ಬಂಟ್ವಾಳ: ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಅಜಿಲಮೊಗರು ಸಮೀಪದ ಗಂಡಿ ಎಂಬಲ್ಲಿನ ನೇತ್ರಾವತಿ ಕಿನಾರೆಯಲ್ಲಿ ಕಳೆದ ಹಲವು ದಿನಗಳಿಂದ ಅವ್ಯಾಹತವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿದ್ದಾರೆ.
30bntph2

30bntph3

30bntph4

30bntph5

30bntph6
ಗಂಡಿ ಎಂಬಲ್ಲಿನ ನೇತ್ರಾವತಿ ಕಿನಾರೆಯಲ್ಲಿ ಹಗಲು-ರಾತ್ರಿಯೆನ್ನದೆ ಬೃಹತ್ ಯಂತ್ರೋಪಕರಣಗಳನ್ನು ಅಳಡಿಸಿ ಯಾಂತ್ರಿಕ ಬೋಟ್‍ಗಳ ಮೂಲಕ ಮರಳು ಮೇಲೆತ್ತಿ ಈ ದಂಧೆಯನ್ನು ನಡೆಸಲಾಗುತ್ತಿದ್ದು, ರಾತ್ರಿ ವೇಳೆ ಟಿಪ್ಪರ್ ಹಾಗೂ ಬೃಹತ್ ಲಾರಿಗಳ ಮೂಲಕ ರಾತ್ರಿ ವೇಳೆ ಸಾಗಾಟ ನಡೆಸಲಾಗುತ್ತಿದೆ ಎಂದು ಆರೋಪಿಸುವ ಸ್ಥಳೀಯರು ಈ ಅಕ್ರಮ ಮರಳುಗಾರಿಕೆ ಹಾಗೂ ಸಾಗಾಟದಿಂದ ಪರಿಸರದ ಜನರ ನೆಮ್ಮದಿ ಕೆಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೆ ಅಜಿಲಮೊಗರು ಮಸೀದಿ ಮುಂಭಾಗದ ನದಿ ತೀರದಲ್ಲಿ ಮಧ್ಯ ರಾತ್ರಿ ಮರಳು ಸಾಗಾಟ ನಡೆಸುತ್ತಿದ್ದ ಹಾಸನ ಮೂಲದ ಲಾರಿಯೊಂದು ಉರುಳಿ ಬಿದ್ದು, ಮರಳುಗಳೆಲ್ಲ ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಕೂದಲೆಳೆಯ ಅಂತರದಲ್ಲಿ ಲಾರಿ ನದಿಗೆ ಉರುಳಿ ಬೀಳುವುದರಿಂದ ತಪ್ಪಿ ಹೋಗಿತ್ತು. ಘಟನೆಯಿಂದ ಲಾರಿ ಚಾಲಕ ಹಾಸನ ಮೂಲದ ನಿವಾಸಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಅಕ್ರಮ ಸಾಗಾಟ ಇದಾಗಿದ್ದರಿಂದ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿರಲಿಲ್ಲ. ಈ ಬಗ್ಗೆ ಕರಾವಳಿ ಅಲೆ ಸಚಿತ್ರ ವರದಿಯನ್ನೂ ಪ್ರಕಟಿಸಿತ್ತು. ಆ ಬಳಿಕವೂ ಇಲ್ಲಿನ ಮರಳು ದಂಧೆಗೆ ಯಾವುದೇ ಕಡಿವಾಣ ಬಿದ್ದಿಲ್ಲ ಎನ್ನುವ ಸ್ಥಳೀಯರು ತಕ್ಷಣ ಸಂಬಂಧಪಟ್ಟ ಇಲಾಖಾಧಿಕಾರಿಗಳು ಎಚ್ಚೆತ್ತುಕೊಂಡು ಇಲ್ಲಿನ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ಮೂಲಕ ಸ್ಥಳೀಯರಿಗೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *