ಸುದ್ದಿ9 ಬಂಟ್ವಾಳ : ಒಂದೆಡೆ ನಾಡಿಗೆ ಬರುತ್ತಿರುವ ಕಾಡುಪ್ರಾಣಿಗಳೆಲ್ಲಾ ಜನರ ನೆಮ್ಮದಿ ಕೆಡಿಸುತ್ತಿರುವುದರ ನಡುವೆಯೇ ಅರಣ್ಯ ಸಚಿವ ಬಿ.ರಮಾನಾಥ ರೈಯವರ ಸ್ವಗ್ರಾಮ ಕಳ್ಳಿಗೆಯ ಪಕ್ಕದಲ್ಲಿರುವ ಆರೋಗ್ಯ ಸಚಿವ ಯು.ಟಿ.ಖಾದರ್ ಕ್ಷೇತ್ರದ ಕೊಡ್ಮಾಣ್ ಗ್ರಾಮಸ್ಥರಿಗೆ ಈಗ ಚಿರತೆಯದ್ದೇ ಚಿಂತೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿ ನಾಲ್ಕುತಿಂಗಳು ಕಳೆದಿದೆ, ಒಮ್ಮೆ ಬಂದು ಗೂಡು ತರುತ್ತೇವೆ ಎಂದು ವಾಪಾಸು ತೆರಳಿದ ಅರಣ್ಯ ಇಲಾಖಾಧಿಕಾರಿಗಳು ವಾಪಾಸು ಬಂದಿಲ್ಲ ಎನ್ನುವುದು ಇಲ್ಲಿನ ಗ್ರಾಮಸ್ಥರ ಆರೋಪ.
ಕಳೆದ ಮೂರು ತಿಂಗಳಿನಿಂದ ಗ್ರಾಮದ ಬೇರೆ ಬೇರೆ ಕಡೆಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಚಿರತೆ ನಾಗರೀಕರನ್ನು ಆತಂಕಕ್ಕೆ ತಳ್ಳಿದೆ. ಕೆಲ ದಿನಗಳ ಹಿಂದೆ ಹಟ್ಟಿಯೊಂದಕ್ಕೆ ನುಗ್ಗಿದ್ದ ಚಿರತೆ ದನದ ಕರುವನ್ನು ಬಲಿತೆಗೆದುಕೊಂಡಿದ್ದರೆ, ಎರಡು ನಾಯಿಗಳನ್ನು ಬೇರೆ ಬೇರೆ ದಿನದಲ್ಲಿ ತಿಂದು ಹಾಕಿದೆ, ಬುಧವಾರ ವಷ್ಟೇ ಇಲ್ಲಿನ ಸುರೇಶ್ ಎಂಬವರ ಮನೆಯ ಪಕ್ಕದಲ್ಲಿದ್ದ ಕೋಳಿಗೂಡಿನಿಂದ ಕೋಳಿಗಳನ್ನು ತಿಂದು ಹಾಕಿದೆ.
ಕೊಡ್ಮಾಣ್ನ ಕೊಡಂಗೆ ಎಂಬಲ್ಲಿ ಕಾಣಿಸಿಕೊಂಡಿರುವ ಚಿರತೆ ನಾಯಿ ಯಷ್ಟು ದೊಡ್ಡದಾಗಿತ್ತು ಎಂದು ಕೆಲವರು ಹೇಳಿದರೆ, ಮೂರು ತಿಂಗಳ ಹಿಂದೆ ಹುಲಿ ಕಾಣಿಸಿಕೊಂಡಿತ್ತು ಎನ್ನುತ್ತಾರೆ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸದೇ ಇರುವುದು ಗ್ರಾಮಸ್ಥರ ನಿದ್ದೆಗಡಿಸಿದೆ. ಇಲ್ಲಿನ 10 ಎಕ್ರೆ ಯಷ್ಟು ಜಮೀನಿನಲ್ಲಿದ್ದ ಮರ ಗಳನ್ನು ಕಡಿದು ಹಾಕಿದ ಬಳಿಕದಿಂದ ಇಲ್ಲಿ ಚಿರತೆ ಕಾಟ ಎದುರಾಗಿದ್ದು, ಗ್ರಾಮಸ್ಥರು ಭಯದಿಂದಲೇ ದಿನದೂಡಬೇಕಾಗಿದೆ. ಚಿರತೆಯನ್ನು ಕಣ್ಣಾರೆ ಕಂಡಿರುವ ನಾಗೇಶ್ ಎಂಬವರು ಹೇಳುವಂತೆ, ರಾತ್ರಿ ಬೈಕಿನಲ್ಲಿ ಹೋಗುವಾಗ ರಸ್ತೆ ಬದಿಯಲ್ಲಿ ಚಿರತೆ ನೋಡಿದೆ, ಬೈಕಿನ ಬೆಳಕಿಗೆ ಅದು ಓಡಿಹೋಯಿತು ಎನ್ನುತ್ತಾರೆ.
ಈಗಾಗಲೇ ಕೊಡ್ಮಾಣ್ ಗ್ರಾಮದಲ್ಲಿ ತನ್ನ ಕಾರುಬಾರು ತೋರಿಸಿರುವ ಚಿರತೆ, ಇಲ್ಲಿನ ಸೀತಾ ಹಾಗೂ ಜೋಸೆಫ್ ಎಂಬವರ ಮನೆಯಿಂದ ನಾಯಿಗಳನ್ನು ತಿಂದು ಹಾಕಿದೆ, ಅರ್ಬಿ ಎಂಬಲ್ಲಿನ ಸುರೇಶ್ ಎಂಬವರ ಮನೆಯಿಂದ ಕೋಳಿಗಳನ್ನು ಬಲಿತೆಗೆದುಕೊಂಡಿದ್ದು, ಪಾರ್ವತಿ ಶೆಟ್ಟಿಯವರ ಮನೆಯಿಂದ ದನದ ಕರುವನ್ನು ತಿಂದು ಹಾಕಿದೆ. ನಾಲ್ಕುತಿಂಗಳ ಹಿಂದೆ ಇಲ್ಲಿನ ಲೆತಿಸಿಯಾ ಎಂಬವರ ಮನೆಯಿಂದ ಸಾಕುನಾಯಿಯನ್ನು ತಿಂದು ಹಾಖಿದ್ದ ಸಂದರ್ಭದಲ್ಲಿ ಮನೆಮಂದಿ ಅರಣ್ಯ ಇಲಾಖೆಗೆ ದೂರು ನೀಡಿದ್ದರು, ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬಂದು, ಗೂಡು ತರುತ್ತೇವೆಂದು ಹೋದವರು ಆ ಬಳಿಕ ಕೊಡ್ಮಾಣ್ ನತ್ತ ಮುಖಮಾಡಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ತಕ್ಷಣ ಗಮನ ಹರಿಸಿ, ಕೊಡ್ಮಾಣ್ ನಲ್ಲಿರುವುದು ಚಿರತೆಯೋ-ಹುಲಿಯೋ ಎಂಬುದನ್ನು ಪತ್ತೆ ಹಚ್ಚಿ, ಗ್ರಾಮಸ್ಥರಿಗೆ ರಕ್ಷಣೆ ಕೊಡಬೇಕೆನ್ನುವುದು ಗ್ರಾಮಸ್ಥರ ಆಗ್ರಹ.
