ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಕೊಣಾಜೆಯ ಸೈಂಟ್ ಜೋಸೆಫ್ ಚರ್ಚ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಮೇರಿ ಮಾತೆಯ ಗಾಜುಗಳನ್ನು ಒಡೆದು ಹಾಕಿದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇಂದು ಬೆಳಿಗ್ಗೆ ಚರ್ಚ್ ಫಾದರ್ ಪ್ರಾರ್ಥನೆ ನೆರವೇರಿಸಲು ಬಂದಾಗ ಚರ್ಚ್ ಮುಂಭಾಗ ಕಲ್ಲುಗಳು ಬಿದ್ದಿರುವುದನ್ನು ಗಮನಿಸಿ ಅವಲೋಕಿಸಿದಾಗ ಮೇರಿ ಮಾತೆಯ ಗಾಜುಗಳು ಒಡೆದಿರುವುದು ಕಂಡುಬಂದಿದೆ. ಘಟನೆಯಲ್ಲಿ ಮೇರಿ ಮಾತೆಯ ಮೂರ್ತಿ ಹಾಗೂ ಇನ್ಫಾಂಟ್ ಜೀಸಸ್ ನ ಮೂರ್ತಿಗೂ ಹಾನಿ ಸಂಂಭವಿಸಿದೆ.
ಹೆಚ್ಚಾಗಿ ಈ ಪ್ರಾರ್ಥನಾ ಮಂದಿರವನ್ನು ತೆರೆಯುವುದಿಲ್ಲ. ಶವಸಂಸ್ಕಾರ ನಡೆಸುವ ಸಂದರ್ಭ ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಆದ್ದರಿಂದ ಈ ಚರ್ಚ್‍ಗೆ ನಿಖರವಾಗಿ ಯಾವಾಗ ದಾಳಿ ನಡೆದಿದೆ ಎಂದು ತಿಳಿದು ಬಂದಿಲ್ಲ. ಈ ಚರ್ಚ್‍ಗೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೋ ಅಥವಾ ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ದಾಳಿ ನಡೆಸಿದ್ದರೋ ಎಂದು ತನಿಖೆಯಿಂದಷ್ಟೇ ತಿಳಿದುಬರಬೇಕಾಗಿದೆ.
ಕೆಲವರ್ಷಗಳ ಹಿಂದೆ ಚರ್ಚ್‍ಗಳಲ್ಲಿ ಮತಾಂತರ ನಡೆಸಲಾಗುತ್ತದೆ ಎಂಬ ಉದ್ದೇಶದಿಂದ ಹಲವು ಚರ್ಚ್‍ಗಳ ಮೇಲೆ ಏಕಕಾಲದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದರು. ಇದೀಗ ಮತ್ತೆ ದಾಳಿ ನಡೆದಿರುವುದರಿಂದ ಇದನ್ನು ಕಿಡಿಗೇಡಿಗಳು ಮಾಡಿರಬಹುದೆಂದು ಶಂಕಿಸಲಾಗಿದೆ.
ಸಚಿವ ಖಾದರ್ ಭೇಟಿ: ಚರ್ಚ್‍ಗೆ ಕಲ್ಲು ಬಿದ್ದಿರುವ ಘಟನೆಯಿಂದ ದಿಗ್ಭ್ರಾಂತರಾಗಿರುವ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ದಾಳಿಗೊಳಗಾದ ಚರ್ಚ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳನ್ನು ತಕ್ಷಣ ಪತ್ತೆ ಮಾಡುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಚರ್ಚ್ ಮೇಲಿನ ದಾಳಿಯಿಂದ ಕ್ರೈಸ್ತ ಸಮುದಾಯ ದಿಗ್ಭ್ರಮೆಗೆ ಒಳಗಾಗಿದೆ. ನೂರಾರು ಮಂದಿ ಕ್ರೈಸ್ತರು ಆಗಮಿಸಿದ್ದಾರೆ. ಚರ್ಚ್‍ನ ಫಾದರ್ ಯಾರೂ ಕೂಡಾ ತಾಳ್ಮೆ ಕಳೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ. ಈ ಬಗ್ಗೆ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದಾರೆ.
ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.















