ಕೌಲಾಲಂಪುರ: ಮಲೇಷ್ಯಾ ವಿಮಾನ ಎಂಎಚ್370 ಅಪಘಾತಕ್ಕೆ ಪೈಲಟ್ ಕಾರಣ ಎಂದು ಹಿಂದಿನಿಂದಲೂ ಸಂಶಯ ವ್ಯಕ್ತಪಡಿಸಲಾಗುತ್ತಿತ್ತು. ಅದೀಗ ನಿಜವಾದಂತಿದೆ. ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಪೈಲಟ್ ತಾನು ಆತ್ಮಹತ್ಯೆ ಮಾಡಿಕೊಳ್ಳಲು ವಿಮಾನವನ್ನ ಉಪಯೋಗಿಸಿದ್ದಾನೆ. ತನ್ನೊಂದಿಗೆ 238 ಸಹ ಪ್ರಯಾಣಿಕರ ಸಾವಿಗೂ ಆತ ಕಾರಣನಾಗಿದ್ದಾನೆ ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ.
ಕ್ಯಾಪ್ಟನ್ ಜಹೇರೀ ಅಹ್ಮದ್ ಶಾ ಒಬ್ಬ ಅತ್ಯುತ್ತಮ ಪೈಲಟ್ ಆದರೂ ತನ್ನ ವೈಯಕ್ತಿಕ ಸಮಸ್ಯೆಗಳಿಂದ ಜರ್ಝರಿತನಾಗಿದ್ದ ಆತ ವಿಮಾನ ಚಲಾಯಿಸುವ ಮನಸ್ಥಿತಿಯಲ್ಲಿರಲಿಲ್ಲ ಎಂದು ಆತನ ಸ್ನೇಹಿತರು ಹೇಳುತ್ತಿದ್ದಾರೆ. ಕ್ಯಾ. ಜಹೇರಿಯ ಪತ್ನಿ ಆತನ ಮನೆಯನ್ನೇ ಬಿಟ್ಟು ಹೋಗಿದ್ದು ಆತನನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಬೇರೆ ಮಹಿಳೆಯೊಂದಿಗೆ ಆತ ಅನೈತಿಕ ಸಂಬಂಧ ಹೊಂದಿದ್ದು ಇದರಿಂದ ಪತ್ನಿ ಆತನನ್ನು ತೊರೆದಿದ್ದಳು.
ಇಂಥ ಮನಃಸ್ಥಿತಿಯಲ್ಲಿ ವಿಮಾನವನ್ನು ಚಲಾಯಿಸುತ್ತಿದ್ದ ಪೈಲಟ್ ಜಹೇರೀ, ಬೋಯಿಂಗ್777 ವಿಮಾನವನ್ನು ಬಹಳ ಎತ್ತರಕ್ಕೆ ಹಾರಿಸುವ ಹುಚ್ಚು ಕೆಲಸ ಮಾಡಿದ್ದಿರಬಹುದು ಎಂದು ಶಂಕಿಸಲಾಗಿದೆ. ರಾಡಾರ್ ಮಾಹಿತಿಗಳ ಪ್ರಕಾರ, ದುರಂತಕ್ಕೀಡಾದ ಮಲೇಷ್ಯಾ ವಿಮಾನ 43 ಸಾವಿರ ಅಡಿಗಳಷ್ಟು ಎತ್ತರಕ್ಕೆ ಹಾರಿತ್ತು ಎಂದು ತಿಳಿದುಬಂದಿದೆ. 23 ನಿಮಿಷಗಳ ಕಾಲ ಅದು ಆ ಎತ್ತರದಲ್ಲೇ ಹಾರುತ್ತಿತ್ತು. 43 ಸಾವಿರ ಅಡಿಗೂ ಹೆಚ್ಚು ಎತ್ತರಕ್ಕೆ ಹೋದ ಬಳಿಕ ರಾಡಾರ್ ಕಣ್ಣಿಂದ ಮಾಯವಾಯಿತು. ಆ ಬಳಿಕ ವಿಮಾನದ ಇಂಧನ ಖಾಲಿಯಾಗಿ ಸಮುದ್ರದಲ್ಲಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಹುಚ್ಚು ಪೈಲಟ್ ಒಬ್ಬನ ಮಾನಸಿಕ ಅಸ್ವಸ್ಥತೆಯಿಂದಾಗಿ 238 ಜನರು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಗಿ ಬಂದಿದ್ದು ವಿಪರ್ಯಾಸವೇ ಸರಿ.
