ಕೊಣಾಜೆ: 1968ರಲ್ಲಿ ಆಕಾಶವಾಣಿಗೆ ತುರ್ತಾಗಿ ಬರೆದ ನಿತ್ಯೋತ್ಸವ ಕವನಕ್ಕೆ ಅನಂತಸ್ವಾಮಿ ರೆಕ್ಕೆ ಪುಕ್ಕ ಕಟ್ಟಿ ತನಗೆ ಕೀರ್ತಿ ತಂದರು. ತಾನು ಬರೆದ ಹಲವು ಕವನಗಳಿಗೆ ಅವರು ಜೀವ ತುಂಬಿದರು. ಆ ಕಾರಣದಿಂದ ನಿತ್ಯೋತ್ಸವದಿಂದ ತನಗೆ ಬಂದ ಕೀರ್ತಿಯಲ್ಲಿ ಶೇ.50 ಅನಂತಸ್ವಾಮಿಗೆ ಸಲ್ಲುತ್ತದೆ. ಇಂದು ನಿತ್ಯೋತ್ಸವ ಎಲ್ಲರ ಮನದಲ್ಲೂ ನೆಲೆ ನಿಂತಿದೆ. ಸಾಹಿತ್ಯಾಭಿಮಾನಿಗಳು ತಾವು ಕಟ್ಟಿಸಿದ ಭವನಗಳಿಗೆ ಇದೇ ಹೆಸರು ಇಟ್ಟಿದ್ದಾರೆ. ಮಂಗಳೂರು ವಿವಿಯಲ್ಲಿ ಆರಂಭಗೊಂಡ ನಿತ್ಯೋತ್ಸವ ಕಾರ್ಯಕ್ರಮದ ಮೂಲಕ ಕನ್ನಡ ನಾಡು ನುಡಿಯನ್ನು ಬೆಳೆಸುವ ಕೆಲಸ ಆಗಬೇಕಿದೆ ಎಂದು ನಾಡೋಜ ಕವಿ ಡಾ.ಕೆ.ಎಸ್.ನಿಸಾರ್ ಅಹಮ್ಮದ್ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಮಂಗಳಗಂಗೋತ್ರಿ ಮಂಗಳಾ ಸಭಾಂಗಣದಲ್ಲಿ ಕನ್ನಡ ನಾಡು, ನುಡಿ, ಚಿಂತನೆಯ ಕಾರ್ಯಕ್ರಮ `ನಿತ್ಯೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
7mdp2

7mdp1 (1)
ಎಸ್.ವಿ. ಪರಮೇಶ್ವರ ಭಟ್ಟ ಅವರು ಕಷ್ಟ ಕಾಲದಲ್ಲೂ ಕನ್ನಡ ಸಂಸ್ಥೆಯನ್ನು ಕಟ್ಟಿ ಕನ್ನಡದ ಸರ್ವತೋಮುಖ ಅಭಿವೃದ್ಧಿಗಾಗಿ ಬಹಳಷ್ಟು ಪರಿಶ್ರಮವನ್ನು ವಹಿಸಿದವರು. ಆದರೆ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ವಿಭಾಗಕ್ಕೆ ಎಸ್‍ವಿಪಿ ಹೆಸರಿಡುವ ನೆನಪಿಸುವ ಕೆಲಸ ಮಾಡಲಾಗುತ್ತಿದ್ದು ಇದರಿಂದ ಎಸ್‍ವಿಪಿಗೆ ಗೌರವ ಸಲ್ಲಿಸುವ ಜೊತೆ ಮಂಗಳೂರು ವಿ.ವಿ.ಗೂ ಕೀರ್ತಿ ಬಂದಿದೆ ಎಂದು ಹೇಳಿದರು.
ಮುಖ್ಯ ಅತಿಥಿ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಪ್ರತಿಯೊಬ್ಬರಿಗೂ ಜೀವನದಲ್ಲಿ ಕನಸು ಎಂಬುದು ಬಹಳ ಅಗತ್ಯ. ಇಂದು ಶಿಕ್ಷಣ ಎಂಬುದು ಕ್ರೀಯಾಶೀಲವಾಗಿರದೆ ಕೇವಲ ಕಿವಿಗೆ ಮಾತ್ರ ಸೀಮಿತವಾಗಿದ್ದು ವಿದ್ಯಾರ್ಥಿಗಳ ಕನಸನ್ನೂ ಕಿತ್ತುಕೊಂಡಿದೆ. ಇಂದು ಅದೆಷ್ಟೋ ಮಂದಿಗೆ ಆಕರ್ಷಕವಾಗಿ ಮಾತನಾಡುವುದೂ ಗೊತ್ತಿಲ್ಲ. ಈ ಕಾರಣದಿಂದಾಗಿ ಜಗತ್ತಿನ 400 ವಿವಿಗಳಲ್ಲಿ ಭಾರತದ ಒಂದು ವಿವಿ ಹೆಸರೂ ಇಲ್ಲ. ವಿದ್ಯಾರ್ಥಿಗಳು ಫೇಲಾದ ಸಂದರ್ಭ ಅದನ್ನು ಸಮರ್ಥಿಸಬಹುದೇ ಹೊರತು ಅದು ವಾಸ್ತವ ಆಗಿರಲು ಸಾಧ್ಯವಿಲ್ಲ ಎಂದರು.
ಇಂದು ಜಗತ್ತು ಸ್ವಾರ್ಥ ಕೇಂದ್ರೀಕೃತವಾಗಿದ್ದು ಪ್ರತಿಯೊಬ್ಬರು ತಾನು, ಕುಟುಂಬ ಎನ್ನುವ ಚಿಂತನೆಯಿಂದ ಹೊರಬಂದು ಇರುವುದರಲ್ಲಿ ಸಮಾಜಕ್ಕೂ ಹಂಚುವ ಕೆಲಸ ಮಾಡಬೇಕಿದೆ. ಪ್ರತಿಭೆ ಎನ್ನುವುದು ಕೇವಲ ಸಂಗ್ರಹಕ್ಕೆ ಸೀಮಿತವಾಗಿದೆ. ಇದನ್ನು ಗಮನಿಸುವಾಗ ಸಂಶೋಧನೆ ಎನ್ನುವ ಪದ ಮುಂದಿನ ದಿನಗಳಲ್ಲಿ ಅಳಿದರೂ ಆಶ್ಚರ್ಯವಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್‍ವಿಪಿ ಅವರ ಪುತ್ರ ಎಸ್.ಪಿ.ರಾಮಚಂದ್ರ ಅವರು ಎಸ್‍ವಿಪಿ ಸಂಗ್ರಹದಲ್ಲಿದ್ದ ಪುಸ್ತಕಗಳು, ಪುರಸ್ಕಾರ ಫಲಕಗಳನ್ನು ವಿವಿ ಗ್ರಂಥಾಲಯಕ್ಕೆ ಹಸ್ತಾಂತರಿಸುವ ಪತ್ರ ನೀಡಿದರು. ಸೋಮವಾರ ಅಪಘಾತದಲ್ಲಿ ಮೃತಪಟ್ಟ ವಿವಿ ಸಮ್ಮರ್ ಕ್ಯಾಂಪ್‍ನ ಎಂಪಿಎಡ್ ವಿದ್ಯಾರ್ಥಿ ಶಂಕರ್ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು
. ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ ಉಪಸ್ಥಿತರಿದ್ದರು. ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೊ.ಬಿ.ಶಿವರಾಮ ಶೆಟ್ಟಿ ಸ್ವಾಗತಿಸಿದರು. ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.

By suddi9

Leave a Reply

Your email address will not be published. Required fields are marked *