ಚಿತ್ರ ಕಿಶೋರ್ ಪೆರಾಜೆ
ಸುದ್ದಿ 9ಬಂಟ್ವಾಳ: ಹಿಂದೂ ಸಮಾಜೋತ್ಸವದ ವೇದಿಕೆಯಲ್ಲಿ ಗಲಭೆಗೆ ಪ್ರಚೋದನೆ ನೀಡುವಂತೆ ಭಾಷಣ ಮಾಡಿ ಇತರ ಧರ್ಮವನ್ನು ನಿಂದಿಸಿ, ಜಾತಿ- ಜಾತಿಗಳ ಮಧ್ಯೆ, ವಿಭಿನ್ನ ಕೋಮಿನವರ ಮಧ್ಯೆ ಅಪನಂಬಿಕೆ ಹುಟ್ಟುವಂತೆ ಮಾಡಿ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಡಾ.ಪ್ರಭಾಕರ್ ಭಟ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪಕ್ಷದ ಮುಖಂಡರು ಜಿಲ್ಲಾ ಎಸ್.ಪಿ. ಡಾ.ಶರಣಪ್ಪ ಅವರಿಗೆ ಶುಕ್ರವಾರ ಸಂಜೆ ಮನವಿ ಸಲ್ಲಿಸಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರೊಡನೆ ಬಂಟ್ವಾಳ ನಗರ ಠಾಣೆಗೆ ಆಗಮಿಸಿದ ಕಾಂಗ್ರೆಸ್ ನಾಯಕರನ್ನು ಪೊಲೀಸರು ಗೇಟ್ ಬಳಿ ತಡೆದರು. ಎಡಿಷನಲ್ ಎಸ್ಪಿ ಟಿ. ಶಿವಕುಮಾರ್ ಆಗಮನಕ್ಕೆ ಕಾಯುತ್ತಿದ್ದ ಕಾರ್ಯಕರ್ತರು ನಾರವಿಯಿಂದ ಅವರು ಇಲ್ಲಿಗೆ ತಲುಪುವಾಗ ವಿಳಂಬವಾಗಲಿದೆ ಎನ್ನುವ ಮಾಹಿತಿಯಿಂದ ಆಕ್ರೋಶಗೊಂಡರು. ಇದರಿಂದ ಕಾಂಗ್ರೆಸ್ ನಾಯಕರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತಿಗಿಳಿಯ ಬೇಕಾಯಿತು. ಕರ್ತವ್ಯ ನಿಮಿತ್ತ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಸ್.ಪಿ. ಡಾ. ಶರಣಪ್ಪ ಇರುವಿಕೆಯ ಮಾಹಿತಿ ಪಡೆದ ಕಾಂಗ್ರೆಸ್ ನಾಯಕರು ಎಸ್ಪಿ ಇಲ್ಲೇ ಇರುವಾಗ ಅವರಿಗೆ ಮನವಿ ಸಲ್ಲಿಸಿ, ಮಾತುಕತೆ ನಡೆಸುವುದಾಗಿ ತಿಳಿಸಿದರು. ಅದರಂತೆ ಖುದ್ದು ಎಸ್.ಪಿ. ಅವರನ್ನೇ ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರು ಮನವಿಯ ಸಾರಾಂಶವನ್ನು ಅವರಿಗೆ ವಿವರಿಸಿದರು. ಡಾ. ಪ್ರಭಾಕರ್ ಭಟ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಡಿವೈಎಸ್ಪಿ ರಶ್ಮಿ ಪರಡಿ ಹಾಜರಿದ್ದರು.
ಕಾಂಗ್ರೆಸ್ ಮುಖಂಡರಾದ ಹರಿಕೃಷ್ಣ ಬಂಟ್ವಾಳ್, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಮಮತಾಗಟ್ಟಿ, ಎಂ.ಎಸ್.ಮಹಮ್ಮದ್, ಪದ್ಮಶೇಖರ್ ಜೈನ್, ಪಿಯೂಸ್ ಎಲ್ ರೋಡ್ರಿಗಸ್, ಸಂಪತ್ ಕುಮಾರ್ ಶೆಟ್ಟಿ, ಸಂಜೀವ ಪೂಜಾರಿ, ಐಡಾ ಸುರೇಶ್, ರಿಯಾಝ್ ಹುಸೇನ್, ವಾಸು ಪೂಜಾರಿ, ಮಾಧವ ಮಾವೆ, ಜನಾರ್ದನ ಚೆಂಡ್ತಿಮಾರ್, ವೆಂಕಪ್ಪ ಪೂಜಾರಿ ಎಸ್.ಪಿ. ಬೇಟಿ ವೇಳೆ ಹಾಜರಿದ್ದರು.


