ನಾಳೆಯಿಂದ ನಮ್ಮೂರಿನ ದೇವಸ್ಥಾನದ ಬ್ರಹ್ಮಕಲಶ. ಹೊರೆಕಾಣಿಕೆ ಮೆರವಣಿಗೆ ಇದೆ. ನಮ್ಮ ಮನೆಯಲ್ಲಿ ಅಕ್ಕಿ, ತೆಂಗಿನಕಾಯಿ, ಬಾಳೆಎಲೆ, ತರಕಾರಿ ಇದ್ಯಾವದೂ ಇಲ್ಲ. ಆದರೆ ಹೊರೆಕಾಣಿಕೆಯಲ್ಲಿ ನಮ್ಮದೂ ಪಾಲು ಇರಬೇಕಲ್ವ? ಅದಕ್ಕೆ ಅಂಗಡಿಯಿಂದ ತಂದು ನಾವು ಸ್ವಲ್ಪ ತರಕಾರಿ ಕೊಟ್ಟೆವು……ಹೀಗೆ ಭಕ್ತಿಯಿಂದಲೋ, ಭಯದಿ ಜನರಾಡುವ ಮಾತು ಕೇಳುವಾಗ ಅಚ್ಚರಿಯಾಗುತ್ತದೆ. ದೇವಸ್ಥಾನಕ್ಕೆ, ಉತ್ಸವಕ್ಕೆ ಭಕ್ತರೂ ತಮ್ಮ ಪಾಲು ನೀಡಬೇಕೆನ್ನುವುದು ಸರಿ. ಆದರೂ ಮನೆಯಲ್ಲಿ ಯಾವುದೇ ರೀತಿಯ ಉತ್ಪಾದನೆಗಳು ಇಲ್ಲದ ಮನೆ ಮಂದಿಯೂ ಏನನ್ನಾದರೂ ನೀಡಲೇಬೇಕೆಂಬ ಆದೇಶ ಎಷ್ಟರಮಟ್ಟಿಗೆ ನ್ಯಾಯೋಚಿತವಾದುದು? ಉಳ್ಳವರು ಏನೇನೋ ಕೊಡುತ್ತಾರೆ, ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಇಲ್ಲದವರು ಕೊಡಲೇಬೇಕೆನ್ನುವ ನಿರೀಕ್ಷೆ ಜನಸಾಮಾನ್ಯರ ಪಾಲಿಗೆ ಅಗ್ನಿ ಪರೀಕ್ಷೆಯಲ್ಲವೇ? ದೇವಸ್ಥಾನದ ಉತ್ಸವಕ್ಕೆ ಬೇಕಾದ ವಸ್ತುಗಳನ್ನು ಭಕ್ತರಿಂದಲೇ ಬಯಸುವ ಬದಲು ದೇವಸ್ಥಾನಗಳೇಕೇ ಇನ್ನೂ ಕ್ಷೇತ್ರಕ್ಕೆ ಬೇಕಾದ ಸೊತ್ತುಗಳನ್ನು ಸ್ವತಃ ಉತ್ಪಾದಿಸುವ ಉತ್ಪಾದನಾ ಕೇಂದ್ರವಾಗುತ್ತಿಲ್ಲ?
ಭಕ್ತರೇನೋ ತಮ್ಮ ಶಕ್ತ್ಯಾನುಸಾರ ಕೊಡುತ್ತಾರೆ, ಕೊಡದೆಯೂ ಇರಬಹುದು. ವಸ್ತು ರೂಪದಲ್ಲಿ ಏನನ್ನೂ ಕೊಡಲಾಗದವರು ಅದ್ಯಾವುದೋ ಸೇವೆ ಮಾಡಿಸಿ, ಇಲ್ಲವೇ ಡಬ್ಬಿಗೋ-ಹರಿವಾಣಕ್ಕೋ ಕಾಣಿಕೆ ಹಾಕಿಯೂ ಭಗವಂತನ ಪ್ರೀತಿಗೆ ಪಾತ್ರರಾಗಲು ಪ್ರಯತ್ನಿಸಿರಬಹುದು. ಇಲ್ಲವೇ ಇದ್ಯಾವುದನ್ನೂ ಮಾಡದೆಯೇ ದೇವರೊಡನೇ ಪ್ರಾರ್ಥಿಸುತ್ತಾ ನೆಮ್ಮದಿ ಪಡೆಯಬಹುದು. ಇವೆಲ್ಲವೂ ಅವರವರ ನಂಬಿಕೆಗೆ ಸಂಬಂಧಪಟ್ಟದ್ದು. ದೇವರ ಪಾಲಿಗೆ ಎಲ್ಲವನ್ನೂ ಕೊಟ್ಟವನೂ ಭಕ್ತನೇ, ಏನನ್ನೂ ಕೊಡಲು ಶಕ್ತಿ ಇಲ್ಲದವನೂ ಭಕ್ತನೇ. ಹೆಚ್ಚು ದುಡ್ಡು, ಹೆಚ್ಚು ವಸ್ತುಗಳನ್ನು ಕೊಟ್ಟು ದೇವರಿಂದ ಹೆಚ್ಚು ಪಡೆಯುತ್ತೇನೆ ಎಂದು ಭಾವಿಸುವುದು-ನಾನೇನೂ ಕೊಟ್ಟಿಲ್ಲ, ಅದಕ್ಕಾಗಿ ದೇವರು ನನಗೇನೂ ಕೊಟ್ಟಿಲ್ಲ ಎಂದು ಪರಿತಪಿಸುವುದು ಎರಡೂ ಭ್ರಮೆಯೇ ವಿನಃ ಮತ್ತೇನಲ್ಲ. ಯಾಕೆಂದರೆ ಭಗವಂತ ಕೊಡು-ಕೊಳ್ಳುವಿಕೆಯ ವ್ಯಾಪಾರಿಯೂ ಅಲ್ಲ. ನಿಷ್ಕಳಂಕ ಭಕ್ತಿ, ನಿಸ್ವಾರ್ಥ ಸೇವೆ ಹಾಗೂ ಶುದ್ಧ ಅಂತರಂಗಕ್ಕೆ ಭಗವಂತ ಒಲಿದ ನಿದರ್ಶನಗಳಿವೆಯೇ ಹೊರತು ದುಡ್ಡು, ಆಸ್ತಿ ಪಾಸ್ತಿಗೆ ಒಲಿದದ್ದು ಗೊತ್ತಿಲ್ಲ. ಆದರೂ ಕೊಡುತ್ತೇವೆ, ಅದು ಭಗವಂತನಿಗಾಗಿ ಖಂಡಿತ ಅಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ-ಆ ಮೂಲಕ ಸಮಾಜದ ಅಭಿವೃದ್ಧಿಗಾಗಿ, ನಮಗಾಗಿ ಮತ್ತು ನಮ್ಮ ನೆಮ್ಮದಿಗಾಗಿ. ಆದರೆ ಯಾವನೇ ಭಕ್ತ ಒತ್ತಡದಿಂದ, ಯಾರದೋ ಒತ್ತಾಸೆಯಿಂದ ಏನನ್ನೂ ಕೊಟ್ಟರೂ ಅದರಲ್ಲಿ ಸ್ವತಃ ತಾನು ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.
ಯಾವುದೇ ಉತ್ಸವ, ಬ್ರಹ್ಮಕಲಶೋತ್ಸವ, ನೇಮೋತ್ಸವ….ಹೀಗೆ ಏನೇ ಇರಲಿ. ಇವೆಲ್ಲವೂ ಊರಿನ ಕ್ಷೇಮ, ಒಗ್ಗೂಡುವಿಕೆ, ಸಾಮರಸ್ಯದ ವಾತಾವರಣ ನಿರ್ಮಾಣದೊಂದಿಗೆ ಭಕ್ತರ ಮನಸ್ಸಿಗೆ ನೆಮ್ಮದಿ ನೀಡುವ ಪ್ರಕ್ರಿಯೆಗಳಾಗಬೇಕೇ ಹೊರತು ಭಕ್ತರಿಗೆ ಮತ್ತಷ್ಟು ಒತ್ತಡ ನೀಡಿ ನೆಮ್ಮದಿಯನ್ನು ಕೆಡಿಸುವಂತಾಗಬಾರದು. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬೇಕಾದ ಬಹುತೇಕ ವಸ್ತುಗಳನ್ನು ದೇವಸ್ಥಾನಗಳೇ ಉತ್ಪಾದಿಸುವಂತಾಗಬೇಕು, ಇದಕ್ಕೆ ಅವಶ್ಯವಿದ್ದಲ್ಲಿ ಭಕ್ತರ ಶ್ರಮ-ಸಹಕಾರವನ್ನು ಪಡೆಯುವಂತಾಗಬೇಕು. ಉತ್ಸವದ ಸಂದರ್ಭ ವಸ್ತುಗಳಿಗಾಗಿ ಗ್ರಾಮ ಸುತ್ತುವ, ಕೊಡಬೇಕೆಂದು ಒತ್ತಾಯಿಸುವ, ವಸ್ತುಗಳನ್ನು ದೇವಸ್ಥಾನಕ್ಕೆ ತರಲೆಂದೇ ಅದ್ಧೂರಿ ಮೆರವಣಿಗೆ ನಡೆಸಿ ಭಕ್ತರ ಹಣವನ್ನು ಪೋಲು ಮಾಡುವ ಕೆಟ್ಟ ಸಂಸ್ಕøತಿಗೆ ಕಡಿವಾಣ ಬೀಳುವಂತಾಗಬೇಕು.
ನಮ್ಮ ನಾಡಿನ ಬಹುತೇಕ ಗ್ರಾಮ ದೇವಸ್ಥಾನಗಳ ಪರಿಸರವನ್ನೊಮ್ಮೆ ಗಮನಿಸೋಣ. ಅಲ್ಲಿ ದೇವಸ್ಥಾನಕ್ಕೆಂದು ಅದೆಷ್ಟೋ ಎಕರೆಗಟ್ಟಲೆ ಜಾಗವಿದೆ. ಜಾಗದ ಮಧ್ಯದಲ್ಲೊಂದು ದೇವಸ್ಥಾನ, ಒಳಗೆ ಒಂದೆರೆಡು ದೇವರು, ಒಂದೆರಡು ಅರ್ಚಕರು. ನಿತ್ಯ ಬಂದರೆ ಬೆರಳೆಣಿಕೆಯ ಭಕ್ತರು. ನಿತ್ಯ ಪೂಜೆಯ ಹೊತ್ತಿಗೆ ಜಾಗಟೆ, ಮಣಿಯ ಶಬ್ಧ ಹೊರತು ಪಡಿಸಿದರೆ ಉಳಿದೆಲ್ಲಾ ಸಮಯದಲ್ಲಿ ನಿಶ್ಯಬ್ದ. ಪರಿಸರವಿಡೀ ನಿರ್ಜೀವ ಸ್ಥಿತಿ. ಬಹುತೇಕ ಸಮಯದಲ್ಲಿ ಎಲ್ಲವನ್ನೂ ಸೃಷ್ಠಿಸಿದ, ಎಲ್ಲೆಲ್ಲೂ ಇರುವ ಸೃಷ್ಠಿಕರ್ತನೇ ದೇವಸ್ಥಾನದೊಳಗಿನ ಚಿಕ್ಕ ಗುಡಿಯಲ್ಲಿ ಬಂಧಿ. ಇರಲಿ, ಬಿಡೋಣ. ಆದರೆ ದೇವಸ್ಥಾನದ ಸುತ್ತಮುತ್ತಲಿರುವ ಹೊರಾಂಗಣ ಜಾಗವೂ ಜೀವಕಳೆದುಕೊಂಡ ಸ್ಥಿತಿಯಲ್ಲಿರುವುದು ನಿಜಕ್ಕೂ ದುರಂತ. ನಿತ್ಯ ಪೂಜೆಗೆ ಬೇಕಾದ ಹೂವುಗಳನ್ನು ಉತ್ಪಾದಿಸಲಾಗದಷ್ಟು ಈ ಮಣ್ಣು ಸತ್ವವನ್ನು ಕಳೆದುಕೊಂಡರೇ ಈ ಬರಡು ನೆಲವನ್ನು ದೇವಸ್ಥಾನದ ಜಾಗ, ಪರಿಸರ, ಭೂಮಿ, ಅಂಗಣ ಇತ್ಯಾದಿ ಹೆಸರುಗಳಿಂದ ಕರೆಯುವುದರಲ್ಲಿ ಏನು ಅರ್ಥವಿದೆಯೋ ಅರ್ಥವಾಗುತ್ತಿಲ್ಲ.
ಹಲವು ದೇವಸ್ಥಾನಗಳಲ್ಲಿ ಅಲ್ಲಿನ ಸುತ್ತಮುತ್ತಲಿನ ಜಾಗ ಬಳಕೆಯಾಗುವುದು ವಾರ್ಷಿಕ ಉತ್ಸವ ಸಹಿತ ಇನ್ನಿತರ ದೊಡ್ಡ ಮಟ್ಟದ ಸಮಾರಂಭಗಳ ಸಂದರ್ಭದಲ್ಲಿ ಮಾತ್ರ. ಅದೂ ದೇವರಿಗಾಗಿ ಅಲ್ಲ, ಗ್ರಾಮದ ಭಕ್ತರ ಅಭಿವೃದ್ಧಿಗಾಗಿಯೂ ಅಲ್ಲ. ಬದಲಾಗಿ ಉತ್ಸವದ ಸಂದರ್ಭ ಎಲ್ಲಿಂದಲೋ ನಗರ ಪ್ರದೇಶದಿಂದ ಬರುವ ವ್ಯಾಪಾರಿಗಳ ಸಂತೆ ವ್ಯಾಪಾರಕ್ಕಾಗಿ ಈ ಜಾಗ ಮೀಸಲು. ಕೆಲವೆಡೆ ಇಂತಹ ಜಾಗವೇ ಆಟದ ಮೈದಾನ. ಬಹುತೇಕ ಸಂದರ್ಭದಲ್ಲೆಲ್ಲಾ ಈ ಜಾಗ ಪಾಳು, ಒಣಕಲು ಅರ್ಥಾತ್ ಮರುಭೂಮಿ.
ಯಾಕೆ ಹೀಗೆ? 20 ಸೆನ್ಸ್ ಸ್ಥಳಾವಕಾಶವಿರುವ ಸರಕಾರಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ಬೇಕಾದ ತರಕಾರಿಗಳನ್ನು ಬೆಳೆಯುತ್ತಾರೆ, ಐದೇ ಸೆನ್ಸ್ ಜಾಗವಿರುವ ಅಂಗನವಾಡಿಯ ಸುತ್ತಮುತ್ತೆಲ್ಲಾ ಅರಳಿದ ಹೂವುಗಳು ರಾರಾಜಿಸುತ್ತದೆ. ಹಾಗಾದರೇ ದೇವಸ್ಥಾನಗಳೇಕೇ ಮರುಭೂಮಿಯಂತೆ ಕಂಗೋಳಿಸುತ್ತದೆ? ಸ್ಥಳಾವಕಾಶವಿದ್ದಲ್ಲಿ ಒಂದಷ್ಟು ತಾಳೆಗಿಡ, ಹೂವಿನ ಗಿಡ ನೆಡಬಹುದು. ತರಕಾರಿ ಕೃಷಿಯನ್ನೂ ಮಾಡಬಹುದು. ಕೃಷಿ, ತೋಟಕಾರಿಕಾ ಉತ್ಪನ್ನಗಳೆಲ್ಲವೂ ದೇವಸ್ಥಾನದ ಸುತ್ತಮುತ್ತೆಲ್ಲಾ ಪಸರಿಸಬಹುದು. ಈ ಮೂಲಕ ದೇವಸ್ಥಾನದ ಪರಿಸರವೆಲ್ಲವೂ ಹಚ್ಚ ಹಸಿರಾಗಿ ರೂಪುಗೊಂಡು ಇಡೀಯ ಪರಿಸರವೇ ಹಸಿರಾಗಿ ಆಕರ್ಷಣೆ ಮೂಡಿಸಬಹುದು. ಅಲ್ಲದೇ ದೇವಸ್ಥಾನದಲ್ಲಾದರೂ ಕೃಷಿ ಸಂಸ್ಕøತಿ ಉಳಿಯುವದರೊಂದಿಗೆ ಜನರಿಗೆ ನೆಲ, ಜಲ, ಪರಿಸರದ ಪ್ರೀತಿ ಮೂಡಿಸುವ ಕಾರ್ಯವಾಗಬಹುದು.
ಈ ರೀತಿಯ ಪರಿಸರ ಪ್ರಿಯ ಕಾಯಕಕ್ಕೆ ಭಕ್ತರ ಶ್ರಮದಾನದ ಸೇವೆಯನ್ನು ಬಳಸುವುದು, ಇಲ್ಲವೇ ಅದಕ್ಕೆಂದೇ ಒಂದಿಬ್ಬರನ್ನು ನೇಮಕ ಮಾಡುವ ಮೂಲಕವೂ ದೇವಸ್ಥಾನದ ವತಿಯಿಂದ ಗ್ರಾಮದ ಜನರಿಗೆ ಉದ್ಯೋಗ ನೀಡಿದ ಸಾರ್ಥಕತೆಯನ್ನು ಪಡೆಯಬಹುದು. ದೇವಸ್ಥಾನದಲ್ಲೇ ಉತ್ಪಾದನೆಯಾದ ಹೂ, ತರಕಾರಿ ಇತ್ಯಾದಿಗಳನ್ನು ನಿತ್ಯ ಪೂಜೆ, ಅನ್ನದಾನ ಇಲ್ಲವೇ ಉತ್ಸವದ ಸಂದರ್ಭ ಬಳಕೆ ಮಾಡಬಹುದು. ಹೆಚ್ಚು ಉತ್ಪಾದನೆಯಾದಲ್ಲಿ ಗ್ರಾಮದ ಜನರಿಗೆ ಕಡಿಮೆ ದರದಲ್ಲಿ ಅದನ್ನು ಮಾರಾಟ ಮಾಡುತ್ತಾ ಅದರಲ್ಲಿ ಬಂದ ದುಡ್ಡನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡಬಹುದು.
ನಿತ್ಯ ಸೇವೆಗೆ ಬೇಕಾದ ಹಸಿರು ಉತ್ಪನ್ನಗಳು ನಿತ್ಯ ನಿರಂತರ ದೇವಸ್ಥಾನದ ಪರಿಸರದಲ್ಲೇ ಲಭ್ಯವಿದ್ದರೆ ಅದಕ್ಕೆ ಹೆಚ್ಚು ಬೆಲೆ ಕೊಟ್ಟು ಅಂಗಡಿಯಿಂದ ಖರೀದಿ ಮಾಡುವ ಕ್ರಮವೂ ತಪ್ಪುತ್ತದೆ ಅಲ್ಲದೆ ಅದಕ್ಕಾಗಿ ಭಕ್ತರನ್ನು ಬೇಡುವ, ಕಾಡುವ, ಪೀಡಿಸುವ ಕೆಟ್ಟ ಕ್ರಮಕ್ಕೂ ಮುಕ್ತಿ ದೊರೆಯುತ್ತದೆ. ದೇವಸ್ಥಾನಗಳು ಗ್ರಾಮದ ಜನರಿಂದ ಪಡೆಯುವುದಕ್ಕಿಂತಲೂ ಗ್ರಾಮದ ಜನರಿಗೆ ಏನನ್ನಾದರೂ ಕೊಡುವ ಶಕ್ತಿ ಪಡೆದಾಗ ಅದು ನಿಜಕ್ಕೂ ನೆಮ್ಮದಿಯ ತಾಣವಾಗುತ್ತದೆ, ಗ್ರಾಮಾಭಿವೃದ್ಧಿಯ ನೆಲೆಯಾಗುತ್ತದೆ. ಭಕ್ತರು ಭಗವಂತನಲ್ಲಿ ಬೇಡುತ್ತಾರೆ, ಆದರೆ ಭಗವಂತನ ಹೆಸರಿನಲ್ಲಿ ಭಕ್ತರಲ್ಲಿ ಬೇಡುವುದು ಎಷ್ಟು ಸರಿ ಮತ್ತು ಎಷ್ಟು ಕಾಲ?ಅಲ್ಲವೇ.
ಗೋಪಾಲ ಅಂಚನ್
