ಕಟಪಾಡಿ: ಶಿರ್ವ ಠಾಣಾ ವ್ಯಾಪ್ತಿಯ ಪಡುಬೆಳ್ಳೆಯ ಪಾಂಬೂರಿನ ಧರ್ಮಶ್ರೀ ಕಾಲನಿಯಲ್ಲಿ ನೆರೆಹೊರೆಯ ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಬಾಲಕಿಯರನ್ನು ಹೊರಜಿಲ್ಲೆಯ ಕಾರ್ಮಿಕನೊಬ್ಬ ಪುಸಲಾಯಿಸಿ ಕರೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಕಾಲನಿಯ ತಮಿಳು ಮೂಲದ ಮುತ್ತುಸ್ವಾಮಿ ಅವರ ಮಗಳು ಕಣ್ಣಮ್ಮ(15) ಹಾಗೂ ನೆರೆಮನೆಯ ಕಷ್ಣಪ್ಪ ಎಂಬವರ ಮಗಳು ಶೈಲಿನಿ(15) ಕಾಣೆಯಾಗಿರುವ ಬಾಲಕಿಯರು.ಇವರಿಬ್ಬರೂ ಇಲ್ಲಿನ ನಾರಾಯಣ ಗುರು ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರು. ಬಾಲಕಿಯರಿಬ್ಬರೂ ಮಂಗಳವಾರ ಮಧ್ಯಾಹ್ನ ಹೇರೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಊಟಕ್ಕೆ ಹೋಗಿ ಬಂದಿದ್ದು ನಂತರ ಕಾಲನಿಯ ಸಮೂದಾಯ ಭವನದ ಬಳಿ ಸಂಜೆ 4 ಗಂಟೆವರೆಗೆ ಓದಿಕೊಳ್ಳುತ್ತಿದ್ದವರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ.
ಬಾಲಕಿಯರ ನೆರಮನೆಯ ಮಹಿಳೆಯೊಬ್ಬಳು ಉತ್ತರ ಕರ್ನಾಟಕ ಮೂಲದ ವ್ಯಕ್ತಿಯೊಂದಿಗೆ ಇತ್ತೀಚೆಗೆ ಮದುವೆಯಾಗಿದ್ದು ಆ ಮನೆಯಲ್ಲಿ ಎರಡು ತಿಂಗಳಿಂದ ಆತನ ಗೆಳೆಯನೂ ವಾಸಿಸುತ್ತಿದ್ದ. ಸದ್ಯಕ್ಕೆ ಆತನೂ ನಾಪತ್ತೆಯಾಗಿದ್ದಾಗಿ ಹೇಳಲಾಗಿದ್ದು, ಆತನೆ ಬಾಲಕಿಯರನ್ನು ಪುಸಲಾಯಿಸಿ ಕರೆದುಕೊಂಡು ಹೋಗಿರುವ ಶಂಕೆಯಿದೆ. ಬಾಲಕಿಯರಿಬ್ಬರು ಇವನ ಜತೆ ನಡೆದುಕೊಂಡು ಹೋಗಿದ್ದನ್ನು ನೋಡಿದರಿದ್ದಾರೆ.
ಈ ಹಿಂದೆ ಇದೆ ಧರ್ಮಶ್ರೀ ಕಾಲನಿಯಲ್ಲಿ ತಮಿಳು ಮೂಲದ ಬಾಲಕ ನವೀನ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಕೆಲದಿನಗಳ ನಂತರ ಆತ ಕಾಲನಿ ಬಳಿಯ ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿರುವ ವಿಷಯ ಮರೆಯುವ ಮುನ್ನವೇ ಮತ್ತಿಬ್ಬರು ಬಾಲಕಿಯರು ನಾಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
