ಸುದ್ದಿ9 ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬಸ್ನಿಲ್ದಾಣ ಬಳಿ ವಾಣಿಜ್ಯ ಸಂಕೀರ್ಣವೊಂದರಲ್ಲಿ ನ್ಯೂ ಸೆಲೆಕ್ಷನ್ ಗಾರ್ಮೆಂಟ್ಸ್ ಎಂಬ ವಸ್ತ್ರ ಮಳಿಗೆಯಲ್ಲಿ ಬುಧವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಇದೊಂದು ಕಿಡಿಗೇಡಿಗಳ ಕೃತ್ಯ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ವಾಸುದೇವ ಪ್ಲಾಝಾ ವಾಣಿಜ್ಯ ಸಂಕೀರ್ಣದಲ್ಲಿರುವ ವಸ್ತ್ರಮಳಿಗೆಗೆ ಬುಧವಾರ ಸಂಜೆ ಎಂದಿನಂತೆ ಶಟರ್ ಬಾಗಿಲು ಹಾಕಿ ಮಾಲೀಕರು ಮತ್ತು ಕಾರ್ಮಿಕರು ಮನೆಗೆ ತೆರಳಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ.
ಅಂಗಡಿ ಎದುರಿನ ಶಟರ್ ಪಕ್ಕದಲ್ಲಿದ್ದ ಕಾಲೊರೆಸುವ ಮ್ಯಾಟ್ಗೆ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟಿರುವುದು ಪತ್ತೆಯಾಗಿದ್ದು, ಇದರಿಂದಾಗಿ ವಸ್ತ್ರಮಳಿಗೆ ಒಳಗೆ ದಟ್ಟವಾದ ಹೊಗೆಯಿಂದ ಲಕ್ಷಾಂತರ ಮೌಲ್ಯದ ವಸ್ತ್ರ ಹಾನಿಗೀಡಾಗಿದೆ ಎಂದು ಆರೋಪಿಸಲಾಗಿದೆ.
ಮಂಗಳೂರು ತಾಲ್ಲೂಕಿನ ಜೆಪ್ಪು ನಿವಾಸಿ ದಿ. ಅಬ್ದುಲ್ ಲತೀಫ್ ಎಂಬವರ ಪತ್ನಿ ಮುಮ್ತಾಝ್ ಪರವಾನಿಗೆ ಹೊಂದಿರುವ ಈ ಅಂಗಡಿಯಲ್ಲಿ ಬಡಕಬೈಲು ನಿವಾಸಿ ಅಬ್ದುಲ್ ಲತೀಫ್ ಮತ್ತು ಕಣ್ಣೂರು ನಿವಾಸಿ ಮುಹಮ್ಮದ್ ನಝೀರ್ ಎಂಬವರು ಜವುಳಿ ವ್ಯಾಪಾರ ನಡೆಸುತ್ತಿದ್ದಾರೆ. ಬಂಟ್ವಾಳ ನಗರ ಪೊಲೀಸರು ಧಾವಿಸಿ ಬೆಂಕಿ ನಂದಿಸಿದ ಪರಿಣಾಮ ಇತರ ಅಂಗಡಿಗಳಿಗೆ ಬೆಂಕಿ ಹರಡಿಲ್ಲ ಎಂದು ತಿಳಿಸಿದ್ದಾರೆ.

