ಸುರತ್ಕಲ್: ಸುರತ್ಕಲ್‍ನ ಗೋವಿಂದ ದಾಸ ಕಾಲೇಜ್‍ನ ಅಂತಿಮ ಬಿಸಿಎ ವಿದ್ಯಾರ್ಥಿನಿಯರ ತೊಡೆಯಲ್ಲಿ ಪವಡಿಸಿ ರಾಧ್ಧಾಂತ ಸೃಷ್ಟಿಸಿದ್ದ ಹುಡುಗ, ಆತನನ್ನು ತೊಡೆಯಲ್ಲಿ ಮಲಗಿಸಿದ ವಿದ್ಯಾರ್ಥಿನಿಯರನ್ನು ಮತ್ತು ಹಾಗೂ ಸನಿಹದಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿಗಳನ್ನು ಕಾಲೇಜ್ ಆಡಳಿತ ಮಂಡಳಿ ಮುಂದಿನ ಆದೇಶ ಬರುವವರೆಗೆ ಕಾಲೇಜ್‍ನಿಂದ ಅಮಾನತು ಮಾಡಿದ್ದಾರೆ. ಈ ಪೈಕಿ ರಿಯಾಝ್ ಎನ್ನುವಾತ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದು ಆಸ್ಪತ್ರೆಯಲ್ಲಿರುವುದರಿಂದ ಆತನನ್ನು ಸಸ್ಪೆಂಡ್ ಮಾಡಲಾಗಿಲ್ಲ ಎಂದು ತಿಳಿದುಬಂದಿದೆ.

ಫೇಸ್‍ಬುಕ್ ಹಾಗೂ ವಾಟ್ಸಾಪ್‍ಗಳಲ್ಲಿ ವೈರಲ್ ಆಗಿ ತಿರುಗಾಡಿ ಸಂಚಲನಕ್ಕೆ ಕಾರಣವಾಗಿದ್ದ ತೊಡೆಯಲ್ಲಿ ಪವಡಿಸಿದ್ದ ಪ್ರಕರಣದಿಂದ ಕಾಲೇಜ್ ಮುಜುಗರ ಅನುಭವಿಸಿತ್ತು. ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾಲೇಜ್ ಮುಂದೆ ಜಮಾಯಿಸಿ ಆ ವಿದ್ಯಾರ್ಥಿಗಳನ್ನು ಅಮಾನತ್ತುಗೊಳಿಸುವಂತೆ ಪಟ್ಟುಹಿಡಿದಿದ್ದರು. ಆದರೆ ಆ ದಿನ ಕಾಲೇಜ್ ಪ್ರಾಂಶಿಪಾಲರು ಗೈರಾಗಿದ್ದರಿಂದ ಆ ಪ್ರಕರಣದ ಬಗ್ಗೆ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯವರು ಕಾಲೇಜ್‍ಗೆ ಪತ್ರ ಬರೆದು ಈ ಬಗ್ಗೆ ವಿಚಾರಣೆ ನಡೆಸುವಂತೆ ತಿಳಿಸಿದ್ದರು. ಅದರಂತೆ ಕಾಲೇಜ್ ಪ್ರಾಂಶುಪಾಲರಾದ ಫ್ರೊ.ಕೆ. ರಾಜಮೋಹನ್ ರಾವ್ ಅವರು ಈ ಬಗ್ಗೆ ವಿಚಾರಣೆ ನಡೆಸುವ ಸಲುವಾಗಿ ಕಾಲೇಜ್‍ನಲ್ಲೇ ಒಂದು ಸಮಿತಿಯನ್ನು ರಚನೆ ಮಾಡಿದ್ದರು. ಈ ಸಮಿತಿಯಲ್ಲಿ ಕಾಲೇಜ್‍ನ ಅಧ್ಯಕ್ಷ ಪ್ರಮುಖರಾಗಿದ್ದು ಇತರ ಹಿರಿಯ ಸಿಬ್ಬಂದಿಯನ್ನು ಸೇರಿಸಲಾಗಿತ್ತು. ಕಾಲೇಜ್ ಆಡಳಿತ ಮಂಡಳಿ, ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು, ಹಾಗೂ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಸಮಿತಿ ಫೋಟೋದಲ್ಲಿ ಕಾಣಿಸಿಕೊಂಡಿದ್ದ ವಿದ್ಯಾರ್ಥಿಗಳ ಪೋಷಕರನ್ನು ಕಾಲೇಜ್‍ಗೆ ಬರುವಂತೆ ಆದೇಶಿಸಿದ್ದರು. ಕೊನೆಗೆ ನಿರ್ಣಯಕ್ಕೆ ಬಂದ ಸಮಿತಿ ಆ ವಿದ್ಯಾರ್ಥಿಗಳನ್ನು ಮುಂದಿನ ಆದೇಶ ಬರುವವರೆಗೆ ಸಸ್ಪೆಂಡ್ ಮಾಡುವಂತೆ ತೀರ್ಮಾನಿಸಿದೆ. ಈ ಬಗ್ಗೆ ಲಿಖಿತವಾಗಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದ ಸಮಿತಿ ಮುಂದೆ ಪ್ರತ್ಯೇಕವಾಗಿ ವಿಚಾರಣೆ ನಡೆಸುವಂತೆ ತಿಳಿಸಿದೆ.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯವರೂ ಕೂಡಾ ಇದರ ಬಗ್ಗೆ ಮುತುವರ್ಜಿ ವಹಿಸುವಂತೆ ಪ್ರಾಂಶುಪಾಲರು ಕೋರಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣವನ್ನು ಸಾಮಾಜಿಕ ತಾಣಗಳಲ್ಲಿಭಾವನಾತ್ಮಕವಾಗಿ ಬಿಂಬಿಸಲಾಗಿತ್ತು ಎಂದು ಪ್ರಾಂಶುಪಾಲರು ಪತ್ರದಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡುವಂತೆ ಎಬಿವಿಪಿ ಕಾರ್ಯಕರ್ತರು ಕಾಲೇಜ್‍ಗೆ ಮನವಿ ಸಲ್ಲಿಸಿದ್ದರು.
ರಿಯಾಝ್ ಆಸ್ಪತ್ರೆಯಲ್ಲಿರುವುದರಿಂದ ಆತನ ಅಮಾನತು ನಿರ್ಧಾರದ ಬಗ್ಗೆ ಫೆ.26ರ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

