ಬಂಟ್ವಾಳ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ವಾಪಾಸ್ಸಾಗುತ್ತಿದ್ದ ಮೂರು ಮಂದಿ ವಿದ್ಯಾರ್ಥಿಗಳ ಮೇಲೆ ಪೂರ್ವದ್ವೇಷದ ಹಿನ್ನಲೆಯಲ್ಲಿ ತಂಡವೊಂದು ಹಲ್ಲೆ ನಡೆಸಿದ ಘಟನೆ ಬಂಟ್ವಾಳದ ಎಸ್‍ವಿಎಸ್ ಕಾಲೇಜಿನಲ್ಲಿ ಗುರುವಾರ ನಡೆದಿದೆ. ತುಂಬೆ ಮೊಯ್ಯುದ್ದೀನ್ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಮುಬೀನ್, ಸದಾಕತ್, ಹಾಗೂ ಅಕ್ಬರ್ ಸಿದ್ದೀಕ್ ತಂಡದಿಂದ ಹಲ್ಲೆಗೊಳಗಾದವರಾಗಿದ್ದು ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಬಂಟ್ವಾಳದ ಎಸ್‍ವಿಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರವಿದ್ದು ತುಂಬೆ ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಮುಗಿಸಿ ಬಸ್‍ನಿಲ್ದಾಣದ ಬಳಿ ಈ ಮೂರು ಮಂದಿ ವಿದ್ಯಾರ್ಥಿಗಳು ನಿಂತಿದ್ದಾಗ ಅಲ್ಲಿಗೆ ಬಂದ ಎಸ್‍ವಿಎಸ್ ಕಾಲೇಜಿನ ವಿದ್ಯಾರ್ಥಿಗಳಾದ ತಾರಾನಾಥ, ದೀಪಕ್, ಪ್ರಮೋದ್ ಮತ್ತಿತರರಿದ್ದ ತಂಡ ಕಲ್ಲು, ದೊಣ್ಣೆ ಹಾಗೂ ಕೈಯಿಂದ ಹಲ್ಲೆ ನಡೆಸಿದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಬಂಟ್ವಾಳ ನಗರ ಠಾಣಾ ಎಸೈಗೆ ಗುರುವಾರ ಸಂಜೆ ಮನವಿ ಸಲ್ಲಿಸಿದ್ದು ತಪ್ಪಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಪೂರ್ವ ದ್ವೇಷದ ಹಿನ್ನಲೆ:
ಕಳೆದ ಕೆಲ ದಿನಗಳ ಹಿಂದೆ ಪರೀಕ್ಷೆ ಮುಗಿಸಿ ಬಸ್‍ನಲ್ಲಿ ವಾಪಾಸ್ಸಾಗುತ್ತಿದ್ದ ವೇಳೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳು ಹಲ್ಲೆಗೀಡಾದ ವಿದ್ಯಾರ್ಥಿಗಳ ಪೈಕಿ ಒರ್ವನಲ್ಲಿ ಬ್ಯಾಗ್ ಹಿಡಿದುಕೊಳ್ಳುವಂತೆ ತಿಳಿಸಿ ತಮ್ಮ ಬ್ಯಾಗ್‍ಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಬ್ಯಾಗ್ ಕೆಳಗೆ ಬಿದ್ದಿದ್ದು ಉದ್ದೇಶ ಪೂರ್ವಕವಾಗಿಯೇ ಬ್ಯಾಗನ್ನು ಕೆಳಗೆ ಹಾಕಿದ್ದರೆ ಎಂದು ಆರೋಪಿಸಿದ ಕಾರಣ ಈ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಈ ವಿವಾದ ಎರಡು ಕಾಲೇಜಿನ ಪ್ರಾಂಶುಪಾಲರ ಬಳಿ ಹೋಗಿದ್ದು ಪ್ರಾಂಶುಪಾಲರ ಸಮ್ಮುಖದಲ್ಲೇ ಸಮಸ್ಯೆಯನ್ನು ಇತ್ಯರ್ಥ ಗೊಳಿಸಿ ವಿದ್ಯಾರ್ಥಿಗಳಿಗೆ ಬುದ್ದಿ ಮಾತು ಹೇಳಿ ಕಳುಹಿಸಲಾಗಿತ್ತು. ಇದೀಗ ಮತ್ತೆ ಅದೇ ಪೂರ್ವದ್ವೇಷದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಂಡ ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
