‘ಬಂಡವಾಳಶಾಹಿ ಸರ್ಕಾರದಿಂದ ಬೀಡಿ ಕಾರ್ಮಿಕರ ಕಡೆಗಣನೆ’
ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೇವಲ ಬಂಡವಾಳಶಾಹಿ ಪರವಾಗಿ ವರ್ತಿಸುತ್ತಿದ್ದು, ಬೀಡಿ ಕಾರ್ಮಿಕರನ್ನು ಸಂಪೂರ್ಣ ಕಡೆಗಣಿಸಿ ಬೀದಿಪಾಲು ಮಾಡಲು ಹೊರಟಿದೆ ಎಂದು ಜಿಲ್ಲಾ ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಅಧ್ಯಕ್ಷ ಪಿ.ಸಂಜೀವ ಆರೋಪಿಸಿದ್ದಾರೆ.
ತಾಲ್ಲೂಕಿನ ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ವತಿಯಿಂದ ಪಾಣೆಮಂಗಳೂರು ಸುಮಂಗಲಾ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ 38ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಕೇಂದ್ರ ಸರ್ಕಾರವು ಬೀಡಿ ಕೈಗಾರಿಗೆ ಮಾರಕವಾಗಿರುವ ‘ಕೋಟ್ಪ ಕಾಯ್ದೆ’ ಜಾರಿಗೊಳಿಸಿ ಬೀಡಿ ನಿಷೇಧಕ್ಕೆ ಪ್ರಯತ್ನಿಸುತ್ತಿದ್ದು, ಆರೋಗ್ಯದ ನೆಪವೊಡ್ಡಿ ಬೀಡಿ ಕೈಗಾರಿಕೆ ಮುಚ್ಚುವುದಾದರೆ ಲಕ್ಷಾಂತರ ಮಂದಿ ಬೀಡಿ ಕಾರ್ಮಿಕರಿಗೆ ಬದಲಿ ಉದ್ಯೋಗ ನೀಡಿ ಎಂದು ಅವರು ಆಗ್ರಹಿಸಿದರು. ಬೀಡಿ ಕಾರ್ಮಿಕರನ್ನು ಕೇವಲ ಮತಬ್ಯಾಂಕಿಗೆ ಬಳಸುವ ಸರ್ಕಾರವು ಬೀಡಿ ಕಾರ್ಮಿಕರಿಂದ ರೂ 1ಸಾವಿರ ಮೊತ್ತದ ಪಿಂಚಣಿ ಕಸಿದುಕೊಂಡಿದೆ ಎಂದು ಅವರು ಟೀಕಿಸಿದರು.
ಸಂಘದ ಅಧ್ಯಕ್ಷೆ ಸರಸ್ವತಿ ಕಡೇಶಿವಾಲಯ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ವಿ. ಕುಕ್ಯಾನ್ ಮಾತನಾಡಿ, ಮೋದಿ ಸರ್ಕಾರವು ಅಧಿಕಾರಕ್ಕೆ ಬಂದು 100 ದಿನದೊಳಗೆ ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ಮರಳಿ ತರುವ ಬಗ್ಗೆ ಆಶ್ವಾಸನೆ ಕೊಟ್ಟು 11 ತಿಂಗಳು ಕಳೆದರೂ ಸುದ್ದಿಯಿಲ್ಲ. ಇಂತಹ ಸರ್ಕಾರ ಯಾರ ಪರವಾಗಿದೆ ಎಂಬುದು ಕಾರ್ಮಿಕರು ಅರ್ಥೈಸಿಕೊಳ್ಳಬೇಕು ಎಂದರು.
ಫೆಡರೇಶನ್ ಕಾರ್ಯದರ್ಶಿ ವಿ.ಸೀತರಾಮ ಬೇರಿಂಜ, ಬೀಡಿ ಎಂಡ್ ಟೊಬೆಕ್ಕೊ ಲೇಬರ್ ಯೂನಿಯನ್ ಕೋಶಾಧಿಕಾರಿ ಎಂ.ಕರುಣಾಕರ್, ಬಂಟ್ವಾಳ ತಾಲೂಕು ಬೀಡಿ ಎಂಡ್ ಜನರಲ್ ಲೇಬರ್ ಯೂನಿಯನ್ ಕಾರ್ಯದರ್ಶಿ ಬಿ.ಶೇಖರ್, ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ ಕೋಶಾಧಿಕಾರಿ ಕೆ.ವಿ.ಭಟ್, ಮಾಜಿ ಪುರಸಭಾ ಉಪಾಧ್ಯಕ್ಷ ವಿಠಲ ಬಂಗೇರ, ಎಸ್.ಚಂದಪ್ಪ ಅಂಚನ್ ಮಾತನಾಡಿದರು.
ನರಿಕೊಂಬು ಗ್ರಾ.ಪಂ.ಸದಸ್ಯೆ ಬೇಬಿ, ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ ಉಪಾಧ್ಯಕ್ಷರಾದ ಕೆ.ಈಶ್ವರ್, ಸುನೀತ ಗೋಪಾಲ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಸಂಘದ ಕಾರ್ಯಕರ್ತರಾದ ಬೇಬಿ ಸಜಿಪಮುನ್ನೂರು, ಸುನೀತಾ, ಶಾಂಭವಿ, ಶುಭಾಶಿನಿ ಪ್ರಮುಖ ನಿರ್ಣಯ ಮಂಡಿಸಿದರು.
ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿ, ಸಂಘದ ನೂತನ ಉಪಾಧ್ಯಕ್ಷೆ ಶ್ರೀಮತಿ ಬೇಬಿ ಸಜಿಪ ಮುನ್ನೂರು ವಂದಿಸಿದರು.
ಪದಾಧಿಕಾರಿಗಳ ಆಯ್ಕೆ:
ಸಂಘದ ನೂತನ ಅಧ್ಯಕ್ಷರಾಗಿ ಸರಸ್ವತಿ ಕಡೇಶಿವಾಲಯ, ಉಪಾಧ್ಯಕ್ಷರಾಗಿ ಕೆ.ಈಶ್ವರ್, ಸುನಿತಾ ಗೋಪಾಲ, ಬೇಬಿ ಸಜಿಪಮುನ್ನೂರು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್, ಸಹಕಾರ್ಯದರ್ಶಿಯಾಗಿ ಶಮಿತಾ ಕುರಿಯಾಳ, ಶ್ಯಾಮಲಾ ಶೆಟ್ಟಿ, ಶುಭಾಶಿನಿ ಇವರು ಸರ್ವಾನುಮತದಿಂದ ಆಯ್ಕೆಗೊಂಡರು.
