ಉಡುಪಿ: ಕಳೆದೆರಡು ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರಕಾರವು ದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ ಪರಿಣಾಮ ರಕ್ಷಣಾ ವಿಭಾಗವೂ ಸೇರಿದಂತೆ ವಿವಿಧ ಇಲಾಖೆಗಳ ಸ್ಥಿತಿ ಆತಂಕಕಾರಿಯಾಗಿದೆಯಾದರೂ ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿಯ ವೇಗ ಹೆಚ್ಚುತ್ತಿದ್ದು, ರಾಜಕೀಯ ಬದಲಾವಣೆಯು ಅನುಭವಕ್ಕೆ ಬರುತ್ತಿದೆ” ಎಂದು ಉಡುಪಿ ಸಾಂಸದೆ ಕು| ಶೋಭಾ ಕರಂದ್ಲಾಜೆಯವರು ಹೇಳಿದರು.

ಅವರು ದಿನಾಂಕ 30.12.2014ರಂದು ಜಗನ್ನಾಥರಾವ್ ಜೋಷಿ ಸೌಧ, ಮಂಗಳೂರು ಇಲ್ಲಿ ಜರಗಿದ ಭಾರತೀಯ ಜನತಾ ಪಾರ್ಟಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಸದಸ್ಯತಾ ಅಭಿಯಾನದ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಸ್ತೂರಿ ರಂಗನ್ ವರದಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದೊಂದಿಗೆ ಕರ್ನಾಟಕ ರಾಜ್ಯ ಸರಕಾರವು ವ್ಯವಹರಿಸಬೇಕಾಗಿದ್ದು, ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ. ವರದಿಯ ಗುಣಾವಗುಣಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಸಾಮಾನ್ಯ ಜ್ಞಾನದ ಕೊರತೆಯಿದ್ದು, ಸಂತ್ರಸ್ತರ ಸಮಸ್ಯೆಯ ಬಗ್ಗೆ ಉದಾಸೀನತೆ ತೋರ್ಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಪ್ರಧಾನಿಯವರನ್ನು ಭೇಟಿಯಾಗಲು ರಾಜ್ಯದ ಸಂಸದರು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಬಿ.ಎಲ್ ಸಂತೋಷ್ ಸಂಘಟನಾ ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಮುಂಬರುವ ಜನವರಿ 24 ಮತ್ತು 25 ರಂದು ಸದಸ್ಯತ್ವ ಮಹಾ ಅಭಿಯಾನ (ಮೊದಲ ಹಂತ) ಕ್ಕೆ ಕರೆ ನೀಡಲಾಗಿದ್ದು, ಆ ಸಮಯದಲ್ಲಿ ಮನೆ ಮನೆ ಭೇಟಿ ನೀಡಿ ಸದಸ್ಯತ್ವವನ್ನು ನೊಂದಾಯಿಸಬೇಕೆಂದೂ, ಪ್ರತೀ ಸಕ್ರಿಯ ಪ್ರಮುಖ ಕಾರ್ಯಕರ್ತರ ಮನೆಯಲ್ಲಿ ಭಾರತ ಮಾತಾ ಪೂಜನಾ ಕಾರ್ಯಕ್ರಮವನ್ನು ಜನವರಿ 26 ರಂದೇ ನಡೆಸಬೇಕೆಂದು ಸೂಚಿಸಿದರು. ಸಕ್ರಿಯ ಕಾರ್ಯಕರ್ತರ ಸಮಾವೇಶವನ್ನು ಎಲ್ಲಾ ಮಂಡಲ ಮಟ್ಟದಲ್ಲಿ ಜನವರಿ 14ರೊಳಗೆ ನಡೆಸುವುದೆಂದು ನಿರ್ಧರಿಸಲಾಯಿತು.

ಸಾಂಸದ ಶ್ರೀ ನಳಿನ್ ಕುಮಾರ್ ಕಟೀಲು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉಭಯ ಜಿಲ್ಲೆಗಳ ಪಕ್ಷದ ಅಧ್ಯಕ್ಷರಾದ ಶ್ರೀ ಕೆ.ಪ್ರತಾಪಸಿಂಹ ನಾಯಕ್ ಮತ್ತು ಶ್ರೀ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರಾಜ್ಯ ಉಪಾಧ್ಯಕ್ಷ/ಶಾಸಕ ಸುನೀಲ್ ಕುಮಾರ್ ವೇದಿಕೆಯಲ್ಲಿದ್ದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ಯಾಮಲ ಕುಂದರ್, ಉಭಯ ಜಿಲ್ಲೆಗಳ ಸದಸ್ಯತಾ ಅಭಿಯಾನದ ಪ್ರಮುಖರಾದ ಸಂಜೀವ ಮಠಂದೂರು ಮತ್ತು ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಭಾರಿ ಲಾಲಾಜಿ ಮೆಂಡನ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಜೆ.ಕೃಷ್ಣಪಾಲೆಮಾರ್, ಎನ್.ಯೋಗೀಶ್ ಭಟ್, ನಾಗರಾಜ ಶೆಟ್ಟಿ, ರಘುಪತಿ ಭಟ್, ಎ.ರುಕ್ಮಯ್ಯ ಪೂಜಾರಿ, ಕೆ.ಜಯರಾಮ ಶೆಟ್ಟಿ, ಮಲ್ಲಿಕಾ ಪ್ರಸಾದ್, ಕೆ.ಪದ್ಮನಾಭ ಕೊಟ್ಟಾರಿ, ಕೆ.ಮೋನಪ್ಪ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಶ್ರೀ ಬಿ. ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
