ಮೂಡುಬಿದರೆ: ಪೇಟೆಯ ಮುಖ್ಯರಸ್ತೆಯಲ್ಲಿರುವ ಬಟ್ಟೆ ಅಂಗಡಿ ಒಂದರ ಎದುರಿನಿಂದ ಪಿಯುಸಿ ವಿದ್ಯಾರ್ಥಿಯೊಬ್ಬಳನ್ನು ಕಾರಿನಲ್ಲಿ ಅಪಹರಿಸಿರುವ ಬಗ್ಗೆ ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನ ದೊರೆ ಎಂಬಾತ ಅಪ್ರಾಪ್ತೆಯನ್ನು ಅಪಹರಣ ಮಾಡಿರುವ ಆರೋಪಿ. ಮೂಲತಃ ಮೂಡುಬಿದರೆಯವರಾದ, ಪ್ರಸ್ತುತ ಬೆಂಗಳೂರು ಹೊಸಕೇರಿಯಲ್ಲಿ ವಾಸವಿರುವ ಗಣೇಶ್ ದೇವಾಡಿಗರ ಅವರ ಪುತ್ರಿಯ ಜೊತೆ ದೊರೆಗೆ ಸಲುಗೆ ಇತ್ತೆನ್ನಲಾಗಿದೆ. ಮೂರು ವಾರಗಳ ಹಿಂದೆ ಈ ಬಗ್ಗೆ ಮನೆಯವರಿಗೆ ವಿಷಯ ತಿಳಿದುಬಂದಿದ್ದು, ಮೂಡುಬಿದರೆಯ ಪ್ರಾಂತ್ಯ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಯುವತಿಯನ್ನು ಕಳುಹಿಸಿದ್ದರು. ಬುಧವಾರ ಸಂಜೆ ತನ್ನ ಸಂಬಂಧಿಕರ ಜೊತೆ ದೇವಸ್ಥಾನಕ್ಕೆ ಬಂದು, ಅಲ್ಲಿಂದ ಬ್ಯೂಟಿ ಪಾರ್ಲರ್ಗೆ ಆಕೆ ತೆರಳಿದ್ದಳು. ಬಳಿಕ ರಸ್ತೆ ಪಕ್ಕದಲ್ಲಿ ನಿಂತಿದ್ದ ಓಮ್ನಿ ಕಾರಿನಲ್ಲಿ ಹೋಗಿದ್ದಾಳೆ. ಇವಳ ಜೊತೆಗಿದ್ದ ಯುವತಿ, ಆಕೆ ನಾಪತ್ತೆಯಾಗಿರುವ ವಿಷಯ ಸಾರ್ವಜನಿಕರಿಗೆ ತಿಳಿಸಿದಾಗ ಕೆಲವು ಗಂಟೆಗಳ ಕಾಲ ಗೊಂದಲದ ವಾತಾವರಣ ಕಂಡುಬಂತು.
ಯುವತಿ ಅಪ್ರಾಪ್ತೆಯಾಗಿರುವುದರಿಂದ ಮೂಡುಬಿದರೆಯ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.
