ಬಂಟ್ವಾಳ:ತಾಲ್ಲೂಕಿನ ಪಂಜಿಕಲ್ಲು ಪದವು ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ಸುಮಾರು ಒಂದು ಎಕರೆ ಜಮೀನಿನಲ್ಲಿ ಭಾನುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದಲ್ಲಿ ಗೇರು ಬೆಳೆ ಹಾನಿಗೀಡಾದ ಘಟನೆ ನಡೆದಿದೆ.

ಇಲ್ಲಿನ ನೂರಾರು ಎಕರೆ ಅರಣ್ಯ ಇಲಾಖೆ ಜಮೀನಿನಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಸಾವಿರಾರು ಗೇರು ಗಿಡಗಳನ್ನು ನೆಟ್ಟು ಪೋಷಿಸಲಾಗಿತ್ತು. ಕಳೆದ ವರ್ಷದಿಂದ ಭಾರೀ ಪ್ರಮಾಣದಲ್ಲಿ ಗೇರು ಬೆಳೆ ಬರಲು ಆರಂಭಿಸಿದ್ದು, ಕಳೆದ ವರ್ಷವೂ ಬೆಂಕಿಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ಇದೀಗ ಭಾನುವಾರ ಮಧ್ಯಾಹ್ನ ದಿಢೀರಣೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಜಮಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದೆ ಬಳಿಕ ಬಂಟ್ವಾಳ ಅಗ್ನಿಶಾಮಕ ದಳ ತಂಡ ಧಾವಿಸಿ ಬೆಂಕಿ ನಂದಿಸಿದೆ. ಬೆಂಕಿಯಿಂದ ನೂರಾರು ಗೇರು ಗಿಡಗಳು ಸಂಪೂರ್ಣ ಸುಟ್ಟು ಹೋಗಿದ್ದು, ಇಲ್ಲಿ ನಡೆಯುವ ಅಕ್ರಮ ಕೋಳಿ ಅಂಕಕ್ಕೆ ತೆರಳುವ ವೇಳೆ ಕಿಡಿಗೇಡಿಗಳು ಬೀಡಿ ಸೇವನೆ ಮಾಡಿ ಎಸೆದಿರಬಹುದು ಎಂಬ ಶಂಕೆ ಸ್ಥಳೀಯರಿಂದ ವ್ಯಕ್ತವಾಗಿದೆ.
