ಬಂಟ್ವಾಳ: ತಾಲ್ಲೂಕಿನ ಲಯನ್ಸ್ ಕ್ಲಬ್ಬಿನ ವತಿಯಿಂದ ಇದೇ 5ರಂದು ‘ಕಾವಳಮೂಡೂರು ಗ್ರಾಮ ದತ್ತು ಸ್ವೀಕಾರ ಮತ್ತು ಬೃಹತ್ ಉಚಿತ ಆರೋಗ್ಯ ಶಿಬಿರ’ ಕಾರ್ಯಕ್ರಮವನ್ನು ಇಲ್ಲಿನ ಕಾವಳಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದೆ ಲಯನ್ಸ್ ಕ್ಲಬ್ಬಿನ ಪ್ರಾಂತೀಯ ಅಧ್ಯಕ್ಷ ಗೋವರ್ಧನ್ ಶೆಟ್ಟಿ ಅವರು ಬಿ.ಸಿ.ರೋಡ್ನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಕಾವಳಕಟ್ಟೆ ರಾಜೀವಗಾಂಧಿ ಸೇವಾ ಕೇಂದ್ರ, ಸಾರ್ವಜನಿಕ ಶೌಚಾಲಯ, ಶಾಲೆ ಸಂಪರ್ಕಿಸುವ ರಸ್ತೆಗೆ ಮೋರಿ ನಿರ್ಮಾಣ, ಕಂಪ್ಯೂಟರ್ ಕೊಡುಗೆ, ಕಾವಳಕಟ್ಟೆ ಗ್ರಾಮ ಪಂಚಾಯಿತಿ ಬಳಿ ಪ್ರಯಾಣಿಕರ ತಂಗುದಾಣ ಉದ್ಘಾಟನೆ ನಡೆಯಲಿದೆ ಎಂದು ಅವರು ತಿಳಿಸಿದರು. ದೇರಳಕಟ್ಟೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನಿಡುವರು. ಅಂದು ಬೆಳಿಗ್ಗೆಯಿಂದ ಮಧ್ಯಾಹ್ನತನಕ ನಡೆಯುವ ಆರೋಗ್ಯ ಶಿಬಿರದಲ್ಲಿ ಸಾಮಾನ್ಯ ಪರೀಕ್ಷೆ, ರಕ್ತದೊತ್ತಡ, ಮಧುಮೇಹ, ಇಸಿಜಿ ಸಹಿತ ಮಕ್ಕಳು ಮತ್ತು ಸ್ತ್ರೀಯರ ರೋಗ ತಜ್ಞ ವೈದ್ಯರು ಭಾಗವಹಿಸುವರು. ಚರ್ಮರೋಗ. ಮೂಳೆ, ನೇತ್ರ, ದಂತ, ಕೀಲು, ಕಿವಿ, ಮೂಗು, ಗಂಟಲು ಮತ್ತಿತರ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ತಾ.ಪಂ. ಸದಸ್ಯ ಬಿ.ಪದ್ಮಶೇಖರ ಜೈನ್, ಲಯನ್ಸ್ ಕಾರ್ಯದರ್ಶಿ ಮನೋಹರ ಶೆಟ್ಟಿ, ಬಾಲಕೃಷ್ಣ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
