ನಾಲ್ಕು ಗೋಡೆಗಳ ಬಂಧನವಿಲ್ಲ, ಆಕರ್ಷಣೀಯ ವೇದಿಕೆ ಇಲ್ಲ, ಅಬ್ಬರದ ಭಾಷಣವೂ ಇಲ್ಲ. ಮಕ್ಕಳಿಗೆ ಇಂತದ್ದೇ ಕಲಿಯಬೇಕೆಂಬ ಒತ್ತಡವೂ ಇಲ್ಲ. ಇಲ್ಲಿ ಮಕ್ಕಳು ಎಲ್ಲೆಂದರಲ್ಲಿ ಓಡಾಡಿದರು, ಆಡಿದರು, ನಲಿದರು…ಸಂಭ್ರಮಪಟ್ಟರು, ಅದರಲ್ಲೇ ಅದೇನನ್ನೋ ಕಲಿತರು.
ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಉಜಿರಂಡಿಪಲ್ಕೆಯಲ್ಲಿ ಮೂರನೇ ವರ್ಷದ ಪಚ್ಚೆಪರ್ಬ ಎಂಬ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರವು ವಿಶಿಷ್ಠವಾಗಿ ಸಂಪನ್ನಗೊಳ್ಳುತ್ತಾ ವಿಶೇಷ ಗಮನ ಸೆಳೆಯಿತು.
ತೀರಾ ಗ್ರಾಮೀಣ ಪ್ರದೇಶವಾದ ಉಜಿರಂಡಿಪಲ್ಕೆಯ ಪೃಕೃತಿ ಸಹಜ ಹಸಿರು ಪರಿಸರವೇ ಮೂರು ದಿನಗಳ ಈ ಶಿಬಿರಕ್ಕೆ ವೇದಿಕೆ. ಮನೆಯಂಗಳ, ಮನೆಯೆದುರಿನ ಗುಡ್ಡೆಯ ನೆಲ, ಮರಗಳು, ಮರದ ಕಟ್ಟೆಗಳು, ಕಲ್ಲಗುಡ್ಡೆಗಳು, ಪೊದರುಗಳು…ಹೀಗೆ ಪರಿಸರದ ಎಲ್ಲವೂ ಈ ಶಿಬಿರದ ತಾಣಗಳು..ಸಹಜ ಪರಿಸರದಲ್ಲಿ ಸಜ್ಜುಗೊಳಿಸಲಾದ ಕಿರುಕೆರೆ, ಗುಹೆ, ಅಜ್ಜಿಮನೆ, ನೇರಳಕಟ್ಟೆ ಮೊದಲಾದವುಗಳೇ ಇಲ್ಲಿನ ಮಕ್ಕಳಿಗೆ ಸಭಾಂಗಣ, ವೇದಿಕೆ ಎಲ್ಲವೂ.
ರಂಗಸಾಂಗತ್ಯ ಮಣಿನಾಲ್ಕೂರು ಮತ್ತು ಅರಿವು ಪಚ್ಚೆ ಬಳಗ ಬಂಟ್ವಾಳ ಆಯೋಜನೆಯಲ್ಲಿ ನಮ್ಮದು ನೆಲದ ಸಂಸ್ಕ್ರತಿ ಎಂಬ ಆಶಯ ವಾಕ್ಯದೊಂದಿಗೆ ಎಪ್ರಿಲ್ 11, 12 ಮತ್ತು 13ರಂದು ಉಜಿರಂಡಿಪಲ್ಕೆಯ ಸಹಜ ಪರಿಸರದಲ್ಲಿ ಶಿಬಿರವು ಅನಾವರಣಗೊಂಡಿದ್ದು ಹಸಿರು ಬದುಕನ್ನು ಎಚ್ಚರಿಸುವ, ಹಸಿರಿನ ಬಗ್ಗೆ ಅರಿವು ಮೂಡಿಸುವ ಹಾಗೂ ಹಸಿರಾಗಿ ಬದುಕುವ ಸಾಧ್ಯತೆ-ಅನಿವಾರ್ಯತೆಯನ್ನು ತೆರೆದಿಡುತ್ತಾ ಅರ್ಥಪೂರ್ಣವೆನಿಸಿತು.
ಶಿಬಿರವು ಕ್ಲಾಸ್ ರೂಂ, ತರಗತಿ-ತರಬೇತಿ ಎನಿಸದೇ ಮಕ್ಕಳು ಮುಕ್ತವಾಗಿ ಬೆರೆಯುವ, ತಮ್ಮಲ್ಲಿ ಸಹಜವಾಗಿರುವ ಪ್ರತಿಭೆಯನ್ನು ತೆರೆದಿಡುವ ಮತ್ತು ಪ್ರಶ್ನಿಸುವ ಮುಕ್ತ ತಾಣವಾಗಿ 3 ದಿನಗಳಲ್ಲಿಯೂ ಮಣ್ಣು, ನೀರು, ನೆಲ, ಮರ, ಗಾಳಿ ಮುಂತಾದ ಎಲ್ಲರ ಅಗತ್ಯಗಳ ಬಗೆಗೆ ಹಾಡು, ಆಟ, ಊಟ, ನಾಟಕ, ಸಂವಾದಗಳ ಮೂಲಕ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಲಾಗಿತ್ತು. ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು, ಪರಿಸರ ಸ್ನೇಹಿಯಾಗಿ ದುಡಿಯುವ ರಾಜ್ಯದ ವಿವಿಧ ಜಿಲ್ಲೆಗಳ ಸಮಾಜ ಕಾರ್ಯಕರ್ತರು, ಪರಿಸರ ಸಾಧಕ ವಿಶೇಷ ಅತಿಥಿಗಳು ಆಗಮಿಸಿ ಮಕ್ಕಳೊಂದಿಗೆ ತಮ್ಮ ಸಮಯವನ್ನು ಕಳೆದರು.
ಮೊದಲ ದಿನ ಪರಿಸರದ ಘೋಷಣೆಗಳನ್ನೊತ್ತ ಮಕ್ಕಳಿಂದ ಮೆರವಣಿಗೆ ನಡೆದು ನಂತರ ನೇರಳ ಮರದ ಕಟ್ಟೆಯಲ್ಲಿ ಮಕ್ಕಳು, ಹಿರಿಯರು ಮರದ ಎಲೆಯಿಂದ ತಯಾರಿಸಿದ ವಾಧ್ಯದಿಂದ ಏಕಕಾಲದಲ್ಲಿ ಮೂಡಿಬಂದ ಪೀಪೀ ವಾದ್ಯಗೋಷ್ಠಿಯ ಮೂಲಕ ಶಿಬಿರಕ್ಕೆ ಚಾಲನೆ ದೊರೆಯಿತು. ಅಂದು ವಿಶೇಷವಾಗಿ ಪರಿಸರ ಮಿತ್ರ ಜಿಲ್ಲಾ ಪ್ರಶಸ್ತಿ ವಿಜೇತ ಸ.ಹಿ.ಪ್ರಾ.ಶಾಲೆ ಕೆದ್ದಳಿಕೆಯ ಮಕ್ಕಳು, ಮುಖ್ಯ ಶಿಕ್ಷಕ ರಮೇಶ ನಾಯಕ್ ರಾಯಿ, ಸಹಶಿಕ್ಷಕರಾದ ಸಹಸ್ರನಾಮ, ಚಂದಪ್ಪ ಪೂಜಾರಿ ಅವರೊಂದಿಗೆ ಶಿಬಿರದಲ್ಲಿ ಪಾಲ್ಗೊಂಡರು. ಅಪರಾಹ್ನ ಕೆದ್ದಳಿಕೆ ಶಾಲಾ ಮಕ್ಕಳಿಂದ ಮೌನೇಶ ವಿಶ್ವಕರ್ಮ ನಿರ್ದೇಶನದ ನಾಟಕ ‘ಭೂಮಿ’, ಬಂಟ್ವಾಳ ಎಸ್.ವಿ.ಎಸ್. ದೇವಳ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮಕ್ಕಳಿಂದ ಕೃಷ್ಣಪ್ಪ ಬಂಬಿಲ ನಿರ್ದೇಶನದ ನಾಟಕ ‘ಮಾಯಾಲೋಕ’
ಪ್ರದರ್ಶನಗೊಂಡು ಪರಿಸರ, ನೆಲ, ಜಲ ಪ್ರೀತಿಯ ಅನಿವಾರ್ಯತೆಯನ್ನು ಎಚ್ಚರಿಸಿತು.
ಎರಡನೇ ದಿನ ‘ಸಿಂಪನಿ’ ಮಕ್ಕಳ ಪತ್ರಿಕೆ ಬಳಗದಿಂದ ಹಾಡು-ಓದಿನಾಟ-ನಾಟಕ, ಮಧ್ಯಾಹ್ನ ಪಕೃತಿ ವಂದನೆ ಎಂಬ ವಿಶೇಷ ಕಾರ್ಯಕ್ರಮದ ಅನಾವರಣ. ಗುಡ್ಡೆಯಲ್ಲಿ ಆವರಿಸಿಕೊಂಡಿದ್ದ ಬಾವಿ, ಮರ, ಗಿಡಗಳು, ಕಟ್ಟೆಗಳಿಗೆ ಕಾಡಹೂ ಸಮರ್ಪಿಸಿ-ಧೂಪಾರತಿ ಬೆಳಗಿ ನೆಲ ಜಲಕ್ಕೆ ಪೂಜೆಯ ತೋರಣ. ಪರಿಸರ ಹೋರಾಟಗಾರ ಶ್ರೀ ಈಶ ವಿಠಲ ದಾಸ ಸ್ವಾಮೀಜಿ, 150ಕ್ಕೂ ಅಧಿಕ ಭತ್ತದ ತಳಿಗಳನ್ನು ಬೆಳೆದು ಸಂಗ್ರಹಿಸುತ್ತಿರುವ ಕೃಷಿಕ ಬಿ.ಕೆ. ದೇವರಾವ್ ಬೆಳ್ತಂಗಡಿ, , ರಂಗಕರ್ಮಿ ಐ.ಕೆ.ಬೊಳುವಾರು, ಡಾ.ಶ್ರೀಶ ಕುಮಾರ್, ಕೃಷಿಕ ರತ್ನಾಕರ ಕೊಂಡೆ, ಪ್ರೇಮಾನಂದ ಕಲ್ಮಾಡಿ, ಜಾನಪದ ಕಲಾವಿದೆ ಶಾರದಾ ಜಿ. ಬಂಗೇರ, ಗಂಗಯ್ಯ ಬಂಗೇರಾ, ಗೋಪಾಲ ಅಂಚನ್, ನಾದ ಮಣಿನಾಲ್ಕೂರು, ಸತೀಶ್ ಕಕ್ಯಪದವು, ಕೃಷ್ಣಪ್ಪ ಬಂಬಿಲ ಮೊದಲಾದವರಿದ್ದು ಮಕ್ಕಳೊಡನೆ ಮಾತುಕತೆ ನಡೆಸಿದರು.
ಪೃಕೃತಿ ಮತ್ತು ಸಂಸ್ಕ್ರತಿ ನಡುವಿನ ಬದುಕು ನಮ್ಮದಾಗಬೇಕು. ಪೃಕೃತಿ ನಮಗೆ ತಾಳ್ಮೆ, ಆತ್ಮೀಯತೆ ಹಾಗೂ ಮಾನವೀಯತೆಯ ಬದುಕನ್ನು ಕಲಿಸಿಕೊಡುತ್ತದೆ. ಹಿಂದಿನ ಸಾಧುಸಂತರು ಪರಸರಿದಲ್ಲೇ ಬದುಕಿದ್ದಾರೆ. ಬಹುತೇಕ ಜೀವವೈವಿಧ್ಯಗಳು ಪ್ರಕೃತಿಯೊಡನೆ ಬೆಸೆದುಕೊಂಡಿದೆ, ಮನುಷ್ಯರಾದ ನಾವು ಪರಿಸರವನ್ನು ನಾಶ ಮಾಡುವುದು ಸರಿಯಲ್ಲ ಎಂದು ಸ್ವಾಮೀಜಿ ಹೇಳಿದರು.
ಮೂರನೇ ದಿನ ಅರಿವು ಪಚ್ಚೆ ಬಳಗದಿಂದ ಪ್ರಕೃತಿ ಗಾಯನ ಮತ್ತು ಪ್ರಕೃತಿ ರಂಗ ನಾಟಕ ನಡೆಯಿತು. ಉಳಿದಂತೆ ಎಲ್ಲಾ ಸಮಯದಲ್ಲಿ ಮಕ್ಕಳು ಯಾವುದೇ ರೀತಿಯ ಕಟ್ಟುಪಾಡು, ಒತ್ತಡ, ಬಂಧನವಿಲ್ಲದೆ ಹಾಡಿದರು, ಮಾತನಾಡಿದರು, ನಿಜಕ್ಕೂ ಮಕ್ಕಳಾಗಿಯೇ ಕುಣಿದಾಡಿದರು. ನೆಲ, ಜಲ, ಮನುಕುಲದ ಪ್ರೀತಿಯನ್ನು ಅರಿತರು, ಅನುಭವಿಸಿದರು.

ಗೋಪಾಲ ಅಂಚನ್

By suddi9

Leave a Reply

Your email address will not be published. Required fields are marked *