ಮಂಗಳೂರು: ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಕಸಿಯುವ ಅನೈತಿಕ ಪೊಲೀಸ್ಗಿರಿಯನ್ನು ಖಂಡಿಸುವ ಫಲಕಗಳನ್ನು ಹಿಡಿದು ಕಪ್ಪು ಉಡುಪು ಧರಿಸಿದ ಹಲವಾರು ಮಹಿಳೆಯರು ಮಂಗಳವಾರ ನೆಹರೂ ಮೈದಾನದ ಪಾದಚಾರಿ ಮಾರ್ಗದ ಬಳಿ ನಿಂತು ಅನೈತಿಕ ಪೊಲೀಸ್ಗಿರಿಯನ್ನು ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದರು.

ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಮಹಿಳಾ ಹಕ್ಕುಗಳ ಪರವಾಗಿರುವ ಪುರುಷರು ಕೂಡಾ ಪಾಲ್ಗೊಂಡು ಬೆಂಬಲ ಸೂಚಿಸಿದರು. ಸುದ್ದಿಗಾರರ ಜತೆ ಪ್ರತಿಕ್ರಿಯಿಸಿದ ವೇದಿಕೆಯ ಪದಾಧಿಕಾರಿ ಗುಲಾಬಿ ಬಿಳಿಮಲೆ ಅವರು, ಸಂಸ್ಕ್ರತಿ ಮತ್ತು ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡು ಅನಾಗರಿಕ ರೀತಿಯಲ್ಲಿ ವರ್ತಿಸುವ ಅನೈತಿಕ ಪೊಲೀಸರ ವರ್ತನೆಯನ್ನು ಖಂಡಿಸುವುದಾಗಿ ಹೇಳಿದರು.
2014ರ ಜನವರಿಯಿಂದ ಡಿಸೆಂಬರ್ ತಿಂಗಳವರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 39 ಪ್ರಕರಣಗಳು ಸಂಘ ಪರಿವಾರದ ಸಂಘಟನೆಗಳಿಂದ ನಡೆದಿದ್ದರೆ, 14 ಪ್ರಕರಣಗಳು ಮುಸ್ಲಿಂ ಸಂಘಟನೆಗಳ ಸದಸ್ಯರಿಂದ ನಡೆದ ವರದಿಯಾಗಿದೆ. ಇಂತಹ ಜನರಿಂದಾಗಿ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಕಾಲೇಜು, ಪಾರ್ಟಿ, ಸಮಾರಂಭಗಳಲ್ಲಿಯೂ ಇವರ ದಾಳಿಯು ಆತಂಕವನ್ನು ಉಂಟು ಮಾಡಿದೆ ಎಂದು ಹೇಳಿದರು.
`‘ಮಕ್ಕಳಿಗೆ ನಾವು ಸಂಸ್ಕ್ರತಿಯ ಪಾಠವನ್ನು ಇಂತಹ ದಾಳಿಗಳ ಮೂಲಕ ಹೇಳಿಕೊಡುವುದು ಸರಿಯಲ್ಲ. ಮಹಿಳಾ ಸಮುದಾಯಕ್ಕೆ ಅವಮಾನ ಮಾಡುವ, ಅವರ ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವುದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಮಹಿಳಾ ಪರ ಹೋರಾಟಗಾರ್ತಿ ಸುಖಲತಾ ಇವರು ಹೇಳಿದರು.
ಕರಾವಳಿಯಲ್ಲಿ ಜೋರಾಗಿದೆ ಕೋಮು ಗೂಂಡಾಗಿರಿ, ಸಂಸ್ಕ್ರತಿ ರಕ್ಷಣೆಯ ನೆಪ, ಮುಗ್ಧ ಹೆಣ್ಣು ಮಕ್ಕಳೇ ಇವರ ಗುರಿ’, `ಧರ್ಮದ ಹೆಸರಿನಲ್ಲಿ ನಡೆಯುವ ಅನೈತಿಕ ಪೊಲೀಸ್ಗಿರಿ ನಿಲ್ಲಲಿ, ನಿಲ್ಲಲಿ’ ಎಂಬ ಹಲವಾರು ಘೋಷಣೆಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಮಹಿಳೆಯರು ಸುಮಾರು ಒಂದು ಗಂಟೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಪದಾಧಿಕಾರಿ ವಿದ್ಯಾ ದಿನಕರ್, ವಕೀಲರಾದ ದಿನೇಶ್ ಹೆಗ್ಡೆ ಉಳೇಪಾಡಿ, ಅನುಪಮ ಮಾಸಿಕದ ಸಂಪಾದಕಿ ಶಹನಾಝ್, ಉಮರ್ ಯು.ಎಚ್. ಮೊದಲಾದವರು ಉಪಸ್ಥಿತರಿದ್ದರು.
