ಕಿನ್ನಿಗೋಳಿ: ನೂತನ ವಾರ್ತಾ ಅಂತರ್ಜಾಲ ತಾಣ ಈ ಭೂಮಿ ಡಾಟ್ ಕಾಂ ಅನ್ನು ಸೋಮವಾರ ಕೊಲ್ಲೂರು ಮೂಕಾಂಬಿಕಾ ದೇವಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಂಜೆ ಕೊಡಚಾದ್ರಿ ಬೆಟ್ಟದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಕೇಮಾರು ಈಶ ವಿಠಲದಾಸ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
`ನೂತನ ವಾರ್ತಾ ಅಂತರ್ಜಾಲ ತಾಣ `ಈ ಭೂಮಿ’ ಬಹಳಷ್ಟು ವಿಶೇಷತೆಗಳಿಂದ ಕೂಡಿದ್ದು ಜನರಿಗೆ ಅದರಲ್ಲೂ ಇಂದಿನ ಯುವಪೀಳಿಗೆಗೆ ಅಗತ್ಯವೆನಿಸಿದ ಮಾಹಿತಿ, ಸುದ್ದಿಯನ್ನು ನೀಡುವಲ್ಲಿ ಮುಂದಾಗಿದೆ. ಅಂತರ್ಜಾಲ ತಾಣಗಳು ಮತಾಂಧತೆ, ರಾಜಕೀಯವನ್ನು ತೋರ್ಪಡಿಸುತ್ತಿರುವ ಈ ಘಳಿಗೆಯಲ್ಲಿ ಇಂಥ ಸದುದ್ದೇಶ ಹೊಂದಿರುವ ವಾರ್ತಾ ಅಂತರ್ಜಾಲ ತಾಣ ಸಮಾಜಕ್ಕೆ ಅವಶ್ಯಕ’ ಎಂದು ಕೇಮಾರು ಶ್ರೀಗಳು ಈ ಸಂದರ್ಭದಲ್ಲಿ ನುಡಿದರು.
`ಈ ಭೂಮಿ ವಾರ್ತಾ ಅಂತರ್ಜಾಲ ತಾಣ ಸತ್ಯ ಹಾಗೂ ಪ್ರಕೃತಿ ಎನ್ನುವ ತಳಹದಿಯ ಮೇಲೆ ನಿಂತಿದ್ದು ವಿಶೇಷವಾಗಿ ರೂಪುಗೊಂಡಿದೆ. ಯುವಪ್ರತಿಭೆಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ವಿವಿಧ ಕಾಲಂಗಳನ್ನು ಯುವಜನರಿಂದಲೇ ಬರೆಸುವ ಮೂಲಕ ಬರವಣಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದೆ’ ಎಂದು ವಾರ್ತಾ ಅಂತರ್ಜಾಲ ತಾಣದ ಪ್ರಧಾನ ಸಂಪಾದಕ ಶಶಿಧರ ಬಂಗೇರ ಬೆಳ್ಳಾಯರು ಹೇಳಿದರು. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಕ್ಷೇತ್ರ, ನಿತ್ಯಾನಂದ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕೊಲ್ಲೂರು ಹಾಗೂ ಕೊಡಚಾದ್ರಿ ಬೆಟ್ಟದ ಸೌಪರ್ಣಿಕಾ ನದಿ ಉಗಮಸ್ಥಾನ ಚಿತ್ರಮೂಲದಲ್ಲಿ ವೆಬ್‍ಸೈಟ್ ಅನ್ನು ಸಮಾಜಕ್ಕೆ ಅರ್ಪಿಸಲಾಯಿತು.
ಈ ಸಂದರ್ಭ ಕೊಲ್ಲೂರು ದೇವಳದ ಮೊಕ್ತೇಸರ ಕೃಷ್ಣಪ್ರಸಾದ್ ಅಡ್ಯಂತಾಯ, ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಕೆ.ಕೆ.ಸಾಬು, ಪರಶುರಾಮ ಸೇನೆ ಅಧ್ಯಕ್ಷ ಹರೀಶ್ ತೋಳಾರ್, ವಿಶ್ವಾಸ್ ಭಟ್, ನಾಗೇಂದ್ರ ಕೊಡಚಾದ್ರಿ ಹಾಗೂ `ಆರೋಹಿ’ ಚಾರಣ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

