ಮಂಗಳೂರು: ನಮಗೆ `ಸುಮಾಜ ಸುಧಾರಣ ಉತ್ಸವ’ ಬೇಕು, ಆದರೆ ಸಮಾಜೋತ್ಸವ ಬೇಡ; ಹಾಗೆಂದು ಹಿಂದೂ ಸಮಜೋತ್ಸವ ಬೇಡವೆಂದು ನಾನು ಹೇಳುತ್ತಿಲ್ಲ. ಸಮಾಜೋತ್ಸವದಲ್ಲಿ ಉತ್ಸವವಿದೆ. ಆದರೆ ಈ ಉತ್ಸವ ಸಮಾಜದ ಶಾಂತಿ ಕದಡುವಿಕೆಗೆ ಕಾರಣವಾಗಬಾರದು. ಇಂದು ನಡೆಯುತ್ತಿರುವ ಸಮಾಜೋತ್ಸವದಿಂದ ಒತ್ತಡ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಅಂಥದಕ್ಕೆ ನಾವು ಅವಕಾಶ ನೀಡಬಾರದು ಎಂದು ಮುಂದೆ ನಡೆಯಲಿರುವ ಹಿಂದೂ ಸಮಾಜೋತ್ಸವದ ಕುರಿತಾಗಿ ಪರೋಕ್ಷವಾಗಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಕಿಡಿ ಕಾರಿದ್ದಾರೆ.

ಅವರು ಫೆ.24ರಂದು ಡಿವೈಎಫ್‍ಐ ಮತ್ತು ಎಸ್‍ಎಫ್‍ಐ ಆಯೋಜಿಸಿದ್ದ `ಐಕ್ಯತೆಯೆಡೆಗೆ ಸೌಹಾರ್ದ ನಡಿಗೆ’ ಆರ್ಯಕ್ರಮದಲ್ಲಿ ಡೀಸಿ ಕಚೇರಿ ಮುಂಭಾಗದಲ್ಲಿ ಪ್ರಮುಖ ಭಾಷಣ ನಡೆಸುತ್ತಿದ್ದರು.
ನಂತರ ಮಾತನಾಡಿದ ಅವರು, ಒಂದಾನೊಂದು ಕಾಲದಲ್ಲಿ ಭಾರತ ಶಾಂತಿ ಹಾಗೂ ಸಾಮರಸ್ಯಕ್ಕೆ ಹೆಸರಾಗಿತ್ತು. ಆದರೆ ಇಂದು ಅದು ಅಧಃ ಪತನದತ್ತ ಹೋಗುತ್ತಿದ್ದು, ಮನುಷ್ಯನಿಗೆ ಮನುಷತ್ವದ ಬೆಲೆಯೇ ಮರೆತು ಹೋಗಿದೆ. ಅಹಿಂಸೆ ಭುಸುಗುಡುತ್ತಿದ್ದು, ರಕ್ತಪಾತ ಹೆಚ್ಚುತ್ತಿದೆ. ಎಲ್ಲಾ ಧರ್ಮದ ಸಂತರು ವಿಶ್ವದಲ್ಲಿ ಶಾಂತಿ ಎಲೆಗೊಳ್ಳಬೇಕೆಂದು ಪ್ರಯತ್ನ ಪಡುತ್ತಲೇ ಇದ್ದಾರೆ. ಆದರೆ ನಮ್ಮ ರಾಜಕೀಯ ಪಕ್ಷಗಳು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ಧರ್ಮದ ಧರ್ಮದ ಮೂಲಕ, ಜಾತಿ ಜಾತಿಯ ಮೂಲಕ ಸಮಾಜದಲ್ಲಿ ಕೋಮುಗಲಭೆ ಏಳುವಂತೆ ಮಾಡುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಕೆಲವೊಂದು ರಾಜಕೀಯ ಪಕ್ಷಗಳು ಧರ್ಮಧರ್ಮದೊಳಗೆ ವಿಷವನ್ನು ಬಿತ್ತುವ ಕೆಲಸ ಮಾಡುತ್ತಿದೆ. ರಾಷ್ಟ್ರ ಹಾಗೂ ಮನಸ್ಸನ್ನು ಒಡೆಯುತ್ತಿರುವ ಕೆಲವೊಂದು ದುಷ್ಟ ಶಕ್ತಿಗಳು ಜನರನ್ನು ತನ್ನ ಸ್ವಂತ ಹಿತಾಸಕ್ತಿಗಾಗಿ ಬಲಿಪಡೆಯುತ್ತಿದ್ದಾರೆ. ಈ ರೀತಿ ಹೋಗುವುದು ತಪ್ಪೆಂದು ಆ ರಾಜಕೀಯ ಪಕ್ಷಗಳು ಅರ್ಥ ಮಾಡುವುದು ಒಳಿತು. ಹಿಂದು, ಮುಸ್ಲಿಂ, ಕ್ರೈಸ್ತರು, ಜೈನರು ಎಲ್ಲರೂ ಶಾಂತಿ ಸಹಬಾಳ್ವೆಯಿಂದ ಬದುಕಿದರೆ ಭಾರತಕ್ಕೆ ಒಳ್ಳೆಯದಾಗುತ್ತದೆ ಎಂದರು.
ನಂತರ ಡಿವೈಎಫ್‍ಐನ ಮುಖಂಡ ದಯಾನಂದ ಶೆಟ್ಟಿ ಮಾತನಾಡಿ, ಕಳೆದ 20 ವರ್ಷಗಳಿಂದ ಸಂಘಪರಿವಾರ ಸಮಾಜದಲ್ಲಿ ಮತೀಯ ವಿಷಬೀಜವನ್ನು ಬಿತ್ತುತ್ತಿದೆ. ಪುತ್ತೂರು ಹಾಗೂ ಉಳಾಯಿಬೆಟ್ಟುವಿನಲ್ಲಿ ಏನು ನಡೆದಿದೆ ಎಂದು ಎಲ್ಲರಿಗೂ ಗೊತ್ತಿದೆ. ಸಮಾಜೋತ್ಸವದಿಂದ ಸಮಾಜ ಒಡೆಯುತ್ತದೆ ಅದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಡಿವೈಎಫ್‍ಐನ ಮುನೀರ್ ಕಾಟಿಪಳ್ಳ, ಸಂತೋಶ್ ಬಜಾಲ್, ಎಸ್‍ಎಫ್‍ನ ಚರಣ್ ಶೆಟ್ಟಿ, ವಿ ಅಂಬರೀಶ್, ಸಿಪಿಐಎಂನ ಚಂದ್ರಕಲಾ ನಂದಾವರ ಮತ್ತಿತರರು ಉಪಸ್ಥಿತರಿದ್ದರು.



