ಮೂಡುಬಿದರೆ: ಕೇಂದ್ರ ಸರ್ಕಾರ ಬೃಹತ್ ಉದ್ದಿಮೆ ಸ್ಥಾಪನೆ ಕುರಿತಂತೆ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ರೈತರ ಅನುಮತಿ ಹಾಗೂ ಪರಿಸರ ಅಧ್ಯಯನ ಅನಗತ್ಯ ಎಂಬ ಕೇಂದ್ರ ಸರ್ಕಾರ ಉದ್ದೇಶಿಸಿರುವ ಭೂಸ್ವಾಧೀನ ಆಧ್ಯಾದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿ ಸಮಿತಿಯಾದ ಮಾತೃಭೂಮಿ ಸಂರಕ್ಷಣಾ ಸಮಿತಿ, ಈ ಕುರಿತು ರಾಷ್ಟ್ರಪತಿ ಮಧ್ಯಪ್ರವೇಶಿಸಿ ಆಧ್ಯಾದೇಶ ತಡೆಗೆ ಸಹಕರಿಸುವಂತೆ ಮನವಿ ಮಾಡಿದೆ ಎಂದು ಸಮಿತಿ ಸಂಚಾಲಕ ಕಿರಣ್ ಮಂಜನಬೈಲು ತಿಳಿಸಿದ್ದಾರೆ.
ಶುಕ್ರವಾರ ನಡೆದ ಸಮಿತಿ ತುರ್ತು ಸಭೆಯಲ್ಲಿ ಈ ನಿರ್ಣಯ ತಳೆಯಲಾಗಿದ್ದು, ಕೂಡಲೇ ಆಧ್ಯಾದೇಶ ತಡೆಯುವಂತೆ ಮನವಿಯನ್ನು ರಾಷ್ಟ್ರಪತಿಗೆ ಸಲ್ಲಿಸಲು ನಿರ್ಧರಿಸಲಾಯಿತು. ಮೋದಿ ಸಂಪುಟ ನಿರ್ಧರಿಸಿದ ಆಧ್ಯಾದೇಶ ರೈತ ವಿರೋಧಿ ಮತ್ತು ಪರಿಸರ ಮಾರಕವಾಗಿದ್ದು, ಸರ್ಕಾರ ಉದ್ಯಮಿಗಳ ಪರವಾಗಿದೆಯೇ ಎಂಬ ಸಂದೇಹ ಕಾಡುತ್ತಿದೆ. ರೈತರ ರಕ್ಷಣೆ ಮತ್ತು ಪರಿಸರ ಪಾಲನೆ ಬಗ್ಗೆ ಮಾತನಾಡುತ್ತಿದ್ದವರು ಆಧ್ಯಾದೇಶ ಜಾರಿಗೆ ತರುವ ಅವಸರದಲ್ಲಿ ತಮ್ಮ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿದ್ದಾರೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಸಭೆಯಲ್ಲಿ ಸಮಿತಿ ಅಧ್ಯಕ್ಷ ಅಲ್ಫೋನ್ಸ್ ಡಿ’ಸೋಜಾ, ಕಾರ್ಯಾಧ್ಯಕ್ಷ ಪೂವಪ್ಪ ಗೌಡ, ಕಾರ್ಯದಶರ್ಿ ವಿನೋಧರ ಸುವರ್ಣ, ಉಪಾಧ್ಯಕ್ಷ ಸ್ಟ್ಯಾನಿ ಡಿ’ಸೋಜಾ, ಕಲ್ಲಮುಂಡ್ಕೂರು ಗ್ರಾ. ಪಂ. ಅಧ್ಯಕ್ಷ ಜೋಕಿಂ ಕೊರೆಯ, ಗ್ರಾ. ಪಂ. ಸದಸ್ಯ ರಾಮ ಗೌಡ, ನಿಡ್ಡೋಡಿ ಬಿಲ್ಲವ ಸಂಘ ಅಧ್ಯಕ್ಷ ಜಯ ಪೂಜಾರಿ, ಪ್ರಗತಿಪರ ಕೃಷಿಕ ರಾಮ ಸುವರ್ಣ, ಕಲ್ಲಮುಂಡ್ಕೂರು ಬಿಲ್ಲವ ಸಂಘ ಅಧ್ಯಕ್ಷ ಗಂಗಾಧರ ಪೂಜಾರಿ, ಸಮಿತಿ ಸದಸ್ಯರಾದ ವರದರಾಯ ಕಾಮತ್, ಮಾಧವ ಗೌಡ, ಶಾಂಭವಿ ಶೆಟ್ಟಿ ಮೊದಲಾದವರಿದ್ದರು.
