ಮೊನ್ನೆ ಭಾನುವಾರ. ಇನ್ನೂ ಹಾಸಿಗೆಯಿಂದ ಎದ್ದಿರಲಿಲ್ಲ. ಮೊಬೈಲ್ ರಿಂಗುಣಿಸಿತು. ದೇವಸ್ಥಾನವೊಂದರ ಪ್ರಮುಖರಿಂದ ಬಂದ ಕರೆ ಅದು. “ನಮ್ಮ ದೇವಸ್ಥಾನದ ಉತ್ಸವದ ಧಾರ್ಮಿಕ ಸಭೆಗೆ ಒಳ್ಳೆಯ ಗೆಸ್ಟ್ ಒಬ್ಬರನ್ನು ಸೂಚಿಸಿ” ಎಂದರು. ನನ್ನ ಸಂಪರ್ಕದಲ್ಲಿರುವ ಧರ್ಮ ನೇತಾರರ, ಉತ್ತಮ ಧಾರ್ಮಿಕ ಉಪನ್ಯಾಸಕರ ಹಾಗೂ ಧರ್ಮ ಚಿಂತಕರ ಹೆಸರನ್ನು ಸೂಚಿಸಿದೆ. ಆದರೆ ಇದ್ಯಾವ ಹೆಸರೂಗಳು ಅವರಿಗೆ ಇಷ್ಟವಾಗಲಿಲ್ಲ. ” ನಮಗೆ ಅಂತಹ ಅತಿಥಿಗಳು ಬೇಡ. ಅವರು ಮಾತಾಡಡಿದ್ದರೂ ಚಿಂತೆ ಇಲ್ಲ. ವೇದಿಕೆಯಲ್ಲಿ ಕುಳಿತುಕೊಂಡರೆ ಸಾಕು. ಆದರೆ ಉತ್ಸವಕ್ಕೆಂದು ಕನಿಷ್ಠ 25 ಸಾವಿರ ರೂಪಾಯಿಯಾದರೂ ಡೊನೇಶನ್ ಕೊಡುವವರು ಬೇಕು” ಎಂದರವರು. ನನ್ನ ಲೀಸ್ಟ್ನಲ್ಲಿ ದುಡ್ಡು ಕೊಟ್ಟು ಅತಿಥಿಯಾಗುವವರು ಇಲ್ಲದ್ದರಿಂದ ನಾನು ಹೆಚ್ಚೇನೂ ಮಾತಾಡದೇ ಸುಮ್ಮನಾದೆ.

ನಂತರ ಯೋಚಿಸುತ್ತಿದ್ದಂತೆ ಇತ್ತೀಚೆಗೆ ಬಹುತೇಕ ಕ್ಷೇತ್ರಗಳಲ್ಲಿರುವ ಸಮಿತಿಗಳು, ಅಲ್ಲಿ ನಡೆಯುವ ಪೂಜೆ, ಉತ್ಸವಗಳು, ಅಲ್ಲಿನ ಧಾರ್ಮಿಕ ಸಭೆಗಳು ಒಮ್ಮೆ ಕಣ್ಣಮುಂದೆ ಬಂತು. ಹೌದು, ಇಂದಿನ ಪ್ರಜಾಪ್ರಭುತ್ವದ ಕಾಲಘಟ್ಟದಲ್ಲಿಯೂ ದೇವಾಲಯಗಳಲ್ಲಿ ನಡೆಯುವ ಬಹುತೇಕ ಪ್ರಮುಖ ಕಾರ್ಯಕ್ರಮಗಳಲ್ಲಿ ರಾರಾಜಿಸುತ್ತಿರುವವರು ಸಾಕಷ್ಟು ದುಡ್ಡು, ಇಲ್ಲವೇ ಅಧಿಕಾರವಿದ್ದವರು ಮಾತ್ರ. ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ಉತ್ಸವದ ಯಶಸ್ವಿಗಾಗಿ ಹಗಲಿರುಳು ದುಡಿದ ಸಹಸ್ರಾರು ಕಾರ್ಯಕರ್ತರು-ಶ್ರಮಜೀವಿಗಳು ಗುರುತಿಸಲ್ಪಡುವುದು, ಗೌರವಿಸಲ್ಪಡುವುದು ತೀರಾ ಕಡಿಮೆ. ದೇವಸ್ಥಾನದ ಆಡಳಿತ ಮಂಡಳಿ ಇಲ್ಲವೇ ಪ್ರಮುಖ ಸಮಿತಿಗಳಲ್ಲಿಯೂ ಜಾತಿಶ್ರೇಷ್ಟತೆ, ವೃತ್ತಿಶ್ರೇಷ್ಠತೆ, ಜನಬಲ, ಹಣಬಲವಿದ್ದವರದ್ದೇ ಕಾರುಬಾರು. ದೇವಸ್ಥಾನ, ಉತ್ಸವಾದಿಯಾಗಿ ಎಲ್ಲದಕ್ಕೂ ತಮ್ಮದೆಲ್ಲವನ್ನೂ ತ್ಯಾಗ ಮಾಡುವ ಜನಸಾಮಾನ್ಯ ಭಕ್ತವರ್ಗದ ಶ್ರಮ, ಸೇವೆಯೂ ಮಹತ್ತರವಾದುದು ಎನ್ನುವುದು ಬಹುತೇಕ ದೇವಸ್ಥಾನಗಳಲ್ಲಿ ಇನ್ನೂ ಗಣನೆಗೆ ಬಂದಿಲ್ಲ.
ಆರಾಧನಾ ಕೇಂದ್ರಗಳ ಒಳಗೂ ದುಡ್ಡು ಇದ್ದವರಿಗೆ ಅಧಿಕಾರ, ಧಾರ್ಮಿಕ ಸಮಾರಂಭಗಳಲ್ಲೂ ದುಡ್ಡು ಕೊಟ್ಟವರಿಗೆ-ಅಧಿಕಾರ ಇದ್ದವರಿಗೆ ಮಾತ್ರ ಅತಿಥಿ ಸ್ಥಾನ, ಕಟ್ಟಡ ಕಟ್ಟಿಸಿದವರಿಗೆ ಸನ್ಮಾನ, ಹೆಚ್ಚು ಡೊನೇಶನ್ ನೀಡಿದವರಿಗೆ ಪ್ರಶಸ್ತಿ ಎಂದಾದರೆ ಅವರು ಮಾತ್ರವೇ ದೇವರ ಭಕ್ತರೇ? ಅವರು ಮಾತ್ರವೇ ಶ್ರೇಷ್ಠರೇ? ಅವರಿಂದಷ್ಟೇ ಯಾವುದೇ ಕ್ಷೇತ್ರ ಬೆಳಗುತ್ತದೆಯೇ? ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆಯುವ ಬಹುತೇಕ ಧಾರ್ಮಿಕ ಸಭೆಗಳಿಗೂ ಡೋನರ್ಸ್ ಎಂಬ ನೆಪದಲ್ಲಿ ಉಧ್ಯಮಿಗಳನ್ನೇ ಅತಿಥಿಗಳನ್ನಾಗಿ ಆಯ್ಕೆ ಮಾಡಲಾಗುತ್ತಿದೆ. ಧರ್ಮದ ಬಗ್ಗೆ, ದೇವರ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಚಿಂತಿಲ್ಲ, ಕೊಡುವ ದುಡ್ಡಿನಿಂದಷ್ಟೇ ಅವರಿಗೆ ಧರ್ಮ ಸಭೆಯ ಅತಿಥಿಯಾಗುವ ಅವಕಾಶ ದೊರೆಯುತ್ತಿರುವಾಗ ಅಂತಹ ಧರ್ಮ ಸಭೆಗಳು ನಡೆಯುವುದಾದರೂ ಯಾತಕ್ಕೆ? ಅಂತಹ ಸಭೆಗಳಿಂದ ಭಕ್ತರಿಗೆ ಸಿಗುವ ಸಂದೇಶವಾದರೂ ಏನು? ಇಂತಹ ಧಾರ್ಮಿಕ ಸಭೆಗಳು ಧರ್ಮ ಜಾಗೃತಿಯಲ್ಲಿ ಪೂರಕ ಪಾತ್ರವಹಿಸುತ್ತಿದೆಯೇ ಎಂಬ ಪ್ರಶ್ನೆಗಳು ಪ್ರಜ್ನಾವಂತರನ್ನು ಸಹಜವಾಗಿಯೇ ಕಾಡುತ್ತದೆ.
ನಿಜವಾದ ಧಾರ್ಮಿಕ ಕಾರ್ಯಕರ್ತರು, ವಿಚಾರವಂತರು, ಧರ್ಮ ಜಾಗೃತಿಯ ಬಗ್ಗೆ ವಿಚಾರ ಮಂಡಿಸಿ ಭಕ್ತರಿಗೆ ಉತ್ತಮ ಸಂದೇಶ ಕೊಡಲು ಶಕ್ತರಾಗಿರುವವರು ಸಾಕಷ್ಟು ಪ್ರಮಾಣದಲ್ಲಿ ಪ್ರತೀ ಊರಿನಲ್ಲಿ ಇದ್ದರೂ ಬಹುಶಃ ಅವರಲ್ಲಿ ದುಡ್ಡು ಕೊಡುವ ಶಕ್ತಿ ಇಲ್ಲವೆಂದೋ, ದುಡ್ಡಿದ್ದರೂ ಕೊಡುವ ಮನಸ್ಸು ಇಲ್ಲದವರೆಂದು ಧಾರ್ಮಿ ಕ ವೇದಿಕೆಗಳಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗುತ್ತಿರುವುದು ವಿಷಾಧನೀಯವಾಗಿದೆ.
ಹಾಗೆಂದು ದೇವಸ್ಥಾನದ ಅಭಿವೃದ್ಧಿಗೆ ಸಹಾಯ ಮಾಡಿದ ದಾನಿಗಳನ್ನು, ಅಧಿಕಾರಸ್ಥರನ್ನು, ಗಣ್ಯರನ್ನು ಗೌರವಿಸಬಾರದು ಎಂಬ ಅರ್ಥವಲ್ಲ. ಅವರು ಗೌರವಾನ್ವಿತರೇ. ಆದರೆ ಆಥರ್ಿಕವಾಗಿ, ಸಾಮಾಜಿಕವಾಗಿ ಎತ್ತರದಲ್ಲಿರುವವರನ್ನಷ್ಟೇ ದೇವಸ್ಥಾನಗಳಲ್ಲೂ ಗುರುತಿಸುವುದು, ಅವರನ್ನಷ್ಟೇ ಅತಿಥಿಯಾಗಿ ಗೌರವಿಸುವುದು, ಅವರಷ್ಟೇ ನಮಗೆ ಮುಖ್ಯರು ಎಂದು ಯಾವುದೇ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಮಿತಿಯವರು ಭಾವಿಸುವುದು ಮಾತ್ರ ಧಾಮರ್ಿಕ ದುರಂತವಲ್ಲದೆ ಮತ್ತೇನು? ದುಡ್ಡು, ಅಧಿಕಾರ ಇದ್ದವರು ಮಾತ್ರ ಶ್ರೇಷ್ಠರು, ಶ್ರೇಷ್ಠ ವ್ಯಕ್ತಿತ್ವವುಳ್ಳವರು ಎಂದು ದೇವಸ್ಥಾನಗಳು ಈ ಮೂಲಕ ಬಿಂಬಿಸಹೊರಡುವುದು ಕೂಡ ಅಪಾಯಕಾರಿಯಲ್ಲವೇ?.
ದೇವಸ್ಥಾನಕ್ಕೆ ದೊಡ್ಡ ಕಾಣಿಕೆ ಕೊಟ್ಟವರೆಲ್ಲರೂ ಪ್ರಾಮಾಣಿಕವಾಗಿ ಬೆವರಿಳಿಸಿ ಸಂಪಾದಿಸಿದ್ದಾರೆ ಎನ್ನುವುದಕ್ಕೂ ಯಾವ ಗ್ಯಾರಂಟಿಯೂ ಇಲ್ಲ. ಮೋಸ-ವಂಚನೆಯಿಂದ ಸಂಪಾದಿಸಿದ ಹಣವನ್ನೂ ದೇವಸ್ಥಾನಕ್ಕೆ ದಾನ ಕೊಟ್ಟು ಪಾಪ ಕಳೆಯುತ್ತೇನೆಂದು ಭಾವಿಸುವುದು ಕೂಡ ಬರಿಯ ಭ್ರಮೆಯಲ್ಲದೆ ಮತ್ತೇನಲ್ಲ.
ದೊಡ್ಡ ತಟ್ಟೆಯಲ್ಲಿ ಪ್ರಸಾದವೇ?:
ಮೊನ್ನೆ ಒಂದು ದೇವಸ್ಥಾನದಲ್ಲಿ ಪ್ರಸಾದಕ್ಕೆಂದು ಸರತಿ ಸಾಲಿನಲ್ಲಿ ನಿಂತಿದ್ದೆ. ಮಕ್ಕಳು, ಮಹಿಳೆಯರು, ವೃದ್ಧರೆಂಬ ಭೇದವಿಲ್ಲದೆ ಎಲ್ಲರೂ ಸಾಲಿನಲ್ಲಿದ್ದರು. ಆಗ ಯಾರೋ “ದೊಡ್ಡ”ವರೆನಿಸಿಕೊಂಡವರು ಅಲ್ಲಿಗೆ ಬಂದರಂತೆ. ತಕ್ಷಣ ಅವರ ಹಿಂದೆ ಮುಂದೆ ದೇವಸ್ಥಾನದ ಪ್ರಮುಖರು ಸುತ್ತುವರಿದರು. ಸರತಿ ಸಾಲಿನಲ್ಲಿ ಗಂಟೆಕಟ್ಟಲೆ ಪ್ರಸಾದಕ್ಕಾಗಿ ಕಾಯುತ್ತಿದ್ದವರನ್ನು ಅಲ್ಲೇ ತಡೆದು ನಿಲ್ಲಿಸಿದರು. ದೊಡ್ಡವನನ್ನು ಮೆರವಣಿಗೆಯಲ್ಲೇ ಕರೆತಂದಂತೆ ತಂದು ದೇವರ ಗುಡಿ ಎದುರು ನಿಲ್ಲಿಸಿದರು. ಅವರಿಗೆ ಪ್ರಸಾದ ನೀಡುವಾಗಲೂ ಅರ್ಚಕರು ಸುದೀರ್ಘ ಪ್ರಾರ್ಥನೆ ಮಾಡುತ್ತಾ, ದೊಡ್ಡ ತಟ್ಟೆಯಲ್ಲಿ ಮಲ್ಲಿಗೆಯ ಮಾಲೆ-ಹಣ್ಣು ಹಂಪಲು ಸಹಿತ ಪ್ರಸಾದ ನೀಡಿದರು. ಎಲ್ಲವೂ ಮುಗಿದು ಅವರು ದೇವಾಲಯದ ಹೊರಗೆ ಬರಲು ತಗುಲಿದ್ದು ಸುಮಾರು ಒಂದು ಗಂಟೆ. ಅಷ್ಟೊತ್ತು ಹೊರಗೆ ಸುಡುಬಿಸಿಲಿನ ಸಾಲಿನಲ್ಲಿದ್ದವರದ್ದು ಪಾಪ ಯಾರಿಗೂ ಬೇಡದ ಅಮಾನವೀಯ ಸ್ಥಿತಿ.
ಅದೇ ಸುದೀರ್ಘ ಹೊತ್ತು ಸರತಿ ಸಾಲಿನಲ್ಲಿ ಬಂದ ಅದೇ ಜನಸಾಮಾನ್ಯ ಭಕ್ತರಿಗೆ ಚಿಮಿಟಿ ಗಂಧ, ಹೂವಿನ ಎಸಳಿನ ಪ್ರಸಾದದ ಎಸೆಯುವಿಕೆಯೂ ಗಮನ ಸೆಳೆಯಿತು. ಆದರೂ ದೇವರ ಪ್ರಸಾದ ತಾನೆ. ಭಕ್ತಿ ಭಾವದಿಂದ ಸ್ವೀಕರಿಸಿದ ಭಕ್ತರು ಭಾವಪರವಶರಾದರು.
ಕೆಲವು ದೇವಸ್ಥಾನಗಳಲ್ಲಿ ಪ್ರಸಾದದೊಂದಿಗೆ ನೀಡುವ ಹೂವುಗಳಲ್ಲೂ ತಾರತಮ್ಯ ನಡೆಯುವುದು ಕಂಡಾಗ ಗುಡಿಯೊಳಗೆ ವಿರಾಜಮಾನನಾಗಿರುವ ಕರುಣಾಮಯಿ, ಭಕ್ತವತ್ಸಲ ಭಗವಂತ ಇದನ್ನೆಲ್ಲಾ ಸಹಿಸಿಕೊಂಡಾನೆಯೇ ಎಂಬ ಪ್ರಶ್ನೆ ನನ್ನನ್ನು ಆಗಾಗ್ಗೆ ಕಾಡುತ್ತಿದೆ. ತಟ್ಟೆಗೆ ದೊಡ್ಡ ಕಾಣಿಕೆ ಹಾಕುವವರಿಗೆ ಒಂದು ರೀತಿಯ ಪ್ರಸಾದ, ಏನೂ ಹಾಕದವರಿಗೆ ಮತ್ತೊಂದು ರೀತಿಯಲ್ಲಿ ಪ್ರಸಾದ, ಅತಿಥಿಗಳೆನಿಸಿಕೊಂಡವರಿಗೆ ಬೇರೆಯೇ ಸ್ಥಳದಲ್ಲಿ ಒಂದು ರೀತಿಯ ಫಲಾಹಾರ-ಊಟ, ಸಾಮಾನ್ಯ ಭಕ್ತರಿಗೆ ಮತ್ತೊಂದು ಜಾಗದಲ್ಲಿ ಮತ್ತೊಂದು ರೀತಿಯಲ್ಲಿ, ದುಡ್ಡು ಕೊಟ್ಟಿದ್ದಾರೆ ದೊಡ್ಡವರು ಎಂಬ ಕಾರಣಕ್ಕೆ ಎಲ್ಲಡೆಯೂ ನೇರ ದರ್ಶನ, ಸಾಮಾನ್ಯ ಭಕ್ತರಿಗೆ ಎಲ್ಲಡೆಯೂ ಸರತಿ ಸಾಲಿನ ಪಯಣ….ಹೀಗೆ ದೇವಾಲಯದಲ್ಲೂ ದುಡ್ಡೇ ದೊಡ್ಡಪ್ಪ, ಅಧಿಕಾರವಿದ್ದವನೇ ನಮ್ಮಪ್ಪ ಎಂದಾದರೆ ಪಾಪ ಭಕ್ತನ ಪಾಲಿಗೆ ಆ ಶಿವಪ್ಪನೇ ಗತಿ.
ಭಕ್ತಿಗೆ ಬೆಲೆ ಇಲ್ಲವೇ?:
ಎಲ್ಲಾ ಜಾತಿ-ವರ್ಗದ ಭಕ್ತರ ಹಾಗೂ ಶ್ರಮಜೀವಿಗಳ ಭಕ್ತಿ, ಶ್ರಮ, ಸೇವೆ, ಬೆವರು, ದುಡಿಮೆ ಎಲ್ಲವೂ ದೊಡ್ಡವರೆನಿಸಿಕೊಂಡವರ ದೊಡ್ಡ ಜಾತಿ, ದೊಡ್ಡ ದುಡ್ಡು, ದೊಡ್ಡ ಅಧಿಕಾರಕ್ಕಿಂತಲೂ ಬೆಲೆಯುಳ್ಳದು ಎಂಬ ಮನೋಭಾವನೆ ಎಲ್ಲಡೆಯೂ ಇನ್ನೂ ಬೆಳೆದಿಲ್ಲ. ದೇವಸ್ಥಾನಕ್ಕಾಗಿ ಭಕ್ತಿಯಿಂದಲೂ, ಭಯದಿಂದಲೂ ತನ್ನ ಹಸಿವೆಯನ್ನೂ ಕಟ್ಟಿಟ್ಟು, ಹಿಡಿಯಕ್ಕಿ ತೆಗೆದಿಟ್ಟು, ಚಿಲ್ಲರೆಯನ್ನು ಕೂಡಿಟ್ಟು ಶ್ರದ್ಧಾ ಭಕ್ತಿಯಿಂದ ಸಮಪರ್ಿಸುವ ಬಡ ಕೂಲಿ ಕಾರ್ಮಿಕರ ದೇಣಿಗೆಯು ಅಮೂಲ್ಯವೆಂಬ ಸತ್ಯ ಇನ್ನೂ ಸಾಕ್ಷಾತ್ಕಾರವಾಗಿಲ್ಲ. ದೇವಸ್ಥಾನದ ಅಭಿವೃದ್ದಿ-ಉತ್ಸವದ ಹೆಸರಿನಲ್ಲಿ ತನ್ನ ನಿತ್ಯ ಕೆಲಸ, ಮನೆ, ಕುಟುಂಬದ ಹಿತವನ್ನೂ ಲೆಕ್ಕಿಸದೇ, ತಿಂಗಳುಗಟ್ಟಲೆ ರಾತ್ರ್ರಿ-ಹಗಲೆನ್ನದೆ ದೇವಸ್ಥಾನದಲ್ಲೇ ಬೀಡುಬಿಟ್ಟು, ತನ್ನ ರಕ್ತವನ್ನೇ ಬೆವರಾಗಿಸಿ, ಶ್ರಮದಾನ ಮಾಡುವ ಶ್ರಮಜೀವಿಗಳ ಶ್ರಮವೂ ಶ್ರೇಷ್ಠವೆಂದು ಇನ್ನೂ ಕೆಲವರಿಗೆ ಅರ್ಥವಾಗಿಲ್ಲ. ಹಾಗಾದರೆ ಇಂತಹ ಜನಸಮುದಾಯಕ್ಕೆ ಸಸಾಮಾಜಿಕ ನ್ಯಾಯ-ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಮಾನತೆಯ ಬದುಕು ಸಿಗುವುದಾದರೂ ಎಲ್ಲಿ?.
ದೇವಸ್ಥಾನಕ್ಕಾಗಿ ತಿಂಗಳುಗಟ್ಟಲೆ ದುಡಿದು, ಉತ್ಸವಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಹೆಗಲಲ್ಲಿ ಹೊತ್ತು, ದೇವಸ್ಥಾನದೊಳಗೂ, ಭೋಜನ ಶಾಲೆಯೊಳಗೂ ತಂದಿಡುವವರು ಶ್ರಮಜೀವಿ ಕಾರ್ಮಿಕರು. ಇವರ್ಯಾರೂ ಸಂಬಳಕ್ಕಾಗಿ ದುಡಿಯುವವರಲ್ಲ. ಇವರ್ಯಾರೂ ಮೇಲು-ಕೀಳು, ಬಡವ-ಬಲ್ಲಿದ ಎಂಬ ಭೇದವನ್ನು ಕಟ್ಟಿಕೊಂಡವರಲ್ಲ. ದೇವರಿಗಾಗಿ, ದೇವಸ್ಥಾನಕ್ಕಾಗಿ ಎಲ್ಲವನ್ನೂ ಮಾಡಲು ಸಿದ್ಧರಿರುವವರು. ಅವರು ದೇವರಿಗೆ ಕೊಡುವುದು ಭಕ್ತಿ, ಶ್ರದ್ಧೆ, ಶ್ರಮವನ್ನಷ್ಟೇ. ದೇವರಿಗೂ ಬೇಕಾದುದು ಅದೇ ತಾನೇ. ಆದರೆ ಇಂತವರ್ಯಾರೂ ದೇವಸ್ಥಾನಗಳ, ಉತ್ಸವಗಳ ಮುಖ್ಯವಾಹಿನಿಯಲ್ಲಿ ಎಂದೂ ಗುರುತಿಸಲ್ಪಡುವುದಿಲ್ಲ, ಗೌರವಿಸಲ್ಪಡುವುದಿಲ್ಲ. ಯಾಕೆಂದರೆ ಇವರು ಜಾತಿ, ಅಧಿಕಾರ, ದುಡ್ಡಿನಿಂದ ದೇವರನ್ನು ಒಲಿಸಿಕೊಳ್ಳುವವರಲ್ಲ. ಭಕ್ತಿಯಿಂದಲೇ ಭಕ್ತರಾದವರು, ದೇವರ ಆಪ್ತರಾದವರು, ದೇವಸ್ಥಾನದ ಆಸ್ತಿಯಾದವರು. ನಮ್ಮನ್ನು ಯಾರೂ ಗುರುತಿಸದಿದ್ದರೂ ಚಿಂತೆ ಇಲ್ಲ, ನಮ್ಮ ಸೇವೆ ದೇವರಿಗೆ ಸಮರ್ಪಣೆಯಾದರೆ ಸಾಕು ಎಂದು ನಂಬಿದವರು, ಅದರಲ್ಲೇ ತೃಪ್ತಿ ಹೊಂದಿದವರು ಇವರು.
ಉತ್ಸವದ ಮೊದಲು ಉಗ್ರಾಣದೊಳಗೆ, ಭೋಜನ ಶಾಲೆಯೊಳಗೂ ಎಲ್ಲವನ್ನೂ ತಂದಿಡುವ ಕಾರ್ಯಕರ್ತರು ಮತ್ತು ಭಕ್ತರು ಉತ್ಸವದ ಸಂದರ್ಭದಲ್ಲಿ ಮಾತ್ರ ಅಡುಗೆಯವರು ಹೊರಗೆ ತಂದಿಟ್ಟ ತಣ್ಣಗಾದ ಚಹಾ, ಕೆಟ್ಟು ಹೋದ ಪಾನಕ, ಗಟ್ಟಿಯಾದ ಅವಲಕ್ಕಿ ತಿಣ್ಣಬೇಕಾದ ಪರಿಸ್ಥಿತಿ ಈಗಲೂ ಕೆಲೆವೆಡೆ ಇದೆ. ಉತ್ಸವಕ್ಕೆ ಬೇಕಾದ-ಅನ್ನಸಂತರ್ಪಣೆಗೆ ಅಗತ್ಯವಾದ ಬಹುತೇಕ ಎಲ್ಲವನ್ನೂ ಶಕ್ತ್ಯಾನುಸಾರ ಹೊರೆಕಾಣಿಕೆಯ ರೂಪದಲ್ಲಿ ದಾನ ನೀಡುವ ರೈತರು, ಕೂಲಿ ಕಾರ್ಮಿಕ ಬಂಧುಗಳು ಉತ್ಸವದ ಸಂದರ್ಭಗಳಲ್ಲಿ ತೆರೆಮರೆಗೆ ಸರಿಯುವುದೂ ಇದೆ. ಉತ್ಸವಕ್ಕೆ ಬಂದವರೆಲ್ಲರಿಗೂ ಪಾನೀಯ ವಿತರಿಸಿ, ಫಲಾಹಾರ ಹಾಕಿ, ಅನ್ನ-ಸಾಂಬಾರು ಬಡಿಸಿ ಸುಸ್ತಾಗುವ ಶ್ರಮಜೀವಿ ಕಾರ್ಯಕರ್ತರು ಮಾತ್ರ ದಶಮಾನ ಕಳೆದರೂ ಕಾರ್ಯಕರ್ತರಾಗಿಯೇ ಇರುತ್ತಾರೆ. ದೇವಸ್ಥಾನಕ್ಕಾಗಿ ಏನೂ ಮಾಡದ, ದೇವರಿಗಾಗಿ ಏನೂ ಕೊಡದ, ಧರ್ಮವೆಂದರೆ ಏನೆಂದೂ ಗೊತ್ತಿಲ್ಲದ ಅನೇಕರು ಧರ್ಮದರ್ಶಿಯಾಗುತ್ತಾರೆ, ಸಮಿತಿ ಅಧ್ಯಕ್ಷರಾಗುತ್ತಾರೆ, ಸಭೆಯಲ್ಲಿ ಅತಿಥಿಯಾಗುತ್ತಾರೆ….ಕೆಲವು ದೇವಸ್ಥಾನಗಳ, ಅಲ್ಲಿನ ಉತ್ಸವಗಳ ಸ್ಥಿತಿ ಹೇಗಿದೆ ಎಂದು ಯೋಚಿಸುತ್ತಾ ಹೋದಂತೆ ಹೀಗೆ ಒಂದೊಂದೇ ವಿಚಾರಗಳು ಮನಸ್ಸಿನಲ್ಲಿ ಮೂಡುತ್ತಿದೆ.
ಭಗವಂತನ ಸನ್ನಿಧಿಯಲ್ಲೂ ಜಾತಿ, ದುಡ್ಡು, ಅಧಿಕಾರದ ಹೆಸರಿನಲ್ಲಿ ತಾರತಮ್ಯ ನಡೆದರೆ, ಭಕ್ತರ ಮನೆ-ಮನಸ್ಸುಗಳು ಒಡೆದರೆ ಮತ್ತೆ ಸಮಾನತೆಯನ್ನು ಕಾಣುವುದಾದರೂ ಎಲ್ಲಿ? ದೇವಸ್ಥಾನಗಳು ನಿಜಾರ್ಥದಲ್ಲಿ ಶಾಂತಿ, ನೆಮ್ಮದಿ ನೀಡುವ ತಾಣಗಳಾಗುವುದು-ಸಮಾಜದ ಸಮಗ್ರ ಪ್ರಗತಿಯ ಕೇಂದ್ರವಾಗುವುದಾದರೂ ಯಾವಾಗ? ನೀವೇ ಹೇಳಿ.
.ಗೋಪಾಲ ಅಂಚನ್
