ಸುದ್ದಿ9 ನಡೆದು ಬಂದ ಹಾದಿ….
ನಿಮ್ಮ ನೆಚ್ಚಿನ ಸುದ್ದಿ9 ವೆಬ್ ತಾಣ ಒಂದು ವರ್ಷದ ಹೊಸ್ತಿಲಲ್ಲಿ ಬಂದು ನಿಂತಿದೆ. ಈ ಒಂದು ವರ್ಷದ ಅವಧಿಯಲ್ಲಿ ಸುದ್ದಿ9 ಸಾಧಿಸಿದ್ದು ಅಪಾರ. ಅಂತರ್ಜಾಲ ಸುದ್ದಿವಾಹಿನಿ ಆರಂಭಿಸುತ್ತೇವೆ ಎಂದಾಗಲೇ ಹಲವರಿಂದ ಮುಕ್ತ ಮನಸ್ಸಿನ ಬೆಂಬಲ ವ್ಯಕ್ತವಾಯಿತು. ವಿದೇಶದಿಂದಲೂ ಅನೇಕ ಮಂದಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.ಅದಕ್ಕಿಂತಲೂ ಮುಖ್ಯವಾಗಿ ಎಲ್ಲಾ ಧರ್ಮದ ಧಾರ್ಮಿಕ ಮುಖಂಡರು ಬೆಂಬಲ ವ್ಯಕ್ತಪಡಿಸಿದರು. ಇವರೆಲ್ಲರ ಆಶೀರ್ವಾದಿಂದ ಸುದ್ದಿ9 ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು.
ಕಳೆದ ವರ್ಷ ಜನವರಿ 14, 2014ರ ಮಕರ ಸಂಕ್ರಮಣದಂದು ಸುದ್ದಿ9 ವೆಬ್ ಸೈಟ್ ಗೆ ಪೊಳಲಿಯ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ರಾಜೇಶ್ ಪೈ ಅವರು ಅಧಿಕೃತ ಚಾಲನೆ ನೀಡಿದರು. ಅಲ್ಲಿಂದ ಒಂದು ವರ್ಷದ ಅವಧಿಯಲ್ಲಿ ಸುದ್ದಿ9 ಓದುಗರ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಯಿತು. ಇದೀಗ ಪ್ರತೀ ದಿನ 10 ಸಾವಿರಕ್ಕೂ ಹೆಚ್ಚು ಮಂದಿ ಮೊಬೈಲ್, ಕಂಪ್ಯೂಟರ್ಗಳ ಮೂಲಕ ನಮ್ಮೂರ ಸುದ್ದಿಗಳನ್ನು ಸುದ್ದಿ9 ಮೂಲಕ ಓದುತ್ತಿದ್ದಾರೆ.
ಸುದ್ದಿ9ನಲ್ಲಿ ಬರುವ ಸುದ್ದಿಗೆ ಜನರು ಸತ್ಯದ ಮುದ್ರೆ ಇರುವುದರಿಂದ ಜನರು ನಂಬುತ್ತಾರೆ. ಅಲ್ಲದೆ ಹಲವಾರು ಸುದ್ದಿಗಳನ್ನು ಉತ್ಸಾಹದಿಂದ ವಾಟ್ಸ್ಅಪ್, ಫೇಸ್ಬುಕ್ ಗಳಲ್ಲಿ ಶೇರ್ ಮಾಡಿದ್ದಾರೆ. ಕೆಲವೊಂದು ಪ್ರಮುಖ ಸುದ್ದಿಗಳು ಲಕ್ಷಾಂತರ ಹಿಟ್ಸ್ ಗಳನ್ನು ಕಂಡಿದೆ. ಅಂತರ್ಜಾಲ ಸುದ್ದಿತಾಣವೆಂದರೆ ಅದರಲ್ಲಿ ಕೇವಲ ಸುದ್ದಿಗಳು ಮಾತ್ರ ಬರುತ್ತಿವೆ ಎಂಬ ಸ್ವಘೋಷಿತ ನಿಯಮವೊಂದು ಇತ್ತು. ಆದರೆ ಅದನ್ನು ತೊಡೆದು ಹಾಕಿರುವ ಸುದ್ದಿ9 ನುಡಿಚಿತ್ರ, ಸಮಸ್ಯೆ, ಮಾನಸಿಕ ಸ್ಥಿತಿಗತಿ ಮುಂತಾದುವುಗಳ ಬಗ್ಗೆ ಪ್ರಸ್ತಾಪಿಸಿದ್ದರಿಂದ ಅಂತರ್ಜಾಲ ಮಾಧ್ಯಮದ ದಿಕ್ಕನ್ನೇ ಬದಲಿಸಿತು.
ನಮ್ಮಲ್ಲಿ ಉತ್ತಮವಾದ ಟ್ರೆಕ್ಕಿಂಗ್ ಟೀಂ ಇರುವುದರಿಂದ ರಾಜ್ಯದ ಮಲೆನಾಡು ಭಾಗದ ಅನೇಕ ಸಮಸ್ಯೆಗಳನ್ನು ಚಿತ್ರ ಸಹಿತ ವರದಿ ಪ್ರಕಟಿಸಿರುವುದು ಸುದ್ದಿ9ನ ಹೆಗ್ಗಳಿಕೆ ಕಾರಣವಾಗಿದೆ. ಕೆಲವೊಂದು ಸುದ್ದಿಗಳನ್ನು ಹುಡುಕಿ ಹುಡುಕಿ, ಕೆದಕಿ ಕೆದಕಿ ಅದರ ಹಿಂದೆ ಬಿದ್ದಿರುವುದರಿಂದ ಅದರಿಂದ ಅನೇಕ ಸಂಚಲನ ಸೃಷ್ಟಿಯಾಗಿದೆ. ಇಂಥಾ ಸುದ್ದಿಗಳಿಂದ ಸುದ್ದಿ9 ವರದಿಗಾರರಿಗೆ ಬೆದರಿಕೆ ಕರೆ ಬಂದಿದ್ದೂ ಇದೆ. ಆದರೆ ನಮ್ಮದು ಸತ್ಯದ ಪರ ಆಗಿದ್ದರಿಂದ ನಾವ್ಯಾರಿಗೂ ಹೆದರಿಲ್ಲ, ನಾವು ಪತ್ರಿಕಾ ಧರ್ಮವನ್ನು ಪಾಲಿಸುವುದರಿಂದ ಸುದ್ದಿ9ಗೆ ಅಂಥಾ ಯಾವುದೇ ಭಯವಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆವು.
ಸುದ್ದಿ9 ವೆಬ್ ಸೈಟ್ ಆರಂಭಿಸಿದ್ದು ನಾವು ಪ್ರತಿಕೋದ್ಯಮದ ಅನುಭವದಿಂದಲ್ಲ, ಬದಲಿಗೆ ಪತ್ರಿಕೋದ್ಯಮದ ಆಸಕ್ತಿಯಿಂದ. ಸ್ವಂತ ಆಸಕ್ತಿಯಿಂದ ಪ್ರತಿಭೆಗಳನ್ನು ಕ್ರೋಢೀಕರಿಸಿ ಸುದ್ದಿತಾಣ ಆರಂಭಿಸಿರುವುದು ಸುದ್ದಿ9ನ ಹೆಗ್ಗಳಿಕೆ. ಸುದ್ದಿ9 ಒಂದು ವರ್ಷದಲ್ಲಿ ಮಾಡಿರುವ ಸಾಧನೆಯ ಬಗ್ಗೆ ನಮಗೆ ತೃಪ್ತಿ ಇದೆ, ಹೆಮ್ಮೆ ಇದೆ. ಇದೆಲ್ಲಾ ನಮ್ಮ ಪ್ರೀತಿಯ ಜನರಿಂದ ಮಾತ್ರ ಸಾಧ್ಯವಾಗಿದ್ದು. ಅವರ ಪ್ರೋತ್ಸಾಹದಿಂದಲೇ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಯಿತು. ಏರಬೇಕಾದ ದಾರಿಯನ್ನು ಇನ್ನೂ ಕ್ರಮಿಸಿಲ್ಲ ಎಂಬ ಅರಿವು ನಮಗಿದೆ. ಒಂದೊಂದೇ ಹೆಜ್ಜೆಗಳನ್ನು ಏರುತ್ತಾ ಏರುತ್ತಾ ನಾವು ಸಾಧಿಸುವುದನು ಸಾಧಿಸಿಯೇ ತೋರುತ್ತೇವೆ.
ಫಲಾಪೇಕ್ಷೆ ಇಲ್ಲದೆ ನಮ್ಮ ಜೊತೆಯಲ್ಲಿರುವ ಪತ್ರಕರ್ತ ಸಮುದಾಯದಿಂದ ಆ ಮೇರು ಎತ್ತರವನ್ನು ಏರುತ್ತೇವೆ ಎಂಬ ಧೈರ್ಯದಿಂದ ನಾವು ಈ ಮಾತನ್ನು ಹೇಳುತ್ತಿದ್ದೇವೆ. ಸುದ್ದಿ9ನಲ್ಲಿ ಹಲವು ಲೋಪದೋಷಗಳಿವೆ ಎಂಬುದು ನಮ್ಮ ಗಮನದಲ್ಲಿದೆ. ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಓದುಗ ಪ್ರಭುಗಳಾದ ನಿಮ್ಮ ಅಮೂಲ್ಯ ಸಲಹೆಸೂಚನೆಗಳಿಗೆ ಸದಾ ಸ್ವಾಗತವಿದೆ.
ಸುದ್ದಿ9 ಯಾವ ರೀತಿ ಇದ್ದರೆ ಚೆನ್ನ ಎಂದು ನಿಮಗನಿಸಿದರೆ ಅದನ್ನು ನೀವು ನಮ್ಮಲ್ಲಿ ತಿಳಿಸಬಹುದು. ಈ ವರ್ಷದಿಂದ ಸುದ್ದಿ9 ಹೊಸ ಹೊಸ ಅಂಕಣಗಳೊಂದಿಗೆ, ಹೊಸ ಹೊಸ ವಿಚಾರಗಳೊಂದಿಗೆ ನಿಮ್ಮ ಮುಂದೆ ಬರಲಿದೆ. ನಿಮ್ಮ ಪ್ರೀತಿ ಸದಾ ನಮ್ಮ ಜೊತೆ ಇರಲಿ…. ಎಲ್ಲರಿಗೂ ನಾವು ನಂಬಿಕೊಂಡು ಬಂದಿರುವ ದೇವರು ಸನ್ಮಂಗಳವನ್ನುಂಟು ಮಾಡಲಿ ಎಂದು ಹಾರೈಸುತ್ತಾ…. ನಿಮಗೆ ಮಕರ ಸಂಕ್ರಮಣದ ಶುಭಾಷಯಗಳು. –
ಟೀಂ ಸುದ್ದಿ9

