ಸುದ್ದಿ9 ಬಂಟ್ವಾಳ: ಕಲ್ಲಡ್ಕದಲ್ಲಿ ನಡೆದ ಗುಂಪು ಘರ್ಷಣೆಯ ಕಾವು ಇನ್ನೂ ಆರಿದಂತೆ ಕಾಣುತ್ತಿಲ್ಲ. ಪೊಲೀಸ್ ಬಿಗುಬಂದೋಬಸ್ತ್ ನ ಹೊರತಾಗಿಯೂ ಭಾನುವಾರ ಮಧ್ಯರಾತ್ರಿ ದುಷ್ಕರ್ಮಿಗಳು ಸೂರಿಕುಮೇರು ಎಂಬಲ್ಲಿ ಎರಡು ಅಂಗಡಿಗಳಿಗೆ ಬೆಂಕಿಯಿಟ್ಟು ಸುಟ್ಟು ಹಾಕಿದ್ದಾರೆ. ಸೂರಿಕುಮೇರಿನ ಅಬ್ದುಲ್ ಅಜೀಜ್ ಎಂಬವರಿಗೆ ಸೇರಿದ ಅಂಗಡಿ ಸಂಪೂರ್ಣ ಸುಟ್ಟು ಧ್ವಂಸವಾಗಿದೆ. ಅಬ್ದುಲ್ ಅವರು ಕಳೆದ 30 ವರ್ಷಗಳಿಂದ ಇಲ್ಲಿ ವ್ಯಾಪಾರ ನಡೆಸುತ್ತಿದ್ದರು. ಅಂಗಡಿ ಮುಚ್ಚಿದ ಬಳಿಕ ಅಬ್ದುಲ್ ಶಟರ್ ಹಾಕಿ ಒಳಗೆ ಮಲಗುತ್ತಿದ್ದರು. ಭಾನುವಾರ ಮಧ್ಯರಾತ್ರಿ ಅಂಗಡಿಯ ಹೆಂಚುಗಳು ಬೀಳುತ್ತಿರುವ ಸದ್ದು ಕೇಳಿ ಎಚ್ಚರಗೊಂಡ ಅಬ್ದುಲ್ ಅಂಗಡಿಗೆ ಬೆಂಕಿ ಹಚ್ಚಿರುವುದನ್ನು ಕಂಡು ಬೊಬ್ಬೆ ಹಾಕಿದ್ದಾರೆ.
ಇದರಿಂದ ಎಚ್ಚರಗೊಂಡ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಅಂಗಡಿ ಸಂಪೂರ್ಣ ನಾಶವಾಯಿತು. ಅಬ್ದುಲ್ ಅವರ ಅಂಗಡಿಗೆ ತಾಗಿ ಕೊಂಡಿದ್ದ ಹನೀಫ್ ಎಂಬವರ ಫ್ರುಟ್ಸ್ ಅಂಗಡಿ ಕೂಡಾ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಾಗಶಃ ಭಸ್ಮವಾಗಿದೆ. ಘಟನೆಯಿಂದ ಅಬ್ದುಲ್ ಅಜೀಜ್ ಅವರಿಗೆ ಸುಮಾರು 70 ಸಾವಿರ ರೂ, ನಷ್ಟ ಸಂಭವಿಸಿದೆ. ವಿಟ್ಲ ಪೊಲೀಸರು ದುಷ್ಕರ್ಮಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

