ಬಂಟ್ವಾಳ: : ನೇಪಾಳದ ಕಾಠ್ಮಂಡುವಿಗೆ ತೆರಳಿ ಭೂಕಂಪನದಿಂದ ಅತಂತ್ರರಾಗಿದ್ದ ಬಂಟ್ವಾಳ ಸಿದ್ದಕಟ್ಟೆಯ ಯುವಕ ರೋಮೆಲ್ ಸ್ಟೀಫನ್ ಮೊರಾಸ್ ಸುರಕ್ಷಿತವಾಗಿರುವ ಬಗ್ಗೆ ರವಿವಾರ ಮಧ್ಯಾಹ್ನ ಮಾಹಿತಿ ಬಂದಿದೆ.
ರೋಮೆಲ್ ಸ್ಟೀಫನ್ ಮೊರಾಸ್

ಸಿದ್ಧಕಟ್ಟೆಯ ಉದ್ಯಮಿ ರೊನಾಲ್ಡ್ ಮೊರಾಸ್ ಅವರ ಪುತ್ರ ರೋಮೆಲ್ ಸ್ಟೀಫನ್ ಮೊರಾಸ್ ಅವರು ಎಂಬಿಎ ಪದವಿಧರರಾಗಿದ್ದು ಬೆಂಗಳೂರಿನ ಕ್ಲಚ್ ಗ್ರೂಫ್ ಆಫ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಅವರು ತನ್ನ ಗೆಳೆಯರ ಜೊತೆ ಕಳೆದ ಎ.22ರಂದು ದೆಹಲಿಯಿಂದ ನೇಪಾಳದ ಕಾಠ್ಮಂಡುವಿಗೆ ತೆರಳಿದ್ದರು. ಶನಿವಾರ ಭೂಕಂಪನದ ಸುದ್ದಿ ತಿಳಿಯುತ್ತಲೇ ರೊನಾಲ್ಡ್ ಮೊರಾಸ್ ಅವರು ಮಗನ ಸಂಪರ್ಕಕ್ಕೆ ಪ್ರಯತ್ನಿಸಿದರೂ, ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿದ್ದರು. ಈ ಬಗ್ಗೆ ಸಂಗಬೆಟ್ಟು ಗ್ರಾ.ಪಂ. ಸದಸ್ಯ ಪ್ರಭಾಕರ ಪ್ರಭು ಅವರು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ.ಜಿಲ್ಲಾಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅವರ ಗಮನಕ್ಕೆ ತಂದಿದ್ದರು. ಸಚಿವರ ನಿರ್ದೇಶನದಂತೆ ಈ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಶರಣಪ್ಪ ಅವರು ಕಾಠ್ಮಂಡುವಿನ ಅಕಾರಿವರ್ಗವನ್ನು ಸಂಪರ್ಕಿಸಿದ್ದರು. ರವಿವಾರ ಬೆಳಗ್ಗೆ ಹಿಮಾಲಯದ ಹೈಟ್ ರೆಸಾರ್ಟ್ನಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಬಂದಿತ್ತು. ಮೊಬೈಲ್ ದೂರವಾಣಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಇದು ಸ್ಪಷ್ಟಗೊಳ್ಳದೆ ಮನೆಮಂದಿಗೆ ಆತಂಕ ಹೆಚ್ಚಿತ್ತು. ಅಪರಾಹ್ನದ ವೇಳೆಗೆ ಅಲ್ಲಿನ ಸ್ಥಿರ ದೂರವಾಣಿಗೆ ಕರೆ ಮಾಡಲಾಗಿ, ಮನೆಮಂದಿ ರೋಮೆಲ್ ಸ್ಟೀಫನ್ ಮೊರಾಸ್ ಜೊತೆಗೆ ಮಾತನಾಡಿ ಸುರಕ್ಷತೆಯ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ.
