ಮೈಸೂರು: ವಿಪರೀತ ಆರ್ಥಿಕ ಮುಗ್ಗಟ್ಟು ಮತ್ತು ದೈಹಿಕ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾಂಗ್ರೆಸ್ ಮುಖಂಡ ಮೈಸೂರಿನ ಪಿ ನಾಗರಾಜ್(75) ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಕಾರಿನ ಚಾಲಕ ಸೀಟ್ ನಲ್ಲಿ ಇವರ ದೇಹ ಕೈಯ ನರಗಳನ್ನು ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದೇ ಮಾರ್ಗವಾಗಿ ಸಾಗುತ್ತಿದ್ದ ಪಾದಾಚಾರಿಯೊಬ್ಬರು ಕಾರಿನಿಂದ ರಕ್ತ ಜಿನುಗುವುದನ್ನು ಕಂಡು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ನಾಗರಾಜ್ ಅವರು ದೀರ್ಘ ಕಾಲದಿಂದ ಮಧುಮೇಹ ರೋಗದಿಂದ ಬಳಲುತ್ತಿದ್ದು ಕಳೆದ ವರ್ಷ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ತೀವ್ರ ಮಧುಮೇಹದ ಕಾರಣ ವೈದ್ಯರು ಅವರ ಗಾಯಗೊಂಡಿದ್ದ ಒಂದು ಬೆರಳನ್ನು ತುಂಡರಿಸುವ ಸಲಹೆ ನೀಡಿದ್ದರು. ಈ ಎಲ್ಲಾ ಕಾರಣಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ನಾಗರಾಜ್ ತಮ್ಮ ಬದುಕಿಗೆ ಅಂತ್ಯ ಹಾಡಿದ್ದಾರೆ. ಮೃತರು 4 ದಶಕಗಳಿಂದ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಎಂಡಿಸಿಸಿ ಬ್ಯಾಂಕ್ ಮತ್ತು ಜನತಾ ಬಜಾರ್ ನ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
