ಬೆಂಗಳೂರು: ಶ್ವಾಸಕೋಶದ ತೊಂದರೆಗೆ ಒಳಗಾಗಿ ಸಿಂಗಾಪುರದ ಆಸ್ಪತ್ರೆಯ್ಲಲಿ ಚಿಕಿತ್ಸೆ ಪಡೆಯುತ್ತಿರುವ ಸ್ಯಾಂಡಲ್ ವುಡ್ ನ ರೆಬೆಲ್ ಸ್ಟಾರ್ ಅಂಬರೀಶ್ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಿಂದ ಸಿಂಗಾಪುರಕ್ಕೆ ಏರ್ ಆಂಬುಲೆನ್ಸ್ ಮೂಲಕ ಸಾಗಿಸುವ ಹೊತ್ತಿಗೆ ಪ್ರಪಂಚದ ಪರಿವೆಯೇ ಇಲ್ಲದೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಅಂಬಿ ಮಂಗಳವಾರ ಖುದ್ದಾಗಿ ಮಾಧ್ಯಮಗಳ ಮುಂದೆ ಮಾತಾಡುವ ಮೂಲಕ ಅಭಿಮಾನಿಗಳಲ್ಲಿ ಹರ್ಷ ಉಂಟು ಮಾಡಿದ್ದಾರೆ. ಸದ್ಯ ನಾನು ಸಂಪೂರ್ಣ ಚೇತರಿಕೆ ಕಂಡಿದ್ದೇನೆ, ಆರೋಗ್ಯದಲ್ಲೂ ಬಹಳಷ್ಟು ಸುಧಾರಣೆಯಾಗಿದೆ. ಆದರೆ ಇನ್ನು ಒಂದು ವಾರ ಬಿಟ್ಟು ತಾಯಿನೆಲಕ್ಕೆ ಮರಳುತ್ತೇನೆ ಎಂದು ಹೇಳಿದ ಅಂಬಿ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಮತ್ತು ಆಸ್ಪತ್ರೆಯ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ನಿಮ್ಮ ರೆಬೆಲ್ ಸ್ಟಾರ್ ಆದ ನಾನು ರೆಬೆಲ್ ಸ್ಟಾರ್ ಆಗಿಯೇ ಹಿಂದಿರುಗುತ್ತೇನೆ ಎಂಬ ಮಾತುಗಳನ್ನು ಕೇಳಿದ ಅವರ ಅಭಿಮಾನಿಗಳು ಸಂತೋಷದಿಂದ ಕುಣಿದಾಡಿದರು ಜೊತೆಗೆ ಸಿಹಿತಿಂಡಿಗಳನ್ನು ಹಂಚಿ ಸಂಭ್ರಮಿಸಿದರು. ವೈದ್ಯರ ಸಲಹೆಯಂತೆ ಅಂಬಿಗೆ ಇನ್ನೂ ಒಂದು ವಾರದ ಆರಾಮದ ಅಗತ್ಯವಿದ್ದು ಸಿಂಗಾಪುರದಿಂದ ಅಂಬಿ ಮಲೇಷ್ಯಾಗೆ ಹಾರಲು ನಿರ್ಧರಿಸಿದ್ದಾರೆ. ಇಲ್ಲಿ ಒಂದು ವಾರ ಕಳೆದು ಬೆಂಗಳೂರಿಗೆ ವಾಪಾಸಾಗಲಿದ್ದಾರೆ.

