮರವನ್ನು ಧರಾಶಾಹಿಗೊಳಿಸಿ ಸಾರ್ವಜನಿಕರಿಗೆ ರಕ್ಷಣೆ ನೀಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಪಾದರಸ ಚುರುಕಿನ ಖ್ಯಾತಿಯ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಅವರು ಮತ್ತೊಮ್ಮೆ ಬಿ ಸಿ ರೋಡಿನತ್ತ ದೃಷ್ಟಿ ಹಾಯಿಸಿ ಇಲ್ಲಿರುವ ಇನ್ನೊಂದು ಅಪಾಯಕಾರಿ ಮರಕ್ಕೆ ಕಾಯಕಲ್ಪ ಒದಗಿಸುವ ಮೂಲಕ ಸಾರ್ವಜನಿಕರ ಪ್ರಾಣ, ಸೊತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಗಮನ ಹರಿಸುವಂತೆ ಆಗ್ರಹಿಸಿದ್ದಾರೆ.

By Suddi9

Leave a Reply

Your email address will not be published. Required fields are marked *