ಕಾರಿಂಜದ ಆಕರ್ಷಣೆಗೆ ಮತ್ತೊಂದು ಗರಿಯಾಗಿದೆ ಈ ದೈವೀವನ
ಸುದ್ದಿ9ಬಂಟ್ವಾಳ: ಶ್ರೀ ಕ್ಷೇತ್ರ ಕಾರಿಂಜ ಎಂದರೇನೇ ಅದು ಬದುಕಿನಲ್ಲಿ ನೊಂದು ಬೆಂದು ಬಳಲಿ ಬಂದವರಿಗೆ ನೆಮ್ಮದಿಯ ತಾಣ. ಪೃಕೃತಿ ರಮಣೀಯ ಸುಂದರ ಪರಿಸರದಲ್ಲಿ ಕಂಗೋಳಿಸುತ್ತಿರುವ ಕಾರಿಂಜ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯ ಪುಣ್ಯ ನೆಲೆಯೂ ಹೌದು. ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದ ಕಲ್ಲಬೆಟ್ಟದಲ್ಲಿ ಪವಾಡಸದೃಶವೆಂಬಂತೆ ನಿರ್ಮಾಣಗೊಂಡಿರುವ ಈ ಕ್ಷೇತ್ರವು ತೀರ್ಥಸ್ನಾನಕ್ಕೆ ಪ್ರಸಿದ್ಧವಾಗಿದ್ದು ಅಂದಿನಿಂದ ಇಂದಿನವರೆಗೂ ಆಟಿ ಅಮಾವಾಸ್ಯೆಯಂದು ನಸುಕಿನ ವೇಳೆಯೇ ಊರಪರವೂರ ಅಂಖ್ಯಾತ ಭಕ್ತಾಧಿಗಳು ಕ್ಷೇತ್ರಕ್ಕೆ ಚಿತ್ತೈಸಿ ಇಲ್ಲಿನ ಪವಿತ್ರ ತೀರ್ಥ ಕೆರೆಗಳಲ್ಲಿ ಮಿಂದು ಶ್ರೀ ಪಾರ್ವತಿ ಪರಮೇಶ್ವರರ ದರ್ಶನ ಪಡೆಯುತ್ತಿರುವುದು ಕ್ಷೇತ್ರದ ಮಹಾಮಹಿಮೆಯೇ ಸರಿ. ಇದೀಗ ಕ್ಷೇತ್ರದ ಆಕರ್ಷಣೆಗೆ ಮತ್ತೊಂದು ಸೇರ್ಪಡೆ ನೂತನ ದೈವೀವನ.
ಹೌದು. ಭೂ ಕೈಲಾಸ ಪ್ರತೀತಿಯ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನವು ನಿಸರ್ಗವೇ ಮೈತಳೆದು ನಿಂತಂತೆ ಅದ್ಭುತ ರಮಣೀಯತೆಯನ್ನು ಹೊಂದಿದೆ.ಕೊಡ್ಯಮಲೆ ಎಂದು ಕರೆಯಲ್ಪಡುವ ಕೋಟಿಶೈಲ ಎಂಬ ರಕ್ಷಿತಾರಣ್ಯದಲ್ಲಿ ಬೃಹತ್ ಬಂಡೆಯ ಮೇಲೆ ಈ ದೇವಸ್ಥಾನ ವಿರಾಜಮಾನವಾಗಿದೆ. ದೇವಸ್ಥಾನದ ಸುತ್ತಮುತ್ತಲಿರುವ ಹಚ್ಚ ಹಸಿರ ಸುಂದರ ಪರಿಸರ, ಗಿಡಮರಗಳು, ತಣ್ಣನೆಯ ತಂಗಾಳಿ ಭಕ್ತರಿಗೆ ಪುಳಕವನ್ನುಂಟು ಮಾಡುತ್ತದೆ. ಇದೀಗ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಅವರ್ಣನೀಯ ಅನುಭವವನ್ನು ನೀಡಲು ನೂತನ ದೈವೀವನವು ಸಜ್ಜಾಗಿದೆ.

ಏನಿದು ದೈವೀವನ?:
ಶ್ರೀ ಕ್ಷೇತ್ರ ಕಾರಿಂಜವನ್ನು ಪ್ರವಾಸಿ ಗಿರಿಧಾಮವನ್ನಾಗಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸುಮಾರು 40 ಲ.ರೂ.ವೆಚ್ಚದಲ್ಲಿ ಈ ಕಾರಿಂಜೇಶ್ವರ ದೈವೀವನವನ್ನು ರೂಪುಗೊಳಿಸಿದೆ. ದೇವಸ್ಥಾನದ ಸುಂದರ ವಾತಾವರಣದಲ್ಲಿ ಈ ವನ ನಿರ್ಮಾಣಗೊಂಡಿದ್ದು ದೇವಸ್ಥಾನದ ಅಂದದ ಜೊತೆ ದೈವಿಕ ವಾತಾವರಣವನ್ನು ಹೆಚ್ಚಿಸಲಿದೆ.ದೇವಸ್ಥಾನದ ಹೊರಭಾಗದಲ್ಲಿ ಕೆಳಗಡೆಯಿರುವ ಬೀದಿ,ರಥಬೀದಿ,ವಾಹನ ನಿಲುಗಡೆ ಪ್ರದೇಶ,ವನಭೋಜನ ಗುಹೆ, ಮತ್ತು ಪಕ್ಕದ ಕಾಡಿನಲ್ಲಿ ಈ ದೈವೀವನವು ಹರಡಿಕೊಂಡಿದೆ.ಇಲ್ಲಿ ವಿವಿಧ ಜಾತಿಯ ಹೂವಿನ ಗಿಡಗಳು,ಅತಿ ಅಪರೂಪದ ಔಷದೀಯ ಸಸ್ಯಗಳು,ಬಳ್ಳಿಗಳು,ನವಗ್ರಹಗಳು ಮತ್ತು ರಾಶಿ ನಕ್ಷತ್ರಗಳೊಡನೆ ತಳುಕು ಹೊಂದಿದ ದೈವಿಕ ಹಿನ್ನೆಲೆಯ ಆಕರ್ಷಣೆಗಳಿದ್ದು ವಿಶೇಷ ಗಮನ ಸೆಳೆಯುತ್ತಿದೆ.
ಎಲ್ಲವೂ ಇದೆ ಇಲ್ಲಿ:
ದೈವೀವನದೊಳಗೆ ವಿವಿಧ ಹೆಸರಿನ ನಾನಾ ವನಗಳಿದೆ. ಕಾರಿಂಜ ಗಿರಿಯ ಕೆÀಳಗಡೆ ಇರುವ ಗದಾತೀರ್ಥ ಮತ್ತು ರಥಬೀದಿಯ ಮುಂಭಾಗದಲ್ಲಿ ಉತ್ತಮ ಜಾತಿಯ ವಿವಿಧ ಸಸಿಗಳನ್ನು ನೆಡಲಾಗಿದ್ದು ಸುತ್ತಲೂ ತಡೆಬೇಲಿ ನಿರ್ಮಿಸಲಾಗಿದೆ. ರೆಂಜೆ,ಹೆಬ್ಬಲಸು,ಕಾಲುಧೂಪ,ಬೊಳ್ಪಾಲೆ,ಸಿರಿಹೊನ್ನೆ,ಹಲಸು,ಕಹಿಬೇವು,ಸಂಪಿಗೆ,ಬೀಟೆ,ಶಿವನೆ,ಹೊನ್ನೆಕಾಯಿ,ರಕ್ತಚಂದನ,ಶ್ರೀಗಂಧ,ಪಾರಿಜಾತ,ಕಲ್ಲಶ್ವತ್ಥ,ಅರ್ತಿ,ಅಶ್ವತ್ಥ,ಬಿಲ್ವಪತ್ರೆ,ಹೂಅಶೋಕ,ಬೇಂಗದ ಗಿಡಗಳಿವೆ.ಈ ಗಿಡಗಳು ದೇವರನ್ನು ಸ್ತುತಿಸುವ ಒಂದೊಂದು ಸ್ತೋತ್ರಗಳನ್ನು ಹೊಂದಿದ್ದು ಸಂಬಂಧಿಸಿದ ಸ್ತೋತ್ರಗಳನ್ನು ಆಯಾಯ ಗಿಡಗಳ ವೈಜ್ಞಾನಿಕ ಹೆಸರುಗಳ ಸಹಿತ ಪ್ರದರ್ಶಿಸಲಾಗಿದೆ.ಅದ್ದರಿಂದ ಇದಕ್ಕೆ ಸ್ತೋತ್ರವನವೆಂದು ಹೆಸರಿಡಲಾಗಿದೆ.
ಗದಾತೀರ್ಥದಿಂದ ಮುಂದಕ್ಕೆ ಸಾಗಿದಾಗ ಎಡಭಾಗದಲ್ಲಿ ವನಭೋಜನ ಎಂಬ ಗುಹೆ ಇದ್ದು ಇದನ್ನು ವೀಕ್ಷಿಸಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು ಇಲ್ಲಿಯೂ ಸಸಿಗಳನ್ನು ನೆಡಲಾಗಿದೆ. ಕಾಡಿನ ಪಕ್ಕದಲ್ಲಿ ಸ್ವಾಸ್ಥ ಪಥ ಎಂಬ ಹೆಸರಿನಲ್ಲಿ ರಸ್ತೆ ನಿರ್ಮಿಸಲಾಗಿದೆ.
ದೈವೀವನವು ಪಾರ್ವತಿದೇವಿ ದೇವಸ್ಥಾನದ ಮುಂಭಾಗದ ವಿಶಾಲ ಪ್ರದೇಶದಲ್ಲಿದೆ.ವನದ ಮಧ್ಯದಲ್ಲಿ ಕುಳಿತ ಭಂಗಿಯ ಶಿವನ ಮೂರ್ತಿ ಇದೆ.ಅದರ ಎದುರುಗಡೆ ನಂದಿಇದೆ. ಇಲ್ಲಿ ಕಾರಂಜಿಯನ್ನು ನಿರ್ಮಸಲಾಗಿದ್ದು ಗಮನಸೆಳೆಯುತ್ತದೆ.ಸುತ್ತಲೂ ಔಷದೀಯ ಸಸ್ಯಗಳು,ಹೂವಿನ ಗಿಡಗಳಿವೆ.ವೀಕ್ಷಣೆಗೆ ನಡೆದಾಡಲು ಹೊಳೆಕಲ್ಲಿನ ರೀತಿಯ ವಿಶಿಷ್ಟ ಮೆಟ್ಟಿಲುಗಳಿವೆ.
ನವಗ್ರಹಗಳಿಗೆ ಸಂಬಂಧಿಸಿದ ಮರಗಳಿರುವ ನವಗ್ರಹ ವನ, ರಾಶಿಗಳಿಗೆ ಸಂಬಂಧಿಸಿದ ಮರಗಳಿರುವ ರಾಶಿವನ, ವಿವಿಧ ಮೂಲಿಕಾ ಗಿಡಗಳಿರುವ ಮೂಲಿಕಾ ವನ, ವಿವಿಧ ಪ್ರಭೇದದ ತುಳಸಿಗಿಡಗಳಿರುವ ತುಳಸಿವನ ಮೊದಲಾದವುಗಳು ವಿಶೇಷ ಗಮನ ಸೆಳೆಯುತ್ತಿದೆ.
ದೇವಸ್ಥಾನದ ಮೂಲಕ ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಹೆಜ್ಜೆಯಾಗಿರುವ ಈ ದೈವೀವನ ಜಿಲ್ಲೆಯಲ್ಲಿಯೇ ಪ್ರಥಮವೆನ್ನಲಾಗಿದ್ದು ಅರಣ್ಯ ಸಚಿವರಾದ ಬಿ.ರಮಾನಾಥ ರೈಯವರ ಮಾರ್ಗದರ್ಶನದಂತೆ ಅವರ ಸ್ವಕ್ಷೇತ್ರದಲ್ಲಿ ನಿರ್ಮಾಣಗೊಂಡಿದೆ. ಕ್ಷೇತ್ರಕ್ಕೆ ವಿಶೇಷ ಆಕರ್ಷಣೆಯಾಗಿ ಈ ದೈವೀವನವು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.
…………………………….
ಗೋಪಾಲ ಅಂಚನ್
………………………………………….





