ಬಂಟ್ವಾಳ:ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ವಾಟ್ಸ್ಅಪ್ ನಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ ಮಂಗಳೂರು ತಾಲೂಕಿನ ವಾಲಪಾಡಿ ಗ್ರಾಮದ ತಾರಿಪಡ್ಪು ನಿವಾಸಿ ಪ್ರವೀಣ್ ಪೂಜಾರಿ ಎಂಬಾತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಂಟ್ವಾಳ ನಗರ ಪೊಲೀಸರಿಗೆ ಶನಿವಾರ ಸಂಜೆ ಮನವಿ ಸಲ್ಲಿಸಲಾಗಿದೆ.
ಡಿ.ಕೆ. ರವಿ ಸಾವಿನಿಂದ ಮನನೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನ ಎಂದು ತನ್ನ ವಾಟ್ಸಪ್ನಲ್ಲಿ ಅವಹೇಳನಕಾರಿಯಾಗಿ ಸುದ್ದಿ ರವಾನಿಸಿ ಮುಖ್ಯಮಂತ್ರಿಗಳ ಸ್ಥಾನಕ್ಕೆ ಕಳಂಕ ತಂದಿರುವುದು ರಾಜ್ಯ ಸರ್ಕಾರಕ್ಕೆ ಅವಮಾನ ಮಾಡಿದಂತೆ ಎಂದು ಠಾಣಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ. ಇದನ್ನು ಗಂಭೀರ ಪ್ರಕರಣವೆಂದು ಪರಿಗಣಿಸಿ ಸಂಬಂಧಪಟ್ಟ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಮನವಿಯಲ್ಲಿ ಆಗ್ರಹಿಸಿದ್ದಾರೆ.
