ಮಂಗಳೂರು,: ನಗರದ ಹೊರವಲಯದ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಗಂಜಿಮಠದ ಮುಖ್ಯಪೇಟೆಯಲ್ಲಿರುವ ಮೊಬೈಲ್ ಟವರೊಂದರ ಹತ್ತಿರ ಎಂಟು ಸಜೀವ ಪೆಟ್ರೋಲ್ ಬಾಂಬ್‍ಗಳು ಹಾಗೂ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಕರಾವಳಿಯಲ್ಲಿ ಭಾರೀ ಆತಂಕ ಸೃಷ್ಟಿಸಿದೆ.
ಗಂಜಿಮಠದ ಮುಖ್ಯಪೇಟೆಯಲ್ಲಿನ ಮೊಬೈಲ್ ಟವರ್‍ನ ಬಳಿಯಲ್ಲಿ ಇರಿಸಲಾಗಿದ್ದ ಈ ಕಚ್ಚಾ ಬಾಂಬ್ ಹಾಗೂ ತಲವಾರ್‍ಗಳು, ಸ್ಥಳೀಯ ನಿವಾಸಿ ಅಬ್ದುಲ್ ಖಾದರ್ ಎಂಬವರಿಗೆ ಸೇರಿದ ಮನೆಯಲ್ಲಿ ಬಾಡಿಗೆದಾರರಾಗಿರುವ ಅಜೀಬ್ ನಜೀಬ್ ಎಂಬವರ ಪತ್ನಿ ನಿನ್ನೆ ರಾತ್ರಿ ಸುಮಾರು 9 ಗಂಟೆ ಸಮಯಕ್ಕೆ ಮನೆಯ ಕಸ ಎಸೆಯಲೆಂದು ತೆರಳಿದ್ದಾಗ ಅವರ ಕಣ್ಣಿಗೆ ಬಿದ್ದಿದೆ. ಮೊಬೈಲ್ ಟವರ್ ಬಳಿ ಹಳದಿ ಬಣ್ಣದ ಗೋಣಿಚೀಲವೊಂದು ಇಟ್ಟಿರುವುದು ಅವರ ಗಮನಕ್ಕೆ ಬಂದಿದ್ದು, ಸಂಶಯಗೊಂಡು ಅದನ್ನು ತೆರೆದಾಗ ಒಳಗಡೆ ಮುಚ್ಚಳ ಭಾಗದಲ್ಲಿ ಬಟ್ಟೆ ಅಳವಡಿಸಿದ್ದ ಪೆಟ್ರೋಲ್ ತುಂಬಿದ್ದ ಬಾಟಲಿ ಹಾಗೂ ತಲವಾರುಗಳು ಕಂಡು ಬಂದಿತ್ತು. ತಕ್ಷಣವೇ ಅವರು ತನ್ನ ಪತಿಗೆ ವಿಷಯ ತಿಳಿಸಿದ್ದು, ಅವರು ಬಜಪೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ತನಿಖೆ ಆರಂಭಿಸಿದಾಗ, ಇವು ಕಚ್ಚಾ ಬಾಂಬ್‍ಗಳೆಂದು ಖಚಿತಗೊಂಡಿದ್ದು, 8 ಪೆಟ್ರೋಲ್ ಬಾಂಬ್ ಹಾಗೂ ಎರಡು ಉದ್ದದ ಕಬ್ಬಿಣದ ತಲವಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.


ಆಯುಕ್ತರ ದೌಡು
ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಎಸ್.ಮುರುಗನ್ ಸ್ಥಳಕ್ಕೆ ತಕ್ಷಣವೇ ಧಾವಿಸಿದ್ದು, ತನಿಖೆಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಅಜೀಬ್ ನಜೀಬ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಬೆರಳಚ್ಚು ತಜ್ಞರ ಭೇಟಿ
ಘಟನಾ ಸ್ಥಳಕ್ಕೆ ಇಂದು ಬೆಳಿಗ್ಗೆ ಬೆರಳಚ್ಚು ತಜ್ಞರು, ಶ್ವಾನ ದಳ ಭೇಟಿ ನೀಡಿದ್ದು, ಸಮಗ್ರ ತನಿಖೆಯಲ್ಲಿ ನಿರತರಾಗಿದ್ದಾರೆ.
ದುಷ್ಕøತ್ಯಕ್ಕೆ ಸಂಚು?
ಕರಾವಳಿ ಭಾಗದಲ್ಲಿ ಕಿಡಿಗೇಡಿಗಳು ವ್ಯವಸ್ಥಿತವಾದ ದುಷ್ಕøತ್ಯವನ್ನು ನಡೆಸಲು ಈ ಅಕ್ರಮವಾಗಿ ಸಜೀವ ಬಾಂಬ್‍ಗಳನ್ನು ಜನ ಸಂಚಾರವಿರದ ಈ ಪ್ರದೇಶದಲ್ಲಿ ಅಡಗಿಸಿಲ್ಲಿಟ್ಟಿರಬಹುದು ಎಂದು ಶಂಕಿಸಲಾಗಿದೆ. ಜಿಲ್ಲೆಯಲ್ಲಿ ಕೋಮು ಗಲಭೆ ಹಾಗೂ ಇನ್ನಿತರ ಅಹಿತಕರ ಕೃತ್ಯ ನಡೆಸಲು ವ್ಯವಸ್ಥಿತ ಹುನ್ನಾರ ನಡೆಸಿರುವುದನ್ನೂ ಅಲ್ಲಗಳೆಯಲಾಗದು ಎಂದು ಪೊಲೀಸರು ಸಂಶಯಿಸಿದ್ದಾರೆ. ಇದೀಗ ಬಂದೋಬಸ್ತ್ ಹೆಚ್ಚಿಸಿರುವ ಪೊಲೀಸರು, ರಾತ್ರಿ ಸಮಯದಲ್ಲಿ ಕೈಕಂಬ ಮೂಡಬಿದಿರೆ ಹಾಗೂ ಗುರುಪುರ ಮಾರ್ಗದಲ್ಲಿ ಸಂಚರಿಸಿರುವ ಎಲ್ಲಾ ವಾಹನಗಳ ದಾಖಲೆಯನ್ನು ಪರಿಶೀಲಿಸುತ್ತಿದ್ದಾರೆ.
ಪರಿಚಿತರ ಕೃತ್ಯವೇ?
ಈ ಕಚ್ಚಾ ಬಾಂಬ್ ಇಲ್ಲಿ ಪತ್ತೆಯಾಗುವ ಹಿಂದೆ ಸ್ಥಳೀಯರ ಕೈವಾಡವಿರಬಹುದೇ ಎಂಬ ನಿಟ್ಟಿನಲ್ಲೂ ತನಿಖೆಯನ್ನು ನಡೆಸುತ್ತಿರುವ ಪೊಲೀಸರು ಈ ಬಗ್ಗೆ ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ. ಇದೀಗ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಕರಾವಳಿಯ ಶಾಂತಿ ಕದಡಲು ಯತ್ನಿಸಿದ ದುಷ್ಕರ್ಮಿಗಳಿಗಾಗಿ ವ್ಯಾಪಕ ಬಲೆ ಬೀಸಿದ್ದಾರೆ.
ಬಾಕ್ಸ್
ಕಚ್ಚಾ ಬಾಂಬ್ ಪತ್ತೆಯಾದ ಸ್ಥಳದ ಆಸುಪಾಸಿನಲ್ಲಿ ಐಟಿ ಪಾರ್ಕ್, ಶಿಕ್ಷಣ ಸಂಸ್ಥೆ, ಹಂಚಿನ ಕಾರ್ಖಾನೆಗಳಿವೆ. ಅತೀ ಹೆಚ್ಚು ಜನಸಂಚಾರವಿರುವ ಈ ಭಾಗದಲ್ಲಿ ಆಕಸ್ಮಿಕವಾಗಿಯಾದರೂ ಈ ಬಾಂಬ್ ಸಿಡಿದಿದ್ದರೆ ಭಾರೀ ಅನಾಹುತವೇ ಘಟಿಸುತ್ತಿತ್ತು ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

