ಸಿಡಿಪಿಒ ನಿರ್ಲಕ್ಷ್ಯ ಆರೋಪ, ಸದಸ್ಯರ ಆಕ್ರೋಶ
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಒಟ್ಟು 552 ಅಂಗನವಾಡಿ ಕೇಂದ್ರಗಳ ಪೈಕಿ ಬಂಟ್ವಾಳ ವ್ಯಾಪ್ತಿಯಲ್ಲಿ 324 ಮತ್ತು ವಿಟ್ಲ ವ್ಯಾಪ್ತಿಯಲ್ಲಿ 228 ಕೇಂದ್ರಗಳಿವೆ. ಈ ಪೈಕಿ ತೀರಾ ಹದಗೆಟ್ಟಿರುವ ಅಂಗನವಾಡಿ ಕೇಂದ್ರಗಳನ್ನು ದುರಸ್ತಿಗೊಳಿಸಲು ಮಂಜೂರಾದ ಒಟ್ಟು ರೂ 22.10 ಲಕ್ಷ ಮೊತ್ತದ ಅನುದಾನದಲ್ಲಿ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಲಕ್ಷ್ಯದಿಂದಾಗಿ ಗರಿಷ್ಟ ಮೊತ್ತದ ಅನುದಾನ ವಿಟ್ಲ ವ್ಯಾಪ್ತಿಗೆ ಹೋಗಿದೆ ಎಂದು ಆರೋಪಿಸಿ ಸದಸ್ಯರು ಪರಸ್ಪರ ಮಾತಿನ ಚಕಮಕಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು.


ತಾ.ಪಂ.ಅಧ್ಯಕ್ಷ ಯಶವಂತ ಡಿ. ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕಾ ಮತ್ತು ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಷಿ ಇಲಾಖಾವಾರು ಮಾಹಿತಿ ನೀಡಿದರು. ಇದಕ್ಕೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ಅನುದಾನ ಹಂಚಿಕೆ ವ್ಯತ್ಯಾಸಕ್ಕೆ ಕಾರಣವೇನು ಎಂದು ಇವರಲ್ಲಿ ಪ್ರಶ್ನಿಸಿದಾಗ ಈ ಲೋಪ ಕಂಡು ಬಂತು.
ಇದೇ ವೇಳೆ ಅನುದಾನ ಸಮಾನವಾಗಿ ಹಂಚಿಕೆ ಮಾಡುವಂತೆ ಕಾಂಗ್ರೆಸ್ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಮಾಧವ ಎಸ್.ಮಾವೆ, ಸಂಪತ್ ಕುಮಾರ್ ಶೆಟ್ಟಿ, ಪುಷ್ಪಲತಾ ಸಿ.ಕರ್ಕೇರ, ಜೂಲಿಯಾನ ಹಾಗೂ ಬಿಜೆಪಿ ಸದಸ್ಯರಾದ ದಿನೇಶ ಅಮ್ಟೂರು, ಆನಂದ ಶಂಭೂರು, ವಸಂತ ಕುಮಾರ್, ಶೈಲಜಾ ಶೆಟ್ಟಿ, ಉಷಾ ವಿಟ್ಲ ಮತ್ತಿತರರು ಪರ ಮತ್ತು ವಿರೋಧ ವ್ಯಕ್ತಪಡಿಸಿದರು.
ಈ ಸುಧೀರ್ಘ ಚರ್ಚೆಯಿಂದ ಸಭೆಯಲ್ಲಿ ಕೆಲಹೊತ್ತು ಗೊಂದಲ ಮತ್ತು ಗದ್ದಲ ವಾತಾವರಣ ನಿರ್ಮಾಣವಾಯಿತು.
ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕಾ ಅವರು ಮಾಡಿರುವ ಅಂಗನವಾಡಿ ಕೇಂದ್ರಗಳ ಸಮೀಕ್ಷೆ ನಿರ್ಲಕ್ಷ್ಯಕ್ಕೆ ಅನುದಾನವನ್ನು ಸಮಾನ ಹಂಚಿಕೆ ಪರಿಹಾರವಲ್ಲ. ಇದರಿಂದಾಗಿ ಕರ್ತವ್ಯ ನಿರ್ವಹಣೆಯಲ್ಲಿ ದಕ್ಷತೆ ತೋರಿದ ಅಧಿಕಾರಿಗಳಿಗೆ ಅನ್ಯಾಯವಾಗುತ್ತದೆ ಎಂದು ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಸಲಹೆ ನೀಡಿದರು.
ಇದಕ್ಕೆ ತಾ.ಪಂ.ಅಧ್ಯಕ್ಷ ಯಶವಂತ ಡಿ. ಅವರು ಮಧ್ಯೆ ಪ್ರವೇಶಿಸಿ, ರೂ 1.5ಲಕ್ಷ ಮೊತ್ತದ ಅನುದಾನವನ್ನು ಬಂಟ್ವಾಳಕ್ಕೆ ವರ್ಗಾವಣೆಗೊಳಿಸಿ, ತಾ.ಪಂ.ಅಧ್ಯಕ್ಷರ ನಿಧಿಯಿಂದ ರೂ 1.5ಲಕ್ಷ ಮೊತ್ತದ ಅನುದಾನವನ್ನು ವಿಟ್ಲಕ್ಕೆ ನೀಡುವುದಾಗಿ ಘೋಷಿಸಿ ಸದಸ್ಯರನ್ನು ಸಮಾಧಾನಪಡಿಸಿದರು.
ಈ ನಡುವೆ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ವತಿಯಿಂದ ಕೈಗೊಂಡಿರುವ ಒಟ್ಟು ಕಿಂಡಿ ಅಣೆಕಟ್ಟೆ ಬಗ್ಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಸಭೆಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇನ್ನೊಂದೆಡೆ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿ ಕುಳಿತ ಅರ್ಹ ಫಲಾನುಭವಿಗಳಿಗೆ 94/ಸಿ ಯೋಜನೆಯಡಿ ಹಕ್ಕುಪತ್ರ ನೀಡುವ ಪ್ರಕ್ರಿಯೆಯೂ ವಿಳಂಬವಾಗಿದೆ ಎಂದು ತಾ.ಪಂ.ಸದಸ್ಯ ಮಾಧವ ಎಸ್.ಮಾವೆ ಆರೋಪಿಸಿದರು.
ಇದಕ್ಕೆ ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಪ್ರತಿಕ್ರಿಯಿಸಿ, ಹೊಸ ತಹಶೀಲ್ದಾರ್ ಅಧಿಕಾರ ಸ್ವೀಕರಿಸಿ ಒಂದು ತಿಂಗಳೂ ಆಗಿಲ್ಲ ಎಂದು ಸಮಾಧಾನ ಪಡಿಸಿದರು.
ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನ ಶಾಲಾ ಕಾಲೇಜುಗಳ ಬಳಿ ರಸ್ತೆಗೆ ಉಬ್ಬು ನಿರ್ಮಿಸುವಂತೆ ಕಳೆದ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದೆ ಎಂದು ಪಿಡಬ್ಲ್ಯುಡಿ ಎಂಜಿನಿಯರ್ ಪ್ರಕಟಿಸಿದರು.
ತಾ.ಪಂ.ಉಪಾಧ್ಯಕ್ಷೆ ವಿಲಾಸಿನಿ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಕಾರ್ಯನಿರ್ವಹನಾಧಿಕಾರಿ ಸಿಪ್ರಿಯಾನ್ ಮಿರಾಂದ, ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತಿತರರು ಇದ್ದರು.


