ಉಡುಪಿ: ಮಾ.9ರಂದು ಉಡುಪಿಯ ಎಂಜಿಎಂ ಕಾಲೇಜ್ ಮೈದಾನದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿರುವುದರಿಂದ ವಿಶ್ವಹಿಂದೂ ಪರಿಷತ್‍ನ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಡಿಯಾ ಅವರಿಗೆ ಉಡುಪಿ ಪ್ರವೇಶಿಸದಂತೆ ಒಂದು ವಾರಗಳ ಕಾಲ ನಿಷೇಧ ಹೇರಲಾಗಿದೆ.

ತೊಗಡಿಯಾ ಅವರು ಉಡುಪಿ ಹಿಂದೂ ಸಮಾಜೋತ್ಸವದಲ್ಲಿ ಪ್ರಧಾನ ಭಾಷಣ ಮಾಡಲಿದ್ದು, ಅವರ ಭಾಷಣದಿಂದ ಕೋಮು ಪ್ರಚೋದನೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಉಡುಪಿ ಜಿಲ್ಲಾಡಳಿತ ಹಾಗು ಉಡುಪಿ ಪೊಲೀಸ್ ಇಲಾಖೆ ಈ ನಿಷೇಧ ಹೊರಡಿಸಿ ಆದೇಶ ಹೊರಡಿಸಿದೆ.
ತೊಗಡಿಯಾಗೆ ಉಡುಪಿ ಪ್ರವೇಶ ನಿಷೇಧವಲ್ಲದೆ ಅವರ ಯಾವುದೇ ರೀತಿಯ ಭಾಷಣವನ್ನು ಕೂಡಾ ಪ್ರಸಾರ ಮಾಡಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ವಿಎಚ್‍ಪಿ ಖಂಡನೆ:
ತೊಗಾಡಿಯಾಗೆ ಉಡುಪಿ ನಿರ್ಬಂಧಿಸಿರುವುದನ್ನು ವಿಎಚ್‍ಪಿ ಮುಖಂಡ ಸುಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಖಂಡಿಸಿದ್ದು, ಘಟನೆಯ ಹಿಂದೆ ರಾಜ್ಯ ಸರಕಾರದ ಕೈವಾಡವಿದೆ ಎಂದು ಆರೋಪಿದ್ದಾರೆ.
ರಾಜ್ಯ ಸರಕಾರ ಕೊನೆಘಳಿಗೆಯಲ್ಲಿ ತೊಗಾಡಿಯಾಗೆ ನಿಷೇಧವನ್ನು ಹೇರಿದೆ. ಇದು ಹಿಂದೂಗಳ ಭಾವನೆಗೆ ಘಾಸಿ ತಂದಿದ್ದು, ಇದನ್ನು ವಿಎಚ್‍ಪಿ ಬಲವಾಗಿ ಖಂಡಿಸುತ್ತದೆ. ಸರಕಾರದ ನಿರ್ಧಾರದ ಹಿಂದೆ ವೋಟ್ ಬ್ಯಾಂಕ್ ಕಾರ್ಯನಿರ್ವಹಿಸುತ್ತದೆ. ಈ ಬಗ್ಗೆ ನಾವು ನ್ಯಾಯಾಲಯದ ಮುಂದೆ ಹೋಗಲಿದ್ದೇವೆ ಎಂದು ಸುಪ್ರಸಾದ್ ತಿಳಿಸಿದ್ದಾರೆ.
2003ರಲ್ಲೂ ಪ್ರವೀಣ್ ಉಡುಪಿಯಲ್ಲಿ ಮಾತಾಡಿದ್ದರು. ಆಗ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸರಕಾರ ಬೇಕೆಂದೇ ನಿಷೇಧ ನಿರ್ಧಾರವನ್ನು ಪ್ರಸ್ತಾಪಿಸಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನ ಭಾಷಣ ಯಾರಿಂದ?
ತೊಗಾಡಿಯಾಗೆ ಉಡುಪಿ ನಿರ್ಬಂಧಿಸಿರುವುದರಿಂದ ಹಿಂದೂ ಸಮಾಜೋತ್ಸವವನ್ನುದ್ದೇಶಿಸಿ ಪ್ರಧಾನ ಭಾಷಣ ಯಾರು ಮಾಡಲಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸುಪ್ರಸಾದ್, ಭಾನುವಾರ ಸಂಜೆ ಈ ಬಗ್ಗೆ ಪ್ರಕಟಿಸಲಾಗವುದು ಎಂದು ಅವರು ತಿಳಿಸಿದ್ದಾರೆ.
